ಇತ್ತೀಚೆಗೆ ನಿಧನರಾದ ಪತಿ ಚಿರಂಜೀವಿ ಸರ್ಜಾರನ್ನು ನೆನೆದು ಭಾವನಾತ್ಮಕ ಪತ್ರ ಬರೆದಿದ್ದ ಮೇಘನಾ ರಾಜ್, ಇದೀಗ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿ ಬರೆದಿರುವ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮೇಘನಾ ರಾಜ್ ಅವರು ಇಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು, ಕಷ್ಟಕಾಲದಲ್ಲಿ ನೆರವಿಗೆ ಬಂದ, ಪ್ರೀತಿಯ ಮಳೆಗರೆದ, ನೋವನ್ನು ಹಂಚಿಕೊಂಡ ಎಲ್ಲರಿಗೂ ವಿಶೇಷವಾಗಿ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
MY CHIRU FOREVER ❤️ pic.twitter.com/2GJG68STvR
— MEGHANA RAJ (@meghanasraj) June 19, 2020
‘ಕಳೆದ ಕೆಲವು ದಿನಗಳು ನನ್ನ ಜೀವನದಲ್ಲಿ ಅತಿ ಕಠಿಣ ಹಾಗೂ ಆಘಾತಕರ. ಕಲ್ಪನೆಗೂ ಮೀರಿ ಅದ್ಭುತವಾಗಿದ್ದ ನನ್ನ ಸುಂದರ ಲೋಕ ಅಲ್ಲೋಲ ಕಲ್ಲೋಲ ಆದಾಗ, ಇನ್ನು ನನಗಾಗಿ ಏನೂ ಇಲ್ಲವೆಂದು ಅಂದುಕೊಂಡಾಗ, ಕಗ್ಗತ್ತಲೆಯಲ್ಲಿ ಆಶಾದೀಪದ ಬೆಳಕಿನಂತೆ ಕಂಡಿದ್ದು, ನನ್ನ ಕುಟುಂಬ, ಸ್ನೇಹಿತರು, ಚಿತ್ರರಂಗದ ಸಹಪಾಠಿಗಳು. ಎಲ್ಲರಿಗಿಂತ ಹೆಚ್ಚಾಗಿ ಅಭಿಮಾನಿಗಳು ತೋರಿದ ಪ್ರೀತಿ, ವಾತ್ಸಲ್ಯ, ಮಮತೆ. ನಿಮ್ಮ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಿಮ್ಮ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸಲು ಒಂದು ಜನುಮ ಸಾಲದು’ ಎಂದಿರುವ ಅವರು, ಅಭಿಮಾನಿಗಳ ಪ್ರೀತಿಯೇ ನನಗೆ ಆಸರೆ ರಕ್ಷಾಕವಚ” ಎಂದು ಮೇಘನಾ ಹೇಳಿದ್ದಾರೆ.
‘ನಾನು ಅತ್ತಾಗ ನೀವು ನನ್ನೊಂದಿಗೆ ಕಣ್ಣೀರು ಹಾಕಿದ್ದೀರಿ, ನನ್ನ ನೋವನ್ನು ನೀವು ಉಂಡಿದ್ದೀರಿ, ನನ್ನಷ್ಟೇ ಚಿರು ಅವರನ್ನು ಪ್ರೀತಿಸಿದ್ದೀರಿ. ನಿಮ್ಮ ಆ ಪ್ರೀತಿಗೆ ನಾನು ಚಿರಋಣಿ. ಇಂತಹ ನೋವಿನ ಸಮಯದಲ್ಲಿ ನಿಮ್ಮ ಅಭಿಮಾನ, ಚಿತ್ರರಂಗದ ಬೆಂಬಲ ಎಲ್ಲವೂ ಚಿರು ಸಂಪಾದಿಸಿದ ಪ್ರೀತಿಯ ರಾಶಿಯ ಗುರುತು. ನಿಮ್ಮ ಅಭಿಮಾನ ಗೆದ್ದ ಅವರಿಗಿಂತ ಸಿರಿವಂತ ಇನ್ಯಾರು ಇಲ್ಲ. ಚಿರು ಅವರನ್ನು ನಿಮ್ಮ ಮನೆ ಮಗನಂತೆ ಭಾವಿಸಿ, ಇದ್ದಷ್ಟು ದಿನ ರಾಜನಂತೆ ಬದುಕ್ಕಿದ್ದ ಅವರನ್ನು ಸಾಲು ಸಾಲಾಗಿ ಬಂದು, ಪ್ರೀತಿಯಿಂದ ಮಹಾರಾಜನಂತೆ ಕಳುಹಿಸಿಕೊಟ್ಟ ನಿಮಗೆಲ್ಲರಿಗೂ ನನ್ನ ನಮಸ್ಕಾರಗಳು. ಆ ಮಹಾರಾಜ ನನ್ನ ಮಡಿಲಿಗೆ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ತಿರುಗಿ ಬರುವನು’ ಎಂದು ಭಾವುಕವಾಗಿ ಹೇಳಿದ್ದಾರೆ ಮೇಘನಾ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
