fbpx
ಸಮಾಚಾರ

ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಗೆ ಸಜ್ಜಾಗಿರುವ ವಿದ್ಯಾರ್ಥಿಗಳಿಗೆ ಸುರೇಶ್‌ಕುಮಾರ್ ಬಹಿರಂಗ ಪತ್ರ

ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪ‍ರೀಕ್ಷೆಗಳನ್ನು ಬರೆಯಲು ಸಿದ್ಧರಾಗುತ್ತಿರುವ ರಾಜ್ಯದ ವಿದ್ಯಾರ್ಥಿಗಳಿಗೆ ಶಿಕ್ಷಣ ಮಂತ್ರಿ ಸುರೇಶ ಕುಮಾರ್ ಅವರು ಬಹಿರಂಗ ಪತ್ರ ಬರೆದು, ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಮಕ್ಕಳೇ, ಮುಕ್ತವಾತಾವರಣದಲ್ಲಿ ಧೈರ್ಯವಾಗಿ ಪರೀಕ್ಷೆ ಬರೆಯಿರಿ,’ ಎಂದು ಸುರೇಶ್‌ ಕುಮಾರ್‌ ಸಲಹೆ ನೀಡಿದ್ದಾರೆ.

 

 

ಸುರೇಶ್‌ ಕುಮಾರ್‌ ಪೂರ್ಣ ಪತ್ರ ಇಲ್ಲಿದೆ
ಮಕ್ಕಳೇ, ಮುಕ್ತವಾತಾವರಣದಲ್ಲಿ ಧೈರ್ಯವಾಗಿ ಪರೀಕ್ಷೆ ಬರೆಯಿರಿ.

ಪಿಯುಸಿ ಮತ್ತು ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಇನ್ನೇನು ಇಷ್ಟರಲ್ಲೇ ಆರಂಭಗೊಳ್ಳಲಿವೆ. ನನ್ನ ಹೆಮ್ಮೆಯ ವಿದ್ಯಾರ್ಥಿಗಳಾದ ನೀವೆಲ್ಲಾ ಪರೀಕ್ಷೆಗೆ ಕೊನೆ ಹಂತದ ತಯಾರಿಯಲ್ಲಿ ತೊಡಗಿದ್ದು, ಪರೀಕ್ಷೆಗೆ ಗಂಭೀರವಾಗಿ ಸಿದ್ಧತೆ ಕೈಗೊಳ್ಳುತ್ತಿರುವುದನ್ನು ನಾನು ಗಮನಿಸುತ್ತಿದ್ದೇನೆ.

ಎಸ್‍ಎಲ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಗಳು ವಿದ್ಯಾರ್ಥಿ ಜೀವನದಲ್ಲಿ ಅತಿ ಪ್ರಮುಖ ಘಟ್ಟಗಳು. ಹಾಗಾಗಿ ನೀವೆಲ್ಲರೂ ಈ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಂದ ಉತ್ತೀರ್ಣರಾಗಬೇಕೆಂಬ ಮಹದಾಸೆ ಹೊಂದಿದ್ದೀರಿ. ಸರ್ಕಾರವೂ ಸಹ ನಿಮ್ಮೆಲ್ಲರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಪರೀಕ್ಷೆಗಳು ಸುಲಲಿತವಾಗಿ ನಡೆಯಲು ತೆಗೆದುಕೊಳ್ಳಬಹುದಾದ ಎಲ್ಲ ಕ್ರಮಗಳನ್ನು ಕೈಗೊಂಡಿದೆ, ಕೈಗೊಳ್ಳುತ್ತಿದೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಪರೀಕ್ಷೆಗಳು ನಡೆಸುವುದಕ್ಕೆ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡು ಜಾರಿಯಲ್ಲಿಡಲಾಗಿದೆ.

