fbpx
ಸಮಾಚಾರ

ದೆಹಲಿಯಲ್ಲಿ ಕನ್ನಡ ಕೀರ್ತಿ ಪತಾಕೆಯನ್ನು ಹಾರಿಸಿದ ಸಂಸದ ಜಿಸಿ ಚಂದ್ರಶೇಖರ್

ಕರ್ನಾಟಕ, ಕನ್ನಡ ಮತ್ತು ಕನ್ನಡಿಗರ ಸಮಸ್ಯೆಗಳ ಬಗ್ಗೆ ನಿರಂತರವಾಗಿ ಧ್ವನಿಯೆತ್ತುವ ರಾಜ್ಯ ಸಭಾ ಸದಸ್ಯ ಜಿಸಿ ಚಂದ್ರಶೇಖರ್ ಅವರು ಇದೀಗ ಮತ್ತೊಮ್ಮೆ ಕನ್ನಡಕ್ಕಾಗಿ ದೆಹಲಿಯ ಸಂಸತ್ ಭವನದಲ್ಲಿ ಧ್ವನಿಯೆತ್ತಿದ್ದಾರೆ. ಹೌದು, ನೆನ್ನೆ ಸಂಸತ್ ನಲ್ಲಿ ಮಾತನಾಡಿದ ಸಂಸದ ಚಂದ್ರಶೇಖರ್ ಯುನೆಸ್ಕೋದ ಪಾರಂಪರಿಕ ಭಾಷೆಯ ಪಟ್ಟಿಯಲ್ಲಿ ಕನ್ನಡವನ್ನು ಸೇರಿಸಿ ಎಂದು ರಾಜ್ಯಸಭೆಯಲ್ಲಿ ಮನವಿ ಮಾಡಿದ್ದಾರೆ! ಕನ್ನಡದಲ್ಲಿಯೇ ಸಭಾಧ್ಯಕ್ಷ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಒತ್ತಾಯಿಸಿದ್ದಾರೆ.

“ಶಾಸ್ತ್ರೀಯ ಭಾಷೆಯಾಗಿ ಪುರಸ್ಕೃತಗೊಂಡಿರುವ ನಮ್ಮ ಕನ್ನಡ ಬಾಷೆಯನ್ನು ಯುನೆಸ್ಕೊದ ಪಾರಂಪರಿಕ ಭಾಷೆಯ ದಾಖಲಾತಿಯ ಪುಸ್ತಕದಲ್ಲಿ ಸೇರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ವಿನಂತಿಸುತ್ತೇನೆ. ಈಗಾಗಲೇ ಈ ಪ್ರಸ್ತಾವನೆಯನ್ನು ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಕಳುಹಿಸಿದ್ದು ಇನ್ನೂ ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಪುರಸ್ಕರಿಸಿಲ್ಲ. ದಯವಿಟ್ಟು ಇದರ ಕಡೆಗೆ ಗಮನಹರಿಸಬೇಕು” ಎಂದು ಸಂಸದ ಜಿಸಿ ಚಂದ್ರಶೇಖರ್ ಆಗ್ರಹಿಸಿದರು.

