fbpx
ಸಮಾಚಾರ

ಕನ್ನಡ ಬರವಣಿಗೆ ಯಡವಟ್ಟು ಮಾಡಿದ್ರ ಯೋಗರಾಜ್ ಭಟ್? ತಪ್ಪು ಶುಭಾಶಯಕ್ಕೆ ಸ್ಪಷ್ಟನೆ ನೀಡಿದ ಭಟ್ರು

ತಮ್ಮ ಪರಮಾಪ್ತ ನಾಯಕ ನಟ ಗೋಲ್ಡನ್ ಸ್ಟಾರ್ ಗಣೇಶ್ ಬರ್ತ್ ಡೇಗೆ ನಿರ್ದೇಶಕ ಯೋಗರಾಜ್ ಭಟ್ ಮಾಡಿದ ಶುಭಾಷಯ ಈಗ ಸಣ್ಣ ಮಟ್ಟಿನ ಚರ್ಚೆ ಹುಟ್ಟುಹಾಕಿದೆ.

ಸಾಮಾನ್ಯವಾಗಿ ಹೀರೋಗಳ ಬರ್ತ್‌ಡೇ ಇದ್ದಾಗ, ಅವರ ನಟನೆಯ ಸಿನಿಮಾ ತಂಡದವರು ಜನ್ಮದಿನದ ಶುಭಾಶಯಗಳನ್ನು ಕೋರುವ ಪೋಸ್ಟರ್‌ಗಳನ್ನು ರಿಲೀಸ್ ಮಾಡೋದು ಸಹಜ. ಅಂತೆಯೇ, ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಚಿತ್ರತಂಡದಿಂದಲೂ ಶುಭಾಶಯದ ಪೋಸ್ಟರ್ ರಿಲೀಸ್ ಆಗಿದೆ. ಅದರಲ್ಲಿ ‘ಹುದ್ದಿಟಹಬ್ಬದ ಶುಶಾಭಯ’ ಅಂತ ಬರೆಯಲಾಗಿದೆ. ಇದನ್ನು ನೋಡಿದ ಅನೇಕರು ಕನ್‌ಪ್ಯೂಸ್ ಆಗಿದ್ದಾರೆ. ‘ಅರೇ, ಯೋಗರಾಜ್‌ ಭಟ್ಟರಿಗೆ ಕನ್ನಡ ಬರೋದಿಲ್ವೇ? ಇದ್ಯಾಕೆ ತಪ್ಪಾಗಿ ಶುಭ ಕೋರಿದ್ದಾರೆ’ ಅಂತೆಲ್ಲ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಸ್ಪಷ್ಟನೆ ನೀಡಿದ ಭಟ್ರು:
ಉದ್ದೇಶಪೂರ್ವಕವಾಗಿಯೇ ‘ಹುದ್ಟಿಟಹಬ್ಬದ ಶುಶಾಭಯ’ ಎಂದು ತಪ್ಪಾಗಿ ಬರೆಯಲಾಗಿದೆ ಎಂದು ಯೋಗರಾಜ್ ಭಟ್ ಹೇಳಿದ್ದು, ಗಾಳಿಪಟ 2 ಸಿನಿಮಾದಲ್ಲಿ ಗಣೇಶ್ ಅವರ ಪಾತ್ರ ಹಾಗೂ ಒಟ್ಟಾರೆ ಕತೆಯಲ್ಲಿ ಕನ್ನಡದ ತಪ್ಪಾದ ಬಳಕೆ ಸಹ ಭಾಗವೇ ಆಗಿದ್ದು, ಅದನ್ನು ಸೂಚಿಸುವ ಸಲುವಾಗಿ ಹೀಗೆ ತಪ್ಪಾಗಿ ಬರೆಯಲಾಗಿದೆ ಎಂದಿದ್ದಾರೆ.

ಗಾಳಿಪಟ ಚಿತ್ರದಲ್ಲಿ ದಯವಿಟ್ಟು ಪದವನ್ನು ನಾಯಕ ‘ದಯವಿಣ್ಣು’ ಎಂದು ಬರೆದಿರುತ್ತಾನೆ. ಅದನ್ನು ಜನ ಎಂಜಾಯ್ ಮಾಡಿದ್ದರು. ಇಲ್ಲಿಯೂ ಅಂತಹ ಮಜವಾದ ಅನೇಕ ಸಂಗತಿಗಳಿವೆ. ಈಗಿನ ಯುವಕರ ಕನ್ನಡದ ಬಳಕೆ, ಅವರ ಐಲುತನಗಳು, ಯೋಚನೆಗಳೆಲ್ಲವೂ ಈ ಚಿತ್ರದಲ್ಲಿರುತ್ತದೆ. ದಯವಿಟ್ಟು ಇದರ ಹಿಂದಿರುವ ವ್ಯಂಗ್ಯವನ್ನು ಅರ್ಥ ಮಾಡಿಕೊಳ್ಳಿ. ಗಣೇಶ್ ಯಾಕೆ ಇಂತಹ ಡೈಲಾಗ್ ಹೇಳುತ್ತಾರೆ ಎನ್ನುವುದನ್ನು ನೀವು ಸಿನಿಮಾ ನೋಡಿ ತಿಳಿಯಬೇಕು ಎಂದು ಯೋಗರಾಜ್ ಭಟ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top