fbpx
ಸಮಾಚಾರ

ಮಂಗಳಮುಖಿಯರ ಮನೆ ನಿರ್ಮಾಣಕ್ಕಾಗಿ 1.5 ಕೋಟಿ ರೂ ದಾನ ಕೊಟ್ಟ ಅಕ್ಷಯ್ ಕುಮಾರ್! ‘ದೇವರು’ ಎಂದ ರಾಘವ್​ ಲಾರೆನ್ಸ್

ಥರ ಥರದ ಪಾತ್ರಗಳ ಮೂಲಕ, ಮನೋಜ್ಞ ಅಭಿನಯದ ಮೂಲಕ ಪ್ರಪಂಚದಾದ್ಯಂತ ಪ್ರೇಕ್ಷಕರ ಮನದಲ್ಲಿ ಅಚ್ಚರಿಯ ಮುದ್ರೆ ಒತ್ತಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಇದೀಗ ಹೃದಯ ವೈಶಾಲ್ಯತೆ ತೋರುವ ಮೂಲಕ ಮನುಷ್ಯತ್ವ ಮೆರೆದಿದ್ದಾರೆ. ಅಕ್ಷಯ್‌ ಕುಮಾರ್‌, ತೃತೀಯ ಲಿಂಗಿಗಳ ಸುಮುದಾಯಕ್ಕೆ ಮನೆಗಳನ್ನು ನಿರ್ಮಿಸಿಕೊಡಲು 1.5 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಅವರು ಈ ಯೋಜನೆ ಕೈಗೊಂಡಿರುವ ‘ಲಕ್ಷ್ಮಿ ಬಾಂಬ್‌’ ನಿರ್ದೇಶಕ ರಾಘವ್‌ ಲಾರೆನ್ಸ್‌ರ ದತ್ತಿ ಸಂಸ್ಥೆಗೆ ಹಣ ನೀಡಿದ್ದಾರೆ. ಈ ಬಗ್ಗೆ ಸ್ವತಃ ರಾಘವ ಲಾರೆನ್ಸ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಅಕ್ಷಯ್ ಕುಮಾರ್, ತೃತೀಯಲಿಂಗಿಗಳಿಗೆ ಮನೆ ಕಟ್ಟಿಕೊಡಲು ಮುಂದಾಗಿದ್ದಾರೆ. ಲಾರೆನ್ಸ್ ಅವರು ಅಕ್ಷಯ್ ಕುಮಾರ್ ಅವರ ‘ಲಕ್ಷ್ಮೀ ಬಾಂಬ್’ ಸಿನಿಮಾಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಇದು ತಮಿಳಿನ ‘ಕಾಂಚನಾ’ ಸಿನಿಮಾದ ರಿಮೇಕ್. ರಾಘವ ಲಾರೆನ್ಸ್ “ನಾನು ಖುಷಿಯ ವಿಚಾರವನ್ನು ಹೇಳಿಕೊಳ್ಳಲು ತುಂಬ ಖುಷಿಪಡುತ್ತೇನೆ. ಭಾರತದಲ್ಲಿ ತೃತೀಯಲಿಂಗಿಗಳಿಗೆ ಮನೆ ಕಟ್ಟಿಕೊಡಲು ನಟ ಅಕ್ಷಯ್ ಕುಮಾರ್ 1.5 ಕೋಟಿ ರೂಪಾಯಿ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ” ಎಂದಿದ್ದಾರೆ.

 

 

ನಾನು ಸಿಹಿ ಸುದ್ದಿ ಹಂಚಿಕೊಳ್ಳಲು ಬಯಸುತ್ತೇನೆ. ಮಂಗಳಮುಖಿಯರಿಗಾಗಿ ಭಾರತದಲ್ಲಿ ಮೊದಲ ಬಾರಿಗೆ ಮನೆಯನ್ನು ನಿರ್ಮಿಸಲಾಗುತ್ತಿದೆ. ಇದಕ್ಕೆ ಅಕ್ಷಯ್ ಕುಮಾರ್ ಅವರು ಒಂದೂವರೆ ಕೋಟಿ ರೂ. ದಾನ ಮಾಡಿದ್ದಾರೆ. ಎಲ್ಲರಿಗೂ ಗೊತ್ತಿರುವ ಹಾಗೆ ಲಾರೆನ್ಸ್ ಚಾರಿಟೇಬಲ್ ಟ್ರಸ್ಟ್ ಎಜುಕೇಶನ್‍ನಲ್ಲಿ ಮಕ್ಕಳಿಗಾಗಿ ಮನೆ, ವೈದ್ಯಕೀಯ ಹಾಗೂ ಅಂಗವಿಕಲ ಡ್ಯಾನ್ಸರ್ಸ್‍ ಗೆ ವಿಭಿನ್ನ ಯೋಜನೆಗಳೊಂದಿಗೆ ತೊಡಗಿಸಿಕೊಂಡಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಈಗ ಈ ಟ್ರಸ್ಟ್‌ಗೆ 15 ವರ್ಷಗಳಾಗಿದ್ದು, ಇದನ್ನು ಸಂಭ್ರಮಿಸಲು ಮಂಗಳಮುಖಿಯರಿಗಾಗಿ ಮನೆ ಕಟ್ಟಿಸಲು ಹಣವನ್ನು ಸಂಗ್ರಹಿಸುತ್ತಿದ್ದೇವೆ.

ಲಕ್ಷ್ಮೀ ಬಾಂಬ್​​ ಸಿನಿಮಾ ಶೂಟಿಂಗ್​ ವೇಳೆ, ಲಾರೆನ್ಸ್ ಟ್ರಸ್ಟ್​​ನ​ ಯೋಜನೆಗಳು ಹಾಗೂ ಮಂಗಳಮುಖಿಯರಿಗೆ ಮನೆ ನಿರ್ಮಾಣ ಕುರಿತಾಗಿ ಅಕ್ಷಯ್​ ಕುಮಾರ್​ ಅವರೊಂದಿಗೆ ಮಾತಾಡಿದೆ. ಈ ವಿಷ್ಯ ಅಕ್ಷಯ್​ ಕುಮಾರ್ ಸರ್​ ಕೇಳಿದ್ದೇ ತಡ, ಮರು ಯೋಚಿಸದೇ ಮಂಗಳಮುಖಿಯರ ಮನೆ ನಿರ್ಮಾಣಕ್ಕೆ 1.5 ಕೋಟಿ ರೂಪಾಯಿ ದಾನವಾಗಿ ನೀಡಿದರು. ಯಾರು ಇತರರಿಗೆ ಸಹಾಯ ಮಾಡುತ್ತಾರೋ, ಅವರನ್ನ ನಾನು ದೇವರು ಎಂದೇ ಪರಿಗಣಿಸುತ್ತೇನೆ. ಈಗ ಅಕ್ಷಯ್ ಅವರು ನಮಗೆ ದೇವರಂತೆ. ಅವರ ಬೆಂಬಲಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ಎಲ್ಲಾ ಮಂಗಳಮುಖಿಯರ ಪರವಾಗಿ ನಾನು ಅಕ್ಷಯ್ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಅತಿ ಶೀಘ್ರದಲ್ಲೇ ಭೂಮಿ ಪೂಜೆ ಡೇಟ್ ಅನೌನ್ಸ್ ಮಾಡುತ್ತೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top