ಮುಂದುವರೆದು ಮಾತನಾಡಿದ ಅವರು ” ಈಗಾಗಲೇ ನಮ್ಮ ನಾಡಿನ ಐತಿಹಾಸಿಕ ಸ್ಥಳಗಳಾದ ಹಂಪಿ, ಪಟ್ಟದ ಕಲ್ಲು ಮತ್ತು ಪಶ್ಚಿಮಘಟ್ಟಗಳನ್ನು ಯುನೆಸ್ಕೊದ ವಿಶ್ವ ಪಾರಂಪರಿಕ ಸ್ಥಳಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಕನ್ನಡ ಒಂದು ಭಾಷೆಯಲ್ಲ ಅದು ಒಂದು ಶಕ್ತಿ, ಈ ಮಣ್ಣಿನ ಸೊಗಡಿನ ಸಂಸ್ಕೃತಿ, ಜನರ ಜೀವನಾಡಿ, ಭಾವೈಕ್ಯತೆ ಮಾತು ಶಾಂತಿಯ ಪ್ರತೀಕ ಮತ್ತು ಎಲ್ಲಾ ಜನರ ಮನ ತಣಿಸುವ ಸರ್ವ ಜನಾಂಗದ ಶಾಂತಿಯ ತೋಟ. ಅಲೆಕ್ಸಾಂಡರ್ ಕಾಲದ ಕ್ರಿಸ್ತ ಪೂರ್ವ ಸುಮಾರು ನಾಲ್ಕನೇ ಶತಮಾನದಲ್ಲಿಎಕ್ಸರಿಂಕ್ ನಗರದಲ್ಲಿ ದೊರೆತ ಪುರಾತನ ಗ್ರಂಥದ ಪ್ರಕಾರ ಹಾಗೂ ಎರಡನೇ ಶತಮಾನದ ಗ್ರೀಕ್ ನಾಟಕವೊಂದರಲ್ಲಿ ಕನ್ನಡ ಭಾಷೆಯನ್ನು ಬಳಸಿಕೊಂಡಿರುವುದು ಕನ್ನಡ ಎಷ್ಟು ಪ್ರಾಚೀನ ಭಾಷೆ ಎಂದು ಘೋಚರಿಸುತ್ತದೆ.” ಎಂದು ಕನ್ನಡ ಭಾಷೆಗಿರುವ ಇತಿಹಾಸವನ್ನು ಜಿಸಿ ಚಂದ್ರಶೇಖರ್ ಹೇಳಿದರು.

“ರಾಷ್ಟ್ರದಲ್ಲೇ ಸಾಹಿತ್ಯ ಕ್ಷೇತ್ರದಲ್ಲಿ ನೀಡುವ ಅತಿ ಉನ್ನತ ಪ್ರಶಸ್ತಿಯಾಗಿರುವ ಜ್ಞಾನಪೀಠ ಪ್ರಶಸ್ತಿಗಳು ಕನ್ನಡಕ್ಕೆ ಒಟ್ಟು ದೊರೆತಿವೆ. ಶ್ರೀ ವಿನೋಬಾ ಆವೆ ಅವರು ಕನ್ನಡದ ಲಿಪಿಯನ್ನು ‘ಲಿಪಿಗಳ ರಾಣಿ’ ಎಂದು ಹೇಳಿರುವುದು ಕನ್ನಡ ಭಾಷೆಯ ಶ್ರೇಷ್ಠತೆಗೆ ಸಾಕ್ಷಿಯಾಗಿದೆ. ವಿಶ್ವಮಾನವ ಸಂದೇಶ ಸಾರಿದ ಕುವೆಂಪು, ಸಮಾನತೆಯನ್ನು ಸಾರಿದ ಶರಣರು, ದಾಸರ ಕೀರ್ತನೆಗಳು ಕನ್ನಡದ ಮುಕುಟಕ್ಕೆ ಮೆರಗು ಹೆಚ್ಚಿಸಿದ್ದಾರೆ.” ಎಂದು ಕನ್ನಡದ ಶ್ರೇಷ್ಠತೆಯ ಬಗ್ಗೆ ಸದನದಲ್ಲಿ ಸಂಸದ ಚಂದ್ರಶೇಖರ್ ಹೇಳಿದರು.