ಮಕ್ಕಳು ಯಾವುದೇ ರೀತಿಯಲ್ಲೂ ಭಯವಿಲ್ಲದ ವಾತಾವರಣದಲ್ಲಿ ಮುಕ್ತವಾಗಿ ಪರೀಕ್ಷೆಯನ್ನು ಬರೆಯುವ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಕುರಿತಂತೆ ವದಂತಿ ಹಬ್ಬಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಸೂಚನೆ‌ ನೀಡಲಾಗಿದೆ. ವಿದ್ಯಾರ್ಥಿಗಳಾದ ನೀವೇ ಈ ಪರೀಕ್ಷಾ ವ್ಯವಸ್ಥೆಯ ಮೂಲ ಫಲಾನುಭವಿಗಳು. ಪರೀಕ್ಷೆ ನಡೆಯುವುದು ನಿಮಗಾಗಿಯೇ. ಹಾಗಾಗಿ ನೀವು ಯಾವುದೇ ವದಂತಿಗೂ ಕಿವಿಗೊಡಬಾರದು ಹಾಗೆಯೇ ಇಂತಹ ಸಲ್ಲದ ವದಂತಿಗಳನ್ನು ಹರಡಲು ಮತ್ತು ಅದು ಕಿವಿಯಿಂದ ಕಿವಿಗೆ ದಾಟುವುದಕ್ಕೆ ಯಾವುದೇ ರೀತಿಯಲ್ಲೂ ಮೊದಲು ನೀವು ಅವಕಾಶ ಕೊಡಲೇಬಾರದು. ಪರೀಕ್ಷೆಗಳು ನಡೆಯುತ್ತಿರುವುದು ನಿಮಗಾಗಿ, ರಾಷ್ಟ್ರ ಹಿತಕ್ಕಾಗಿ ಎಂಬುದು ನಿಮಗೆಲ್ಲಾ ನೆನಪಿರಲಿ ಜ್ಞಾಪಕದಲ್ಲಿರಲಿ ಮಕ್ಕಳೇ.

ಪ್ರಶ್ನೆ ಪತ್ರಿಕೆಗಳು ನಿಮ್ಮ ಪರೀಕ್ಷಾ ಟೇಬಲ್‍ಗೆ ಸುರಕ್ಷಿತವಾಗಿ ತಲುಪುವುದಕ್ಕೆ ಎಲ್ಲ ಕ್ರಮಗಳು ಜಾರಿಯಲ್ಲಿವೆ. ಮುದ್ರಣಾಲಯದಿಂದ ಯಾವುದೇ ಚ್ಯುತಿ ಬಾರದಂತೆ ನೇರವಾಗಿ ನಿಮ್ಮ ಕೈಗೆ ಪ್ರಶ್ನೆ ಪತ್ರಿಕೆಗಳು ತಲುಪಲಿವೆ. ಅದಕ್ಕಾಗಿ ಪ್ರಶ್ನೆ ಪತ್ರಿಕೆ ಲೋಡ್ ಆಗುವುದರಿಂದ ಮತ್ತು ಆಯಾ ಜಿಲ್ಲಾ ಇಲ್ಲವೇ ಉಪವಿಭಾಗ/ತಾಲೂಕು ಖಜಾನೆಗೆ ತಲುಪುವುದರಿಂದ ಹಿಡಿದು ಅಲ್ಲಿ ಪ್ರಶ್ನೆ ಪತ್ರಿಕೆ ಸಂರಕ್ಷಣೆಗೆ ಮತ್ತು ಅಲ್ಲಿಂದ ಪರೀಕ್ಷಾ ಕೇಂದ್ರಗಳಿಗೆ ತಲುಪುವ ತನಕವೂ ರಾಜ್ಯಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ವಿಚಕ್ಷಣಾ ಮತ್ತು ಕಣ್ಗಾವಲು ವ್ಯವಸ್ಥೆ ನಿರಂತರವಾಗಿ ಜಾರಿಯಲ್ಲಿರುತ್ತದೆ. ನಿಮ್ಮ ಪ್ರಶ್ನೆ ಪತ್ರಿಕೆಗಳು ನಿರಂತರ 24 ಗಂಟೆಯೂ ಪೊಲೀಸ್ ಬಂದೋಬಸ್ತ್ ಮತ್ತು ಸಿಸಿ ಟಿವಿ ಕಣ್ಗಾವಲಿನಲ್ಲಿ ಸುರಕ್ಷಿತವಾಗಿರುತ್ತವಾದ್ದರಿಂದ ಆ ಕುರಿತು ಯಾವ ಆತಂಕವನ್ನೂ ಇಟ್ಟುಕೊಳ್ಳಬೇಡಿ.

ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದ್ದು, ಇದು ಪಾಸ್ ಏರಿಯಾ ಆಗಿರುವುದರಿಂದ ಹಾಲ್ ಟಿಕೇಟ್ ಹೊಂದಿದ ವಿದ್ಯಾರ್ಥಿಗಳು ಮತ್ತು ಪಾಸ್ ಹೊಂದಿದ ಪರೀಕ್ಷಾ ಸಿಬ್ಬಂದಿಗೆ ಮಾತ್ರವೇ ಇಲ್ಲಿ ಚಲನವಲನದ ಅವಕಾಶವಿರಲಿದೆ. ಮಾಧ್ಯಮ ಸೇರಿದಂತೆ ಯಾರೊಬ್ಬರೂ ಪರೀಕ್ಷೆ ಬರೆಯುವ ನಿಮ್ಮ ಏಕಾಗ್ರತೆಗೆ ಭಂಗ ಬಾರದಂತೆ ಎಲ್ಲ ರೀತಿಯ ಎಚ್ಚರಿಕೆ ವಹಿಸಲಾಗಿರುವುದನ್ನು ನಾನು ನಿಮಗೆ ಖಚಿತ ಪಡಿಸುತ್ತೇನೆ. ಪರೀಕ್ಷಾ ಕೇಂದ್ರದ ಸುತ್ತಮುತ್ತ ಝೆರಾಕ್ಸ್ ಅಂಗಡಿಗಳನ್ನು ಬಂದ್ ಮಾಡಿಸಲಾಗುತ್ತದೆ. ಪರೀಕ್ಷಾ ಸಿಬ್ಬಂದಿ, ಮುಖ್ಯ ಅಧೀಕ್ಷಕರು ಸೇರಿದಂತೆ ಯಾರೊಬ್ಬರೂ ಸಹ ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಫೋನ್ ಬಳಸುವುದನ್ನು ನಿಷೇಧಿಸಲಾಗಿದೆ.

ಇಡೀ ಪರೀಕ್ಷೆಯನ್ನು ಯಾವುದೇ ಗೊಂದಲವಿಲ್ಲದೆ ನಡೆಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅನುಭವಿ ಅಧಿಕಾರಿಗಳನ್ನೊಳಗೊಂಡ ತಂಡ ಮತ್ತು ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಅಪರ ಜಿಲ್ಲಾಧಿಕಾರಿ ನೇತೃತ್ವದ ಪ್ರಶ್ನೆ ಪತ್ರಿಕೆ ಪಾಲನಾ ತಂಡಗಳನ್ನು ರಚಿಸಲಾಗಿದ್ದು, ಯಾವುದೇ ರೀತಿಯಲ್ಲೂ ಗೊಂದಲಗಳುಂಟಾಗದಂತೆ ಕ್ರಮ ವಹಿಸಲಾಗಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಸಿಬ್ಬಂದಿ ನಿಯೋಜನೆಯೂ ಸೇರಿದಂತೆ‌ ಹಲವು‌ ಸುರಕ್ಷತಾ‌ ಪ್ರಕ್ರಿಯೆಗಳು ಜಾರಿಯಲ್ಲಿದ್ದು, ಪರೀಕ್ಷಾರ್ಥಿಗಳು ಆತಂಕ ಪಡುವ ಪ್ರಶ್ನೆಯೇ ಬಾರದು.

ಇನ್ನು, ನೀವೂ ಸಹಕರಿಸಬೇಕು. ಡಿಜಿಟಲ್ ವಾಚು, ಮೊಬೈಲ್, ಕ್ಯಾಮರಾಗಳಂತಹ ಎಲೆಕ್ಟ್ರಾನಿಕ್ ವಸ್ತುಗಳನ್ನು ಪರೀಕ್ಷಾ ಕೇಂದ್ರಕ್ಕೆ ತರುವಂತಿಲ್ಲ. ಪರೀಕ್ಷಾ ಹಾಲ್‍ನಲ್ಲಿ ಗಡಿಯಾರದ ವ್ಯವಸ್ಥೆ ಮಾಡುವ ಬಗ್ಗೆ ಸೂಚನೆ ನೀಡಿದ್ದೇನೆ. ಹಾಗೆಯೇ ಶುದ್ಧ ಕುಡಿಯುವ ನೀರಿನ ಪೂರೈಕೆ ಇರುತ್ತದೆ. ನಿಷೇಧಿತವಾದ ವಸ್ತುಗಳನ್ನು ತರುವುದನ್ನು ಶಿಕ್ಷಾರ್ಹ ಅಪರಾಧವೆಂದು ಘೋಷಿಸಲಾಗಿದೆ. ಡಿಜಿಟಲ್ ವಾಚ್ ಸೇರಿದಂತೆ ಇಂತಹ ಯಾವುದೇ ವಸ್ತುಗಳ ಪರೀಕ್ಷಾ ಪದ್ಧತಿಯಲ್ಲಿ ಗೊಂದಲ ಮೂಡಿಸಬಹುದಾದ್ದರಿಂದ ಅವುಗಳನ್ನು ನಿಷೇಧಿಸಲಾಗಿದೆ. ಅದನ್ನು ತಂದು ಏಕಾಗ್ರತೆಗೆ ಭಂಗ ತಂದುಕೊಳ್ಳಬೇಡಿ.

