fbpx
ಸಮಾಚಾರ

ಪದ್ಮನಾಭಸ್ವಾಮಿ ದೇವಳದ ಹಕ್ಕು,ರಹಸ್ಯ ನಿಧಿ ನಿಕ್ಷೇಪದ ಕೋಣೆ ಬಗ್ಗೆ ಸುಪ್ರೀಂ ಮಹತ್ವದ ತೀರ್ಪು!

ಕೇರಳದ ತಿರುವನಂತಪುರಂ ಜಿಲ್ಲೆಯಲ್ಲಿರುವ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ನಿರ್ವಹಣೆ ಹಕ್ಕಿನ ವಿಚಾರವಾಗಿ ಇವತ್ತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ದೇವಸ್ಥಾನ ಕಟ್ಟಿದ ಟ್ರಾವಂಕೋರ್ ಮಹಾರಾಜರ ಮನೆತನದವರಿಗೆ ಈಗಲೂ ಈ ದೇವಸ್ಥಾನ ಮೇಲೆ ಹಕ್ಕು ಇದೆ ಎಂದು ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಈ ಮೂಲಕ ದೇವಸ್ಥಾನದ ಆಡಳಿತ ಮತ್ತು ಸಂಪತ್ತಿನ ನಿರ್ವಹಣೆಗಾಗಿ ಟ್ರಸ್ಟ್‌ ಸ್ಥಾಪಿಸುವಂತೆ ರಾಜ್ಯ ಸರಕಾರಕ್ಕೆ ಕೇರಳ ಹೈಕೋರ್ಟ್‌ 2011ರಲ್ಲಿ ನೀಡಿದ್ದ ನಿರ್ದೇಶನವನ್ನು ಸರ್ವೋಚ್ಚ ನ್ಯಾಯಾಲಯ ರದ್ದುಗೊಳಿಸಿದೆ.

ಪದ್ಮನಾಭ ಸ್ವಾಮಿ ದೇವಸ್ಥಾನದ ರಹಸ್ಯ ನಿಧಿ ನಿಕ್ಷೇಪ ಇದೆ ಎಂದು ನಂಬಿರುವ ನೆಲಮಾಳಿಗೆಯ ಪ್ರಮುಖ ಕೋಣೆಯ ಬಾಗಿಲನ್ನು ತೆರೆಯಬೇಕೆ ಅಥವಾ ಬೇಡವೇ ಎಂಬ ಬಗ್ಗೆ ರಾಜಮನೆತನದ ಸಂಪ್ರದಾಯದ ಪ್ರಕಾರ ಅಂತಿಮ ಸಮಿತಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.

ನ್ಯಾ.ಉದಯ್ ಲಲಿತ್, ನ್ಯಾ.ಇಂದು ಮಲೋತ್ರ ಅವರಿದ್ದ ಪೀಠ ಮಹತ್ವದ ತೀರ್ಪನ್ನು ಪ್ರಕಟಿಸಿದ್ದು, ಮಧ್ಯಂತರ ಕ್ರಮವಾಗಿ ಜಿಲ್ಲಾ ನ್ಯಾಯಾಧೀಶರ ನೇತೃತ್ವದ ಸಮಿತಿ ರಚನೆ ಮಾಡಲು ಸೂಚನೆ ನೀಡಲಾಗಿದೆ. ಆ ಸಮಿತಿಯ ಅಡಿ ಆಡಳಿತ ನೋಡಿಕೊಳ್ಳಲು ತಿರುವಾಂಕೂರು ರಾಜಮನೆತನದ ಕುಟುಂಬಕ್ಕೆ ಸೂಚನೆ ನೀಡಲಾಗಿದೆ.

ದಕ್ಷಿಣ ಕೇರಳ ಮತ್ತು ತಮಿಳುನಾಡಿನಲ್ಲಿ ಆಡಳಿತ ನಡೆಸಿದ್ದ ತಿರುವಾಂಕೂರು ರಾಜಮನೆತನ 18ನೇ ಶತಮಾನದಲ್ಲಿ ಅನಂತ ಪದ್ಮನಾಭ ದೇವಾಲಯವನ್ನು ಪುನರ್‌ ನಿರ್ಮಾಣ ಮಾಡಿತ್ತು. ಸ್ವಾತಂತ್ರ್ಯಾನಂತರ ಟ್ರಸ್ಟ್‌ ಮಾಡಿಕೊಂಡು ದೇಗುಲವನ್ನು ರಾಜಮನೆತನದವರೇ ನೋಡಿಕೊಳ್ಳುತ್ತಿದ್ದರು. ಆದರೆ ಈ ದೇಗುಲಯದಲ್ಲಿ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ದೇಗುಲವನ್ನು ಸರ್ಕಾರ ವಶಕ್ಕೆ ಪಡೆಯಬೇಕು ಎಂದು 2011ರ ಜ.31ರಂದು ಕೇರಳ ಹೈಕೋರ್ಟ್‌ ತೀರ್ಪು ನೀಡಿತ್ತು. ಇದನ್ನು ರಾಜಮನೆತನ ಪ್ರಶ್ನಿಸಿದ್ದು, ಕಳೆದ 9 ವರ್ಷಗಳಿಂದ ದಾವೆ ನಡೆಯುತ್ತಿತ್ತು. ಏ.10ರಂದು ಸುಪ್ರೀಂಕೋರ್ಟ್‌ ತೀರ್ಪು ಕಾದಿರಿಸಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top