fbpx
ಸಮಾಚಾರ

ಸ್ಯಾಂಡಲ್‌ವುಡ್‌ನ ಉದಯೋನ್ಮುಖ ನಟ ಸುಶೀಲ್ ಗೌಡ ಆತ್ಮಹತ್ಯೆ

ಈಗಷ್ಟೆ ಸ್ಯಾಂಡಲ್​ವುಡ್​ಗೆ ಕಾಲಿಟ್ಟು, ಭವಿಷ್ಯದಲ್ಲಿ ನಾಯಕನಾಗುವ ಕನಸು ಕಂಡಿದ್ದ ಉದಯೋನ್ಮುಖ ನಟ ಸುಶೀಲ್​ ಗೌಡ. ತಮ್ಮ ಹುಟ್ಟೂರಾದ ಮಂಡ್ಯದಲ್ಲಿ ನಿನ್ನೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ದುನಿಯಾ ವಿಜಯ್​ ಅವರ ಸಲಗ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಸುಶೀಲ್​ ನಟಿಸಿದ್ದರು.

ಮಂಡ್ಯದ ವಿವಿ ನಗರ ಬಡಾವಣೆ ನಿವಾಸಿಯಾಗಿದ್ದ ಸುಶೀಲ್​ ಬೆಂಗಳೂರಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡ್ತಿದ್ದರು. ಜೊತೆಗೆ ದುನಿಯಾ ವಿಜಿ ನಟನೆಯ ಸಲಗ ಹಾಗೂ ಕಮರೊಟ್ಟು ಚೆಕ್​ಪೋಸ್ಟ್ ಸಿನಿಮಾಗಳಲ್ಲಿಯೂ ನಟಿಸಿದ್ದರು. ‘ಅಂತಃಪುರ’ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದರು.

ಲಾಕ್​ಡೌನ್​ನಿಂದ ಕಳೆದ‌ ಮೂರು ತಿಂಗಳಿನಿಂದ‌ ಸುಶೀಲ್​ಗೆ ಜಿಮ್ ನಡೆಸಲು ಆಗಿರಲಿಲ್ಲ. ಹೀಗಾಗಿ ಜೀವನದಲ್ಲಿ ಜುಗುಪ್ಸೆಗೊಂಡಿದ್ದರು ಎಂದು ತಿಳಿದುಬಂದಿದೆ. ಈ ಮಧ್ಯೆ ಇಂಡುವಾಳು ಗ್ರಾಮದಲ್ಲಿರೊ ತನ್ನ ಸ್ನೇಹಿತನ ಮನೆಗೆ ತೆರಳಿ ಅಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸುಶೀಲ್​ ನಿನ್ನೆ ಆತ್ಮಹತ್ಯೆಗೆ ಶರಣಾಗಿರುವ ವಿಷಯ ತಿಳಿದ ಕೂಡಲೇ ನಟ ದುನಿಯಾ ವಿಜಯ್​ ಅವರು ತಮ್ಮ ಫೇಸ್​ಬುಕ್​ನಲ್ಲಿ ನೋವಿನಿಂದ ಬರೆದುಕೊಂಡಿದ್ದಾರೆ.

ವಿಜಯ್ ಪೋಸ್ಟ್ ಈ ರೀತಿ ಇದೆ:
‘ಸಲಗ’ ಚಿತ್ರದಲ್ಲಿ ಒಂದು ಒಳ್ಳೆಯ ಪೊಲೀಸ್ ಪಾತ್ರವಿದೆ. ಅದನ್ನು ಒಬ್ಬ ಸ್ಫುರದ್ರೂಪಿ ಹುಡುಗ ನಿರ್ವಹಿಸಿದ್ದ. ಆತನ ಹೆಸರು ಸುಶೀಲ್ ಅಂತ. ಮಂಡ್ಯದವನು. ಆತನ ನೋಡ್ತಿದ್ರೆ ಮುಂದೊಮ್ಮೆ ಹೀರೋ ಆಗಬಹುದಾದ ಹುಡುಗ ಅಂತ ಮನಸ್ಸಲ್ಲೇ ಅಂದ್ಕೊಂಡಿದ್ದೆ. ಆದ್ರೆ ಅದೇನಾಯ್ತೋ ಗೊತ್ತಿಲ್ಲ; ನಿನ್ನೆ ಇರಬೇಕು ಆತ್ಮಹತ್ಯೆ ಮಾಡ್ಕೊಂಡಿದ್ದಾನೆ ಅಂತ ಗೊತ್ತಾಯ್ತು. ನನಗೆ ಈಗಲೂ ನಂಬೋಕೆ ಆಗ್ತಿಲ್ಲ. ಇಂಡಸ್ಟ್ರೀನಲ್ಲಿ ಬೆಳೆಯಬೇಕು ಅಂತ ಬರೋರು ಸಿನಿಮಾದಲ್ಲಿ ಒಂದೊಳ್ಳೆಯ ಅವಕಾಶ ಸಿಕ್ಕಮೇಲೂ ಚಿತ್ರ ಬಿಡುಗಡೆಗೂ ಕಾಯದೆ ಆತ್ಮಹತ್ಯೆ ಮಾಡ್ಕೊಳ್ಳೋದು ಅಂದರೆ ಏನು?! ನಿಮ್ಮ ಸಮಸ್ಯೆ ಎಷ್ಟೇ ದೊಡ್ಡದಿರಬಹುದು. ಆದರೆ ಸಾವು ಅದಕ್ಕೆ ಪರಿಹಾರವಾಗುತ್ತಾ? ಸಮಸ್ಯೆಗೆಲ್ಲ ಸಾವಲ್ಲೇ ಉತ್ತರ ಕಾಣೋದಾದ್ರೆ ಬಹುಶಃ ಭೂಮೀಲಿ ಯಾರೊಬ್ಬರೂ ಉಳಿದಿರಲ್ಲ ಅನ್ಸುತ್ತೆ!