ಉತ್ತಮವಾಗಿ ಓದಿ ಒಳ್ಳೆಯ ಅಂಕಗಳಿಸಬೇಕೆಂಬ ದೃಷ್ಟಿಯಿಂದ ಶ್ರದ್ಧೆ ಮತ್ತು ನಿಷ್ಠೆಯಿಂದ ಓದಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಹಾಗೂ ಮಕ್ಕಳ ನೈತಿಕತೆ ಕುಸಿಯದಂತೆ ಪರೀಕ್ಷೆಯಿಂದ ಹಿಡಿದು ಮೌಲ್ಯಮಾಪನದವರೆಗೂ ಎಲ್ಲ ಭರವಸೆಯುಕ್ತ ಕ್ರಮಗಳನ್ನು ಜಾರಿಯಲ್ಲಿಡಲಾಗಿದೆ.

ನಿಮ್ಮ ಉತ್ತರ ಪತ್ರಿಕೆಗಳೂ ಸಹ ಯಾವುದೇ ಚ್ಯುತಿ ಬಾರದಂತೆ ಸ್ಟ್ರಾಂಗ್ ರೂಮಿನಲ್ಲಿ ಸಂರಕ್ಷಿತವಾಗಿರಲಿವೆ. ಮೌಲ್ಯಮಾಪಕರೂ ಸಹ ಮಕ್ಕಳ ಕನಸಿಗೆ ಯಾವುದೇ ರೀತಿಯಲ್ಲೂ ಧಕ್ಕೆಯಾಗದಂತೆ ಪೂರ್ಣ ಪ್ರಜ್ಞೆಯಿಂದ ನಿಮ್ಮೆಲ್ಲರ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡೇ ಮೌಲ್ಯಮಾಪನದಲ್ಲಿ ಮಾಡುತ್ತಾರೆ. ಶಾಲಾತರಗತಿ-ಪರೀಕ್ಷಾ ಕೊಠಡಿ-ಮೌಲ್ಯಮಾಪನ ಕೇಂದ್ರದವರೆಗೂ ನಿಮ್ಮ ಶಿಕ್ಷಕರು ನಿಮ್ಮೆಲ್ಲರ ಹಿತವನ್ನೇ ಗುರಿಯಾಗಿಸಿಕೊಂಡು ಅರ್ಪಣಾ ಮನೋಭಾವದಿಂದ ಕರ್ತವ್ಯದಲ್ಲಿ ತೊಡಗಿಸಿಕೊಳ್ಳುವುದರಿಂದ ಮಕ್ಕಳು ತಮ್ಮ ಪರೀಕ್ಷೆಗೆ ಚೆನ್ನಾಗಿ ಓದುವುದರ ಹೊರತಾಗಿ ಬೇರಾವುದೇ ವಿಷಯಗಳಿಗೆ ತಲೆಕೆಡಿಸಿಕೊಳ್ಳಬಾರದು. ನಿಮ್ಮ ಹಿತವೇ ನನಗೆ ಮುಖ್ಯ.

ನಿಮ್ಮ ಹಿತ ಕಾಯುವುದೇ ನನ್ನ ಕಾಯಕ. ನೀವು ಚೆನ್ನಾಗಿ ಅಭ್ಯಾಸ ಮಾಡಿ ಉತ್ತಮವಾಗಿ ಪರೀಕ್ಷೆ ಬರೆಯಬೇಕಷ್ಟೇ. ಗೊಂದಲಗಳಿಗೆ-ವದಂತಿಗಳಿಗೆ ಕಿವಿಗೊಡಬೇಡಿ. ಹರಡಲೂ ಬೇಡಿ.

ಆತ್ಮವಿಶ್ವಾಸ ಮತ್ತು ಧೈರ್ಯದಿಂದ ನೀವೆಲ್ಲಾ ಪರೀಕ್ಷೆ ಬರೆಯಬಹುದಾದಂತಹ ವಾತಾವರಣ ನಿಮಗೆ ಈ ಬಾರಿ ಪರೀಕ್ಷಾಲಯದಲ್ಲಿ ಇರಲಿದೆ. ಹಾಗಾಗಿ ನೀವೆಲ್ಲಾ ನಿಮ್ಮ ನಿರೀಕ್ಷೆಯ ಅಂಕಗಳನ್ನು ಪಡೆದು ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಶ್ರಮವಹಿಸಿ. ಆ ಮೂಲಕ ಮುಂದಿನ ಭರವಸೆಯ ದಿನಗಳು ನಿಮ್ಮವಾಗಿರಲಿ. ಮುಂದಿನ ದಿನಗಳಲ್ಲಿ ಜವಾಬ್ದಾರಿಯುತ ನಾಗರೀಕರಾಗಿ ನೀವೆಲ್ಲಾ ರೂಪುಗೊಳ್ಳುವಿರಿ ಎಂಬ ವಿಶ್ವಾಸ‌ ನನ್ನದು.

ಇಂತಿ ನಿಮ್ಮವ

ಸುರೇಶ ಕುಮಾರ.
ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top