ಹಿರಿಯ ನಟ ಡಾ. ಅಂಬರೀಷ್ ಅವರ ಸ್ಮಾರಕ ವಿಚಾರವಾಗಿ ಸಿಎಂ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನೆನ್ನೆ ವಿಧಾನ ಸೌಧದಲ್ಲಿ ಸಭೆ ನಡೆಯಿತು. ಸ್ಮಾರಕಕ್ಕೆ ಕಂಠೀರವ ಸ್ಟುಡಿಯೋ ಆವರಣದಲ್ಲಿ 1 ಎಕರೆ 34 ಗುಂಟೆ ಜಾಗ ಗುರುತಿಸಲಾಗಿದ್ದು, ರಾಜ್ಯ ಸರ್ಕಾರವು 5 ಕೋಟಿ ರೂ. ಒದಗಿಸಲಿದೆ. ಶೀಘ್ರವೇ ಸ್ಮಾರಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಯಡಿಯೂರಪ್ಪ ಸೂಚನೆ ನೀಡಿದರು.
ಅಂಬರೀಷ್ ಸ್ಮಾರಕಕ್ಕೆ ಒಂದು ಎಕರೆ 34 ಗುಂಟೆ ಭೂಮಿ ಹಾಗೂ ಅದರ ನಿರ್ಮಾಣಕ್ಕೆ ಮೊದಲ ಕಂತಾಗಿ Rs 5 ಕೋಟಿ ಘೋಷಿಸಿದ ವಿಚಾರವಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಅನ್ನು ರೀ ಟ್ವೀಟ್ ಮಾಡಿದ್ದ ಸಂಸದೆ ಸುಮಲತಾ ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳಿದ್ದರು. ಈ ಟ್ವೀಟ್ ಗಳಿಗೆ ಹಲವಾರು ವಿಷ್ಣುವರ್ಧನ್ ಅಭಿಮಾನಿಗಳು ಬೇಸರದ ಪ್ರತಿಕ್ರಿಯೆ ನೀಡಿದ್ದಾರೆ.
ಅಂಬರೀಷ್ ಸ್ಮಾರಕ ಓಕೇ, ವಿಷ್ಣುವರ್ಧನ್ ಸ್ಮಾರಕಕ್ಕೆ ಯಾವಾಗ ಸಭೆ ನಡೆಸುತ್ತೀರಿ ಎನ್ನುವ ರೀತಿಯಲ್ಲಿ ಮುಖ್ಯಮಂತ್ರಿಗಳಿಗೆ ಪ್ರಶ್ನಿಸಿದ್ದಾರೆ. ಡಾ. ವಿಷ್ಣುವರ್ಧನ್ ಸ್ಮಾರಕ ವಿಚಾರವನ್ನು ಕಡೆಗಣಿಸಲಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಷ್ಣುವರ್ಧನ್ ನಿಧನ ಹೊಂದಿ ಅನೇಕ ವರ್ಷಗಳಾದರು ಇನ್ನೂ ಸ್ಮಾರಕ ನಿರ್ಮಾಣವಾಗಿಲ್ಲ ಎನ್ನುವ ಬೇಸರ ಅಭಿಮಾನಿಗಳನ್ನು ಕಾಡುತ್ತಿದೆ.
ನಮ್ಮ ಪ್ರೀತಿಯ ವಿಷ್ಣುವರ್ಧನ್ ರವರ ಸ್ಮಾರಕದ ಕೆಲಸ ಅವರ ಮನೆಯವರ ಅಪೇಕ್ಷೆಯಂತೆ ಮೈಸೂರಿನಲ್ಲೇ 1 ವರ್ಷದ ಹಿಂದೆಯೇ ಶುರು ಆಗಿರುವುದು ಕೆಲವು ಅಭಿಮಾನಿಗಳಿಗೆ ತಿಳಿದುಬಂದಿಲ್ಲ.ನನಗೆ ತಿಳಿದಿರುವಂತೆ ಸರಕಾರ ಘೋಷಿಸಿದ್ದ 10 ಕೋಟಿಯಲ್ಲಿ 5 ಕೋಟಿ ಬಿಡುಗಡೆ ಮಾಡಿದೆ. ಅನಗತ್ಯ ಮಾತುಗಳಿಂದ ಅಂಬಿ-ವಿಷ್ಣು ಸ್ನೇಹ ಬಾಂಧವ್ಯಕ್ಕೆ ಮಸಿ ಬಳೆಯೋದು ಬೇಡ 🙏 pic.twitter.com/fInbGLdHNc
— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA) June 29, 2020
ವಿಷ್ಣು ಸ್ಮಾರಕದ ವಿಚಾರವಾಗಿ ಪ್ರಶ್ನೆ ಕೇಳುತ್ತಿದ್ದ ಎಲ್ಲಾ ಅಭಿಮಾನಿಗಳಿಗೂ ಸಂಸದೆ ಸುಮಲತಾ ಟ್ವಿಟರ್ ನಲ್ಲೆ ಉತ್ತರ ನೀಡಿದ್ದಾರೆ. “ನಮ್ಮ ಪ್ರೀತಿಯ ವಿಷ್ಣುವರ್ಧನ್ ಸ್ಮಾರಕದ ಕೆಲಸವು ಈಗಾಗಲೇ ಕೆಲ ತಿಂಗಳ ಹಿಂದೆಯೇ ಮೈಸೂರಿನಲ್ಲಿ ಪ್ರಾರಂಭವಾಗಿದೆ, ಅವರ ಕುಟುಂಬಗಳ ಆಶಯದಂತೆ 10 ಕೋಟಿ ಮಂಜೂರು ಮಾಡಲಾಗಿದ್ದು ಈಗಾಗಲೇ 5 ಕೋಟಿ ರೂ ಬಿಡುಗಡೆ ಮಾಡಲಾಗಿದೆ. ಬಹಳಷ್ಟು ಅಭಿಮಾನಿಗಳು ಈ ಬಗ್ಗೆ ಇನ್ನೂ ತಿಳಿದಿಲ್ಲ ಎಂದರೆ ನನಗೆ ಆಶ್ಚರ್ಯವಾಗುತ್ತದೆ. ನೀವು ಅವರ ನಿಜವಾದ ಅಭಿಮಾನಿಗಳಾಗಿದ್ದರೆ ದಯವಿಟ್ಟು ಈ ವಿಷಯ ತಿಳಿದುಕೊಳ್ಳಿ. ಅನಗತ್ಯ ಮಾತುಗಳಿಂದ ಅಂಬಿ-ವಿಷ್ಣು ಸ್ನೇಹ ಬಾಂಧವ್ಯಕ್ಕೆ ಮಸಿ ಬಳೆಯೋದು ಬೇಡ” ಎಂದು ಸುಮಲತಾ ಹೇಳಿದ್ದಾರೆ.