“ಆದಿಕವಿ ಪಂಪ ತನ್ನ ಮರು ಹುಟ್ಟು ಕರ್ನಾಟಕದಲ್ಲಿ ಕನ್ನಡಿಗನಾಗಿ ಹೀಗೆ ಆಗಬೇಕು ಎಂದು ಈ ರೀತಿಯಾಗಿ ಹೇಳುತ್ತಾನೆ. ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿ ನಿಂಪುಗಳ್ಗಾರವಾದ ಮಾನಿಸರೆ ಮಾನಿಸರಂತವರಾಗಿ ಪುಟ್ಟಲೇ ನಾಗಿಯುಮೇನೊ ತೀರ್ದಪುದೇ ತೀರದೊಡಂ ಮರಿದುಂಬಿಯಾಗಿ ಮೇಣ್‌ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್‌ ಬನವಾಸಿ ದೇಶದೊಳ್‌ ” ಎಂಬ ಪಂಪನ ಸಾಲುಗಳನ್ನು ಹೇಳಿ ಅದನ್ನು ವಿವರಿಸಿದ್ದಾರೆ.

“ತ್ಯಾಗ, ಭೋಗ, ವಿದ್ಯೆ, ಸಂಗೀತ ಗೋಷ್ಠಿಗಳ ಸಂತೋಷ ಸೌಖ್ಯಕ್ಕೆ ಅರ್ಹರಾಗಿರುವ ಬನವಾಸಿ ದೇಶದ ಮನುಷ್ಯರೇ ನಿಜವಾದ ಮನುಷ್ಯರು. ಅಂತಹ ದೇಶದಲ್ಲಿ ಹುಟ್ಟಲು ಅದೃಷ್ಟಶಾಲಿಗಳಾಗಿರಬೇಕು. ಹಾಗೆ ಮನುಷ್ಯರಾಗಿ ಹುಟ್ಟಲು ಸಾಧ್ಯವಾಗದಿದ್ದರೂ ಆ ಬನವಾಸಿ ದೇಶದ ನಂದನವನಗಳಲ್ಲಿ ಮರಿದುಂಬಿಯಾಗಿಯೋ ಅಥವಾ ಕೋಗಿಲೆಯಾಗಿಯೋ ಹುಟ್ಟಬೇಕು.” ಎಂದು ಸಂಸದರು ಪಂಪ ಸಾಲುಗಳಿಗೆ ಅರ್ಥವನ್ನೂ ವಿವರಿಸಿದ್ದಾರೆ.

ಸಂಸದರು ಕನ್ನಡದಲ್ಲಿ ಮಾತನಾಡಿದ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಕನ್ನಡಿಗರ ಪರ ಕಾಳಜಿ ತೋರಿಸಿದ್ದಕ್ಕೆ ಸಂಸದರಿಗೆ ನೆಟ್ಟಿಗರು ಅಭಿನಂದನೆ ಸಲ್ಲಿಸುತ್ತಿದ್ದಾರೆ.

 

 

ನಂತರ ಈ ಬಗ್ಗೆ ಟ್ವೀಟ್ ಮಾಡಿರುವ ಜಿಸಿ ಚಂದ್ರಶೇಖರ್ ಅವರು “ಯುನೆಸ್ಕೋದ ಪಾರಂಪರಿಕ ಭಾಷೆಯ ಪಟ್ಟಿಯಲ್ಲಿ ಕನ್ನಡವನ್ನು ಸೇರಿಸಿ ಎಂದು ಇಂದು ರಾಜ್ಯಸಭೆಯಲ್ಲಿ ಮನವಿ ಮಾಡಿದ್ದೇನೆ , ಗ್ರೀಕ್ ನಾಟಕದಲ್ಲಿ ಕನ್ನಡ ಪದದ ಉಲ್ಲೇಖ,ಕವಿ ಪಂಪ ತನ್ನ ಮರುಹುಟ್ಟು ಬನವಾಸಿಯಲ್ಲಿ ಹೇಗೆ ಆಗಬೇಕು ಎಂದು ಬಯಸಿದ್ದರು ಎಂಬ ಉಲ್ಲೇಖ, ಕನ್ನಡ ಕೇವಲ ಭಾಷೆಯಲ್ಲ ನಮ್ಮ ಸಂಸ್ಕೃತಿಯ ಪ್ರತೀಕ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top