fbpx
ಸಮಾಚಾರ

‘ಬದಲಾಗು ನೀನು ಬದಲಾಯಿಸು ನೀನು’ ಹಾಡಿನಲ್ಲಿ ಸುದೀಪ್ ಇಲ್ಲ: ಕಾರಣ ಕೊಟ್ಟ ಸಚಿವ ಸುಧಾಕರ್

ಕನ್ನಡದ ಸ್ಟಾರ್ ನಾಯಕರೆಲ್ಲಾ ಒಟ್ಟಾಗಿ ಕೊರೊನಾ ಜಾಗೃತಿಗಾಗಿ ಮಾಡಿದ ‘ಬದಲಾಗು ನೀನು, ಬದಲಾಯಿಸು ನೀನು’ ಹಾಡನ್ನು ನೆನ್ನೆ ಸಂಜೆ ಸಿಎಂ ಯಡಿಯೂರಪ್ಪ ಅವರು ಬಿಡುಗಡೆ ಮಾಡಿದ್ದಾರೆ. ವೈದ್ಯಕೀಯ ಶಿಕ್ಷಣ ಇಲಾಖೆ ವತಿಯಿಂದ ನಿರ್ಮಿಸಲಾದ ಈ ಹಾಡನ್ನು ಪವನ್ ಒಡೆಯರ್ ನಿರ್ದೇಶಿಸಿದ್ದಾರೆ.

ಕನ್ನಡ ಚಿತ್ರರಂಗದ ಪ್ರಮುಖ ನಟ, ನಟಿಯರೆಯಲ್ಲ ಭಾಗವಹಿಸಿರುವ ವಿಡಿಯೋದಲ್ಲಿ ಕಿಚ್ಚ ಸುದೀಪ್ ಅವರನ್ನು ಸೇರಿಸದಿರುವ ಬಗ್ಗೆ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುದೀಪ್ ಹೊರತುಪಡಿಸಿ ಉಳಿದೆಲ್ಲರಿಗೂ ಹಾಡಿನಲ್ಲಿ ಮಣೆ ಹಾಕಿರುವುದು ಕಿಚ್ಚನ ಅಭಿಮಾನಿಗಳ ಕಣ್ಣು ಕೆಂಪಾಗಿಸಿದೆ. ಕರ್ನಾಟಕದ ಸ್ಟಾರ್ ಕಲಾವಿದರಲ್ಲಿ ಅಭಿನಯ ಚಕ್ರವರ್ತಿ ಮುಂಚೂಣಿಯಲ್ಲಿದ್ದಾರೆ. ಆದರೂ ಅವರನ್ನು ಕಡೆಗಣಿಸಲಾಗಿದೆ ಎಂದು ಸುದೀಪ್ ಅಭಿಮಾನಿಗಳು ಆರೋಪಿಸಿದ್ದಾರೆ.

ಸರ್ಕಾರದ ದೃಶ್ಯರೂಪಕದಲ್ಲಿ ಸುದೀಪ್ ಅವ್ರು ಯಾಕೆ ಎಂಬ ಪ್ರಶ್ನೆಗೆ ಸ್ವತಃ ಸಚಿವ ಸುಧಾಕರ್ ಉತ್ತರ ನೀಡಿದ್ದಾರೆ. “ಸುದೀಪ್ ಅವರನ್ನು ಸಂಪರ್ಕ ಮಾಡಲು ಪ್ರಯತ್ನ ಮಾಡಿದೆ. ಅವರು ಸಂಪರ್ಕಕ್ಕೆ ಸಿಗಲಿಲ್ಲ. ಮ್ಯಾನೇಜರ್ ಅವರನ್ನು ಸಂಪರ್ಕ ಮಾಡಿ ತಿಳಿಸಿದ್ದೆ. ಬಹುತೇಕ ಎಲ್ಲ ನಟನಟಿಯರು ಸ್ವಯಂ ಪ್ರೇರಿತರಾಗಿ ನಟನೆ ಮಾಡಿದ್ದಾರೆ. ದೃಶ್ಯ ರೂಪಕದಲ್ಲಿ ಸುದೀಪ್ ಅವರಿಗೂ ಅವಕಾಶ ಇತ್ತು” ಎಂದು ಸುಧಾಕರ್ ತಿಳಿಸಿದ್ದಾರೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.

ಅಂದಹಾಗೆ ಬದಲಾಗು ನೀನು..ಬದಲಾಯಿಸು ನೀನು…ಎಂಬ ಈ ಹಾಡಿನಲ್ಲಿ ದರ್ಶನ್, ಯಶ್ ಪುನೀತ್ ರಾಜ್ ಕುಮಾರ್, ಶಿವ ರಾಜ್ ಕುಮಾರ್, ರವಿಚಂದ್ರನ್, ರಮೇಶ್ ಅರವಿಂದ್, ಧ್ರುವ ಸರ್ಜಾ, ಗಣೇಶ್, ಅಭಿಷೇಕ್ ಅಂಬರೀಶ್, ಸುಮಲತಾ ಅಂಬರೀಶ್, ಶಾನ್ವಿ ಶ್ರೀವಾಸ್ತವ, ಆಶಿಕಾ ರಂಗನಾಥ್, ಗಾಯಕ ವಿಜಯ್ ಪ್ರಕಾಶ್ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ಕಲಾವಿದರು ಕಾಣಿಸಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top