ಸುಶೀಲ್ ವಯಸ್ಸು ಮೂವತ್ತರ ಆಸುಪಾಸು ಇರಬಹುದು. ನಮ್ಜತೆ ಶೂಟಿಂಗಲ್ಲಿದ್ದಿದ್ದು ಬೆರಳೆಣಿಕೆ ದಿನಗಳಷ್ಟೇ. ಅಷ್ಟಕ್ಕೇನೇ ನಮಗಿಷ್ಟೊಂದು ನೋವಾಗ್ತಿದೆ. ಹಾಗಾದರೆ ಈ ಮೂವತ್ತು ವರ್ಷಗಳ ಕಾಲ ಜತೆಗಿದ್ದ ಮನೆಯವರಿಗೆ ಹೇಗಾಗಬೇಡ?! ಸತ್ತ ಮೇಲೆ ಮಾತನಾಡಿ ಉಪಯೋಗವಿಲ್ಲ ನಿಜ. ಆದರೆ ನನಗೇನೋ ಈ ವರ್ಷದ ಸಾವುಗಳ ಸರಣಿ ಇಲ್ಲಿಗೆ ಮುಗಿಯುತ್ತೆ ಅಂತ ಅನಿಸ್ತಿಲ್ಲ! ಯಾಕೆಂದರೆ ಪರಿಸ್ಥಿತಿ ಹಾಗಿದೆ. ಜನ ಕೊರೊನಾ ರೋಗಕ್ಕಷ್ಟೇ ಭಯಪಡುತ್ತಿಲ್ಲ; ಕೆಲಸ ಇರದೆ ಬದುಕಿನ ಭರವಸೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ನನ್ನ ಮನವಿ ಅಂಥವರಿಗೂ ಕೂಡ ಆಗಿದೆ.

ನಾವೆಲ್ಲ ರಾಮ ಸೀತೆ ಕಥೆ ಕೇಳಿಯೇ ಬೆಳೆದಿರುತ್ತೇವೆ. ದೇವರಾಗಿದ್ದರೂ ಮನುಷ್ಯ ರೂಪದಲ್ಲಿ ಎಷ್ಟೊಂದು ಕಷ್ಟ ಅನಿಭವಿಸಬೇಕಾಗಿತ್ತೆ ಅನ್ನೋದು ಅದರ ತಾತ್ಪರ್ಯ. ಅಂಥ ಕಷ್ಟ ನಮಗೆಲ್ಲ ಬಂದೇ ಇರುವುದಿಲ್ಲ. ಆದರೂ ಬದುಕು ಸಾಕಾಗಿ ಬಿಡುತ್ತದೆ ಅನ್ನೋದೇ ವಿಪರ್ಯಾಸ. ನಮ್ಮ ಧರ್ಮ ಓದಿ ಕೈ ಮುಗಿಯೋಕಷ್ಟೇ ಇರೋದಲ್ಲ. ಬದುಕಲ್ಲಿ ಅಳವಡಿಸೋಕೂ ಹೌದು. ಇಲ್ಲಿ ಸ್ಟಾರಾಗಿರೋ ಪ್ರತಿಯೊಬ್ಬರೂ ಒಂದಲ್ಲ ಒಮ್ಮೆ ಪಾತಾಳದಷ್ಟು ಕಷ್ಟ ಕಂಡೇ ಇರುತ್ತಾರೆ. ಅಭಿಮನ್ಯು ತರಹ ಒಳಗೆ ಬರುವ ಕಥೆ ಮಾತ್ರ ತಿಳಿದು ಮುನ್ನುಗ್ಗಿ ಬಂದು ಕೈ ಚೆಲ್ಲಿದರೆ ಅದು ಸಾಧನೆ ಅಲ್ಲ; ವೇದನೆ.

ನೀವೇನೂ ಸತ್ತು ಹೋಗ್ತೀರಿ; ನಿಮಗೆ ಬೆಂಕಿ ಇಡಬೇಕಾದರೆ ಅಲ್ಲಿ ಜೀವ ಇರುವುದಿಲ್ಲ. ಆದರೆ ಜತೆಗಿರುವ ತಾಯಿ, ತಂದೆ, ಮಡದಿ ಜೀವನಪೂರ್ತಿ ಬೆಂಕಿಯಲ್ಲಿದ್ದಂಥ ಬದುಕು ಕೊಡ್ತೀರಲ್ಲ? ಇದೇನು ನ್ಯಾಯ? ಆತ್ಮಹತ್ಯೆ ಖಂಡಿತವಾಗಿ ತಪ್ಪು.

ಸುಶೀಲ್ ಆತ್ಮಕ್ಕೆ ‌ಶಾಂತಿ‌ ಸಿಗಲಿ. ಆದರೆ ಮುಂದೆ ಯಾವ ತಂದೆ ತಾಯಿಗೂ ಇಂಥ ದುಃಖ ಎದುರಿಸುವ ಸಂದರ್ಭ ಬಾರದಿರಲಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top