fbpx
ಸಮಾಚಾರ

ಗಾಳಿಪಟ-2 ಚಿತ್ರತಂಡಕ್ಕೆ ಸಂಕಷ್ಟ ತಂದಿಟ್ಟ ಕೊರೋನಾ ವೈರಸ್

ಜಗತ್ತಿನ ನಾನಾ ಕಡೆ ತನ್ನ ಕಬಂಧ ಬಾಹುಗಳನ್ನು ಚಾಚಿ ಸಾವಿರಾರು ಮಂದಿಯ ಸಾವಿಗೆ ಕಾರಣವಾಗಿರುವ ಕೊರೋನಾವೈರಸ್ ಇದೀಗ ಸ್ಯಾಂಡಲ್ ವುಡ್ ಗೆ ಸಹ ಆತಂಕ ಮೂಡಿಸಿದೆ. ಕೊರೋನಾ ಕಾರಣದಿಂದಾಗಿ ಹಲವಾರು ಸಿನಿಮಾಗಳ ಚಿತ್ರೀಕರಣ ಮುಂದೂಡಲಾಗಿದೆ. ಇದೀಗ ಈ ಸಾಲಿಗೆ ಯೋಗರಾಜ್ ಭಟ್ ನಿರ್ದೇಶನದಲ್ಲಿ ತಯಾರಾಗ್ತಿರೋ ಗಾಳಿಪಟ2 ಚಿತ್ರ ಕೂಡ ಸೇರಿದೆ.

2019ರ ಡಿಸೆಂಬರ್‌ನಲ್ಲಿ ‘ಗಾಳಿಪಟ 2’ ಸೆಟ್ಟೇರಿತ್ತು. ಕುದುರೆಮುಖದ ಪ್ರಕೃತಿ ಸೌಂದರ್ಯದಲ್ಲಿ ಕೆಲವು ದೃಶ್ಯಗಳನ್ನು ಚಿತ್ರಿಸಿಕೊಳ್ಳಲಾಯಿತು. ಅಂದಾಜು 30 ದಿನಗಳ ಕಾಲ ಶೂಟಿಂಗ್‌ ಮಾಡಲಾಗಿದೆ. ಹೀಗೆ ಭರದಿಂದ ಚಿತ್ರೀಕರಣ ಮಾಡುತ್ತಿದ್ದ ತಂಡ ಈ ತಿಂಗಳು ವಿದೇಶಕ್ಕೆ ಹಾರಬೇಕಿತ್ತು.

ಮುಂದಿನ ಹಂತದ ಚಿತ್ರೀಕರಣವನ್ನ ಜಾರ್ಜಿಯಾದಲ್ಲಿ ಮಾಡಲು ಪ್ಲ್ಯಾನ್ ಮಾಡಿದ್ದ ಚಿತ್ರತಂಡ ಮಾರ್ಚ್ ಅಂತ್ಯದವರೆಗೆ ಅಲ್ಲೇ ಶೂಟ್ ಮಾಡಬೇಕಿತ್ತು. ಫಾರಿನ್‌ ಶೂಟಿಂಗ್‌ಗಾಗಿ ಸಕಲ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿತ್ತು. ಆದ್ರೆ ಇದೀಗ ಕೊರೊನಾ ಭಯದಿಂದ 2 ತಿಂಗಳುಗಳ ಕಾಲ ಶೂಟಿಂಗ್ ಪೋಸ್ಟ್ ಪೋನ್ ಮಾಡಿದೆ.

‘ಗಾಳಿಪಟ 2’ ಚಿತ್ರದ ಕಥೆಯಲ್ಲಿ ಫಾರಿನ್‌ ಲೊಕೇಷನ್‌ನ ಹೆಚ್ಚಿನ ಮಹತ್ವ ಹೊಂದಿರುವುದರಿಂದ ಅದನ್ನು ಬೇರೆಲ್ಲೂ ಚಿತ್ರೀಕರಿಸಲು ಸಾಧ್ಯವಿಲ್ಲ. ಹಾಗಾಗಿ ಪರಿಸ್ಥಿತಿ ಸುಧಾರಿಸುವವರೆಗೂ ಕಾಯುವುದು ಚಿತ್ರತಂಡಕ್ಕೆ ಅನಿವಾರ್ಯವಾಗಿದ್ದು ಅಲ್ಲಿಯವರೆಗೂ ಕರ್ನಾಟಕದಲ್ಲಿ ಚಿತ್ರಿಸಬಹುದಾದ ಕೆಲವು ದೃಶ್ಯಗಳ ಶೂಟಿಂಗ್‌ ಅನ್ನು ಮುಗಿಸಿಕೊಳ್ಳಲು ತಂಡ ನಿರ್ಧರಿಸಿದೆಯಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top