fbpx
ಸಮಾಚಾರ

ಅನ್ನಭಾಗ್ಯ ಯೋಜನೆ: “ಬಡವರ ಅಕ್ಕಿಗೆ ಕತ್ತರಿ ಬೇಡ” ಸಿಎಂಗೆ ಸಂಸದ ಜಿಸಿ ಚಂದ್ರಶೇಖರ್ ಪತ್ರ

ಕೋವಿಡ್‌-19 ಹಿನ್ನಲೆಯಲ್ಲಿ ದೇಶಾದ್ಯಂತ ಹೇರಲಾಗಿದ್ದ ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟ ಎದುರಾಗಿದೆ. ಈ ಸಂದರ್ಭದಲ್ಲಿ ಆಹಾರ ಮತ್ತು ಆರೋಗ್ಯ ಭದ್ರತೆನೀಡಬೇಕಾದ ಸರ್ಕಾರ ಅನ್ನಭಾಗ್ಯ ಯೋಜನೆಯ ಅಕ್ಕಿ ಕಡಿತಕ್ಕೆ ಮುಂದಾಗಿರುವುದು ಖಂಡನೀಯ, ಶ್ರಮಿಕರ, ರೈತರ ಮತ್ತು ಬಡ ಜನರ ಹಿತ ಕಾಯಲು ಸರ್ಕಾರ ಅನ್ನ ಭಾಗ್ಯ ಯೋಜನೆಯನ್ನು ಯಥಾಪ್ರಕಾರ ಮುಂದುವರೆಸಬೇಕು ಎಂದು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ ಒತ್ತಾಯಿಸಿದ್ದಾರೆ.

 

 

ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ, ಸರ್ಕಾರ ಮುಖ್ಯಕಾರ್ಯದರ್ಶಿ ಹಾಗೂ ಆಹಾರ ಸಚಿವ ಕೆ. ಗೋಪಾಲಯ್ಯ ಅವರಿಗೆ ಪತ್ರ ಬರೆದಿರುವ ಅವರು, ಅನ್ನಭಾಗ್ಯ ಯೋಜನೆಯಲ್ಲಿ ಐದು ಕೆಜಿ ಅಕ್ಕಿ ವಿತರಿಸುವುದನ್ನು ಯಥಾಪ್ರಕಾರ ಉಳಿಸಿಕೊಳ್ಳಬೇಕು. ಸಾಧ್ಯ ವಾದರೆ ಹೆಚ್ಚುವರಿಯಾಗಿ ತಲಾ ಎರಡುಕೆ. ಜಿ ರಾಗಿ ಅಥವಾ ಜೋಳ ವಿತರಿಸಬೇಕು. ಕೊರೋನಾ ಸಂಕಷ್ಟದ ಈ ಸಮಯದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಜನರಿಗೆ ನೈತಿಕ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಲಾಕ್ ಡೌನ್ ನಿಂದಾಗಿ ವ್ಯಾಪಾರ ವಹಿವಾಟುಗಳು ತೀವ್ರಗತಿಯಲ್ಲಿ ಕುಸಿತ ಕಂಡಿವೆ. ದಿನಗೂಲಿ ನೌಕರರು, ಆರ್ಥಿಕವಾಗಿ ಹಿಂದುಳಿದ ವರ್ಗಗಳು ಸಂಕಷ್ಟಕ್ಕೆ ಸಿಲುಕಿವೆ. ಇಂತಹ ಸಂದರ್ಭದಲ್ಲಿ ಬಡಜನರ ಆಹಾರ, ಆರೋಗ್ಯ ಭದ್ರತೆ ನೋಡಿಕೊಳ್ಳಬೇಕಾದದ್ದು ಸರ್ಕಾರದ ಜವಾಬ್ದಾರಿ. ಆದರೆ, ಕಳೆದ ಮೂರು ತಿಂಗಳ ಹಿಂದಷ್ಟೇ ಅನ್ನಭಾಗ್ಯ ಯೋಜನೆಯಿಂದ ಎರಡು ಕೆಜಿ ಅಕ್ಕಿ ಕಡಿತ ಮಾಡಿದ್ದ ಸರ್ಕಾರ ಈಗ ಮತ್ತೆರಡು ಕೆಜಿ ಅಕ್ಕಿಕಡಿತಕ್ಕೆ ಮುಂದಾಗಿರುವುದು ಸರಿಯಲ್ಲ ಎಂದಿದ್ದಾರೆ.

ಮಾನ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ, ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ‘ಅನ್ನಭಾಗ್ಯ’ ಯೋಜನೆ ಅಡಿಯಲ್ಲಿ ಬಿಪಿಎಲ್ ಕಾರ್ಡ್‍ದಾರರಿಗೆ ಪ್ರತಿ ವ್ಯಕ್ತಿಗೂ 7 ಕೆಜಿಯಂತೆ ಕುಟುಂಬದ ಎಲ್ಲ ಸದಸ್ಯರಿಗೂ ಉಚಿತವಾಗಿ ಅಕ್ಕಿಯನ್ನು ನೀಡಲಾಗುತ್ತಿತ್ತು, ಈ ಯೋಜನೆಯಿಂದ ಸುಮಾರು 1 ಕೋಟಿ 30 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ ಇರುವ 4 ಕೋಟಿಗು ಹೆಚ್ಚಿರುವ ಕುಟುಂಬ ಸದಸ್ಯರಿಗೆ ಅನುಕೂಲವಾಗಿದೆ.

ಬಡಜನರಿಗೆ ಆಹಾರ ಭದ್ರತೆ ನೀಡುವ ಇಂತಹ ಯೋಜನೆಗಳನ್ನು ರಾಜ್ಯ ಸರ್ಕಾರ ಆದರ್ಶವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಈ ಯೋಜನೆಯ ದೂರದರ್ಶಿತ್ವ ಅರಿಯದೆ ಆರ್ಥಿಕ ಹೊರೆ ತಗ್ಗಿಸುವ ಸಲುವಾಗಿ ಅನ್ನಭಾಗ್ಯ ಯೋಜನೆಯನ್ನು ನಿಧಾನವಾಗಿ ದುರ್ಬಲಗೊಳಿಸುತ್ತಿರುವುದು ಶ್ರೇಯಸ್ಕರವಲ್ಲ ಮತ್ತು ಇದು ಪ್ರಸ್ತುತ ಸಮಯವೂ ಅಲ್ಲ. ಜನಪರ ಹಿತಕ್ಕಾಗಿ ಅನ್ನಭಾಗ್ಯ ಯೋಜನೆಯನ್ನು ಯಥಾಪ್ರಕಾರ ಮುಂದುವರೆಸಬೇಕೆಂದು ಜಿಸಿ ಚಂದ್ರಶೇಖರ್ ಅವರು ಮನವಿ ಮಾಡಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top