fbpx
ಸಮಾಚಾರ

ಉಪಮುಖ್ಯಮಂತ್ರಿ ಸ್ಥಾನದಿಂದ ಸಚಿನ್ ಪೈಲಟ್ ಅಮಾನತು, ಅಧ್ಯಕ್ಷ ಸ್ಥಾನದಿಂದಲೂ ವಜಾ: ಕಾಂಗ್ರೆಸ್​ ಘೋಷಣೆ

ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು ಉಲ್ಬಣವಾಗಿದ್ದು, ಬಂಡಾಯವೆದ್ದಿರುವ ಉಪ ಮುಖ್ಯಮಂತ್ರಿ ಸಚಿನ್ ಪೈಲೆಟ್ ಅವರು ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಸಚಿನ್ ಪೈಲಟ್ ರನ್ನು ಉಪ ಮುಖ್ಯಮಂತ್ರಿ ಹಾಗೂ ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಅಮಾನತು ಮಾಡಲಾಗಿದೆ ಎಂದು ಎಐಸಿಸಿ ಘೋಷಿಸಿದೆ.

ಕಾಂಗ್ರೆಸ್‌ ಇಂದು ತನ್ನ ಶಾಸಕಾಂಗ ಪಕ್ಷದ ಸಭೆ ಕರೆದಿತ್ತು. ಜೈಪುರದ ಫೇರ್‌ಮೌಂಟ್‌ ಹೋಟೆಲ್‌ನಲ್ಲಿ ನಡೆದ ಈ ಸಭೆಯಲ್ಲಿ ಪಕ್ಷದ 102 ಶಾಸಕರು ಭಾಗವಹಿಸಿದ್ದರು (ಸರಳ ಬಹುಮತದ ಸಂಖ್ಯೆ) ಎನ್ನಲಾಗಿದ್ದು ಸಚಿನ್‌ ಪೈಲಟ್‌ ಅವರನ್ನು ಪಕ್ಷದಿಂದ ಹೊರಹಾಕಬೇಕು ಎಂದು ಒತ್ತಾಯಿಸಿದರು ಎಂದು ಹೇಳಲಾಗಿದೆ. ಈ ಕುರಿತು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಪಕ್ಷದ ಆದೇಶವನ್ನು ಉಲ್ಲಂಘಿಸಿರುವ ಸಚಿನ್ ಪೈಲಟ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ಒಕ್ಕೊರಲಿನ ಒತ್ತಾಯ ಕೇಳಿ ಬಂದಿದ್ದು, ಈ ನಿಟ್ಟಿನಲ್ಲಿ ಹೈಕಮಾಂಡ್ ಕಾರ್ಯೋನ್ಮುಖವಾಗಿದೆ ಎನ್ನಲಾಗಿದೆ. ಅದರ ಮೊದಲ ಭಾಗವಾಗಿ ಪೈಲಟ್ ಅವರನ್ನು ಉಪ ಮುಖ್ಯಮಂತ್ರಿ ಹುದ್ದೆಯಿಂದ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನದಿಂದ ಕಿತ್ತೊಗೆಯಲಾಯಿತು.

ಈ ಕುರಿತು ಮಾಹಿತಿ ನೀಡಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ, ಪಕ್ಷದ ಆದೇಶವನ್ನು ಧಿಕ್ಕರಿಸಿರುವ ಸಚಿನ್ ಪೈಲಟ್ ಅವರನ್ನು ಉಪ ಮುಖ್ಯಮಂತ್ರಿ ಮತ್ತು ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಲಾಗಿದೆ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಾಯಕ ಗೋವಿಂದ್ ಸಿಂಗ್ ದೋತಾಸ್ರಾ ಅವರನ್ನು ನೇಮಕ ಮಾಡಲಾಗಿದೆ ಎಂದು ಸುರ್ಜೆವಾಲಾ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top