fbpx
ಸಮಾಚಾರ

ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೂ ವಂಶಾವಳಿಗಳ ಕಾಟ: ಮಕ್ಕಳಿಗಾಗಿ ಲಾಬಿ ಶುರು ಮಾಡಿದ ‘ಕೈ’ ನಾಯಕರು?

ಕೆಪಿಸಿಸಿ ನೂತನ ಅಧ್ಯಕ್ಷ ಡಿಕೆ ಶಿವಕುಮಾರ್ ಪಟ್ಟಾಭಿಷೇಕ ಬೆನ್ನಲ್ಲೇ ಇದೀಗ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ. ಕರ್ನಾಟಕ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಸ್ಥಾನ ಸದ್ಯದಲ್ಲೇ ಖಾಲಿಯಾಗಲಿದ್ದು, ಈ ಹಿನ್ನೆಲೆಯಲ್ಲಿ ಪೈಪೋಟಿ ಶುರುವಾಗಿದೆ. ಬಸನಗೌಡ ಬಾದರ್ಲಿ ಅವಧಿ ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯವಾಗುವ ಹಿನ್ನೆಲೆ ರಾಜ್ಯ ಕೈ ಪಾಳಯದಲ್ಲಿ ರಾಜಕಾರಣಿಗಳ ಮಕ್ಕಳ ಲಾಬಿ ಜೋರಾಗಿದೆ ಅಂತಾ ಹೇಳಲಾಗಿದೆ.

ಸೌಮ್ಯಾ ರೆಡ್ಡಿ, ಆನಂದ್ ನ್ಯಾಮಗೌಡ, ಕೆಂಪೇರಾಜಗೌಡ, ರಾಜೇಂದ್ರ ರಾಜಣ್ಣ,ಕೆ ಶಿವಕುಮಾರ್, ಮಿಥುನ್ ರೈ, ರಕ್ಷಾ ರಾಮಯ್ಯ, ಮಂಜುನಾಥ ಗೌಡ, ಮೊಹಮ್ಮದ್ ನಲಪಾಡ್ ಸೇರಿದಂತೆ ಹತ್ತಾರು ಮಂದಿ ಯುವ ಘಟಕದ ಚುಕ್ಕಾಣಿ ಹಿಡಿಯಲು ಉತ್ಸುಕರಾಗಿದ್ದಾರೆ. ಶಾಸಕ ಕೆ.ಎನ್ ರಾಜಣ್ಣ ತಮ್ಮ ಪುತ್ರ ರಾಜೇಂದ್ರ, ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿಯವರು ತಮ್ಮ ಪುತ್ರಿ ಹಾಗೂ ಜಯನಗರ ಶಾಸಕಿ ಸೌಮ್ಯಾ ರಾಮಲಿಂಗಾ ರೆಡ್ಡಿ, ಶಾಸಕ ಎನ್.ಎ, ಹ್ಯಾರಿಸ್ ಅವರು ಅವರ ಪುತ್ರ ಮುಹಮ್ಮದ್ ನಲಪಾಡ್’ಗಾಗಿ ಲಾಬಿ ನಡೆಸುತ್ತಿದ್ದಾರೆ. ಇನ್ನು ಸ್ಪರ್ಧೆಯಲ್ಲಿ ರಾಷ್ಟ್ರೀಯ ವಿದ್ಯಾರ್ಥಿ ಸಂಘ (ಕರ್ನಾಟಕ ಅಧ್ಯಕ್ಷ) ಎಚ್.ಎಸ್.ಮಂಜುನಾಥ್ ಕೂಡ ಇದ್ದಾರೆನ್ನಲಾಗುತ್ತಿದೆ.

ಇಂಡಿಯನ್ ಯೂತ್ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದ ಮುಖ್ಯಸ್ಥರಾಗಿ ಎಂ.ಎಸ್. ರಕ್ಷಾ ರಾಮಯ್ಯ ಸೇವೆ ಸಲ್ಲಿಸಿರುವ ಅನುಭವವಿದೆ. ಸೌಮ್ಯಾರೆಡ್ಡಿ ಶಾಸಕಿಯಾಗಿರುವ ಜೊತೆಗೆ ಕೆಪಿಸಿಸಿ ಯುವಘಟಕದಲ್ಲಿ ಕಾರ್ಯದರ್ಶಿಯೂ ಹೌದು. ಮಿಥುನ್ ರೈ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದವರು. ಅಲ್ಲದೇ ದಕ್ಷಿಣ ಕನ್ನಡ ಭಾಗದಲ್ಲಿ ತಮ್ಮದೇ ಆದ ಹಿಡಿತ ಹೊಂದಿದ್ದಾರೆ. ರಾಜೇಂದ್ರ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದವರು.