ಇನ್ನು ವಿಷ್ಣು ಮತ್ತು ಅಂಬಿ ಜೊತೆಗಿರುವ ಒಂದಿಷ್ಟು ಸುಂದರ ಫೋಟೋಗಳನ್ನುಸುಮಲತಾ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. “ವಿಷ್ಣು ಮತ್ತು ಅಂಬಿ ಅವರ ಸ್ನೇಹ ಎಂತಹದ್ದು ಎಂದು ಎಲ್ಲರಿಗೂ ಗೊತ್ತಿರೋದೆ. ನಿಜವಾದ ಸ್ಮೇಹಕ್ಕೆ ಹುಟ್ಟು ಸಾವು ಎನ್ನುವುದಿಲ್ಲ’ ಎಂದು ಸುಮಲತಾ ಅವರೇ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
ಸ್ಮಾರಕ ನಿರ್ಮಾಣದ ವಿವಾದದ ಹಿನ್ನಲೆ:
ವಿಷ್ಣುವರ್ಧನ್ ಅವರ ಸಮಾಧಿ ಇರುವ ಅಭಿಮಾನ್ ಸ್ಟುಡಿಯೋದ ಜಾಗದಲ್ಲಿಯೇ ವಿಷ್ಣುವರ್ಧನ್ ಸಮಾಧಿ ನಿರ್ಮಿಸಬೇಕು ಎಂಬ ಎಲ್ಲರ ಅಭಿಲಾಷೆಗೆ ಬಾಲಕೃಷ್ಣ ಅವರ ಕುಟುಂಬ ಸದಸ್ಯರು ತಕರಾರು ಎತ್ತಿದ್ದರು. ಆಗ ವಿಷ್ಣು ಸೇನಾ ಸಮಿತಿ ಪ್ರತಿಭಟನೆ ನಡೆಸಿತ್ತು.
ಅದಾದ ನಂತರ ಸ್ಮಾರಕ ನಿರ್ಮಾಣಕ್ಕೆ ಬಾಲಕೃಷ್ಣ ಅವರ ಮಕ್ಕಳು ಒಪ್ಪಿಕೊಂಡಿದ್ದರು. ಆದರೆ, ಭಾರತಿ ವಿಷ್ಣು ವರ್ಧನ್ ಅವರು ಮೈಸೂರಿನಲ್ಲಿಯೇ ಸ್ಮಾರಕ ನಿರ್ಮಾಣ ಮಾಡುವ ಬಗ್ಗೆ ಪಟ್ಟಿ ಹಿಡಿದರು. ಅದಕ್ಕಾಗಿ ಸರ್ಕಾರ ಮೈಸೂರಿನ ಕಸಬಾ ಹೋಬಳಿಯ ಹಾಲಾಳು ಗ್ರಾಮದಲ್ಲಿ ಸ್ಮಾರಕ ನಿರ್ಮಾಣಕ್ಕೆ ಜಾಗ ನೀಡಿತ್ತು. ಮಂಜೂರಾತಿ ಕುರಿತು ಜಯಪುರ ಹೋಬಳಿಯ ಉದ್ಬೂರು ಗ್ರಾಮದ ಮಹದೇವಪ್ಪ ಸೇರಿದಂತೆ ಐವರು ತಕರಾರು ತೆಗೆದಿದ್ದರು.
ಈ ವ್ಯಾಜ್ಯ ಕೋರ್ಟ್ ಮೆಟ್ಟಿಲೇರಿತ್ತು. ಇದರಿಂದಾಗಿ ಮೈಸೂರಿನ ನಾಲ್ಕನೇ ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎಫ್ಸಿ ನ್ಯಾಯಾಲಯ ಕಾಮಗಾರಿ ಮುಂದುವರಿಕೆಗೆ ತಡೆ ನೀಡಿತ್ತು. ಈ ತಡೆಯಾಜ್ಞೆ ತೆರವುಗೊಳಿಸುವಂತೆ ಕೋರಿ ರಾಜ್ಯ ಕಂದಾಯ ಇಲಾಖೆ ಕಾರ್ಯದರ್ಶಿ ಸೇರಿದಂತೆ ಮೈಸೂರು ಜಿಲ್ಲಾಡಳಿತ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅಧಿನ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿತು. ಅದರಿಂದ ಸ್ಮಾರಕ ನಿರ್ಮಾಣಕ್ಕಿದ್ದ ಕಾನೂನು ತೊಡಕು ಬಗೆಹರಿದಂತಾಗಿ ಸ್ಮಾರಕ ನಿರ್ಮಾಣ ಕೆಲಸಗಳು ಆರಂಭಗೊಂಡಿದ್ದವು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