ನಲಪಾಡ್ ಸಂಘಟನಾ ಚತುರುನಾಗಿರುವುದರಿಂದ ಅಲ್ಪಸಂಖ್ಯಾತರ ಕಾಂಗ್ರೆಸ್ ಮುಖಂಡರು ನಲಪಾಡ್ ಪರ ವಕಾಲತ್ತು ಶುರುಮಾಡಿದ್ದಾರೆ. ಹ್ಯಾರೀಸ್ ಸಹ ಪುತ್ರನಿಗೆ ಜವಾಬ್ದಾರಿ ವಹಿಸುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಗೆ ಒತ್ತಡ ಹೇರುತ್ತಿದ್ದಾರೆ. ರಾಜಣ್ಣ ತುಮಕೂರಿನಲ್ಲಿ ಪರಮೇಶ್ವರ್ ಸೋಲಿನಲ್ಲಿ ಪಾತ್ರವಹಿಸಿದ್ದರು ಕೂಡ. ಅಲ್ಲದೇ ತುಮಕೂರಿನಲ್ಲಿ ಹೆಚ್.ಡಿ.ದೇವೇಗೌಡ ಲೋಕಸಭಾ ಸೋಲಿಗೂ ಕಾರಣರಾಗಿದ್ದವರು.

ಇನ್ನು ಕನಕಪುರ ಮೂಲದ ಕೆಂಪರಾಜು, ಎನ್ಎಸ್ ಯುಐನ ಮಂಜುನಾಥ್ ಡಿ.ಕೆ.ಶಿವಕುಮಾರ್ ಬೆಂಬಲಿಗರಾಗಿದ್ದು, ತಮ್ಮನ್ನು ಸಹ ಯುವಘಟಕಕ್ಕೆ ಪರಿಗಣಿಸುವಂತೆ ಲಾಬಿ ನಡೆಸಿದ್ದಾರೆ. ಈ ಹಿಂದೆ ಯುವಘಟಕಕ್ಕೆ ಚುನಾವಣೆ ನಡೆಸಲಾಗುತ್ತಿತ್ತು. ಬಸನಗೌಡ ಬಾದರ್ಲಿ ಸ್ಪರ್ಧಿಸಿದ ಸಂದರ್ಭದಲ್ಲಿ ಚುನಾವಣೆಯಲ್ಲಿ ಗೋಲ್ಮಾಲ್ ಮಾಡಲಾಗಿದೆ. ಮತಪೆಟ್ಟಿಗೆಯಲ್ಲಿ ಬದಲಾವಣೆಯಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ಒಟ್ಟಿನಲ್ಲಿ ಕೆಪಿಸಿಸಿ ನೂತನ ಅಧ್ಯಕ್ಷರ ಪದಗ್ರಹಣ ಬಳಿಕ ಕಾಂಗ್ರೆಸ್ ಯುವ ಘಟಕದ ರಾಜ್ಯಾಧ್ಯಕ್ಷ ನೇಮಕಾತಿಗೆ ಕಾಂಗ್ರೆಸ್ ಯುವ ಕಾರ್ಯಕರ್ತರಲ್ಲಿ ಒತ್ತಡ ಹೆಚ್ಚುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಹೈ ಕಮಾಂಡ್ ಏನು ಮಾಡುತ್ತೆ ಎಂದು ಕಾದು ನೋಡಬೇಕಿದೆ,. ಅಂತಿಮವಾಗಿ ಯುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಚನಾವಣೆ ನಡೆಯಲಿದೆಯೋ ಅಥವಾ ನೇಮಕ ಪ್ರಕ್ರಿಯೆ ನಡೆಯಲಿದೆಯೋ ಎಂಬ ಕುತೂಹಲ ಮೂಡಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top