fbpx
ಸಮಾಚಾರ

ಡಾ.ರಾಜ್‌ಕುಮಾರ್‌ಗೆ ಭಾರತ ರತ್ನ ಕೊಡಬೇಕೆಂದು ಆಗ್ರಹಿಸಿ ‘ಸಹಿ ಸಂಗ್ರಹ’ ಅಭಿಯಾನ ಆರಂಭಿಸಿದ ಸಾಮಾನ್ಯ ಕನ್ನಡಿಗ

ಕರ್ನಾಟಕ ಸಾಂಸ್ಕೃತಿಕ ರಾಯಭಾರಿಗಳಾದ, ಅಭಿಮಾನಿಗಳನ್ನು ದೇವರು ಎಂದಿದ್ದ ಮೇರು ನಟ ಡಾ.ರಾಜ್ ಕುಮಾರ್ ರವರಿಗೆ ಮರಣೋತ್ತರವಾಗಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ನೀಡಬೇಕೆಂದು ಮಾನ್ಯ ಪ್ರಧಾನಿಯವರಿಗೆ ಸಂಸದ ಜಿಸಿ ಚಂದ್ರಶೇಖರ್ ಮನವಿ ಮನವಿ ಮಾಡಿಕೊಂಡಿದ್ದಾರೆ. ಈ ದೆಸೆಯಲ್ಲಿ ಸಂಸದ ಜಿ.ಸಿ ಚಂದ್ರಶೇಖರ್ ಬೆಂಬಲವಾಗಿ ಸಾಮಾನ್ಯ ಕನ್ನಡಿಗ ತಂಡದಿಂದ ಸಹಿ ಸಂಗ್ರಹ ಅಭಿಯಾನ ಆರಂಭವಾಗಿದೆ.

ಎಲ್ಲಾ ಕನ್ನಡಿಗರು ತಪ್ಪದೆ ಈ ಸಹಿ ಅಭಿಯಾನದಲ್ಲಿ ಪಾಲ್ಗೊಂಡು ಅಣ್ಣಾವ್ರಿಗೆ ಭಾರತ ರತ್ನ ಸಿಗಲಿ ಎಂಬ ಕೂಗಿಗೆ ದನಿಗೂಡಿಸಿ. ಮತ್ತು ಸಹಿ ಅಭಿಯಾನದ ಲಿಂಕ್ ಅನ್ನು ಫೇಸ್ಬುಕ್ ಮತ್ತು ವಾಟ್ಸಾಪ್ ಮೂಲಕ ತಮ್ಮ ಸ್ನೇಹಿತರ ಜೊತೆ ಹೆಚ್ಚೆಚ್ಚು ಶೇರ್ ಮಾಡಬೇಕೆಂದು ಸಾಮಾನ್ಯ ಕನ್ನಡಿಗ ತಂಡ ಕೇಳಿಕೊಳ್ಳುತ್ತದೆ.

 

ಸಹಿ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ

https://www.change.org/p/prime-minister-of-india-bharat-ratna-award-posthumously-to-padmabhushan-dr-rajkumar

 

ಡಾ. ರಾಜ್‍ಕುಮಾರ್ ಕನ್ನಡ ಚಿತ್ರರಂಗ ಕಂಡಂತಹ ಮೇರು ನಟ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಸಹಜಾಭಿನಯದಿಂದ ಪ್ರೇಕ್ಷಕರ ಹೃದಯದಲ್ಲಿ ಶಾಶ್ವತ ಸ್ಥಾನ ಗಿಟ್ಟಿಸಿಕೊಂಡ ಕಲಾವಿದ. ಕನ್ನಡ ನಾಡು, ನುಡಿಗಾಗಿ ತಮ್ಮದೇ ಕೊಡುಗೆ ನೀಡಿರುವ ವರನಟ ಡಾ.ರಾಜ್‌ಕುಮಾರ್‌ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂಬುದು ಇಡೀ ಕನ್ನಡಿಗರ ಒತ್ತಾಸೆಯಾಗಿತ್ತು.

ಇದೀಗ ಕನ್ನಡಿಗರ ಈ ಆಶಯಕ್ಕೆ ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಶಕ್ತಿ ತುಂಬಿದ್ದು ವರನಟ ಡಾ.ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ‘ಭಾರತ ರತ್ನ’ ಪ್ರಶಸ್ತಿ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿಕೊಂಡಿದ್ದಾರೆ.

 

 

ಚಂದ್ರಶೇಖರ್ ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಈ ರೀತಿ ಮನವಿ ಮಾಡಿಕೊಂಡಿದ್ದಾರೆ.

ತಮ್ಮ ಬಹುಮುಖ ಪಾತ್ರಗಳ ಮೂಲಕ ಭಾರತೀಯ ಚಿತ್ರರಂಗಕ್ಕೆ ನೀಡಿದ ಅಪಾರ ಕೊಡುಗೆಗಳಿಗಾಗಿ, ಕನ್ನಡ ಧೀಮಂತ ನಟ, ದಿವಂಗತ ಪದ್ಮಭೂಷಣ ಡಾ.ರಾಜಕುಮಾರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು 8 ಕೋಟಿ ಕನ್ನಡಿಗರ ಪರವಾಗಿ ನಿಮಗೆ ಪತ್ರವನ್ನು ಬರೆಯುತ್ತಿದ್ದೇನೆ.” ಎಂದು ಚಂದ್ರಶೇಖರ್ ಮನವಿ ಮಾಡಿಕೊಂಡಿದ್ದಾರೆ.

 

 

ಡಾ. ರಾಜ್‌ಕುಮಾರ್ ಅವರು ಕನ್ನಡ ಚಿತ್ರರಂಗದ ಬೆಳವಣಿಗೆ ಮತ್ತು ಅಭಿವೃದ್ಧಿಗೆ 40 ವರ್ಷ ಬರೋಬ್ಬರಿ 206 ಚಿತ್ರಗಳಲ್ಲಿ ನಟಿಸಿದ್ದಾರೆ. ಡಾ. ರಾಜ್ ಅವರು ವಿವಿಧ ಪ್ರಕಾರದ ಪಾತ್ರಗಳಲ್ಲಿ ನಟಿಸಿದ್ದಾರೆ, ಗಾಯನಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ, ಯೋಗ ತರಬೇತಿ ಪಡೆದು ಉತ್ತಮ ಯೋಗಪಟು ಎನಿಸಿಕೊಂಡಿದ್ದರು. ಪೌರಾಣಿಕ ಸಿನಿಮಾಗಳಿಂದ ಹಿಡಿದು ಸಾಮಾಜಿಕ ಚಿತ್ರಗಳ ನಟನೆಯಿಂದಲೇ ಅವರು ಜಗತ್ತಿನಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಮತ್ತು ಅನೇಕ ಜನರಿಗೆ ಸ್ಪೂರ್ತಿದಾಯಕವಾಗಿದ್ದಾರೆ.

ಉದಾಹರಣೆಗೆ, ‘ಬಂಗಾರದ ಮನುಷ್ಯ’ ಎಂಬ ಚಲನಚಿತ್ರವನ್ನು ನೋಡಿದ ನಂತರ ಆ ಸಮಯದಲ್ಲಿ ಅನೇಕ ಯುವಕರು ನಗರಗಳಿಂದ ತಮ್ಮ ಹಳ್ಳಿಗಳಿಗೆ ಹೋಗಿ ವ್ಯವಸಾಯ ಪ್ರಾರಂಭಿಸಲು ಶುರು ಮಾಡಿದ್ದರು. ‘ಜೀವನಾ ಚೈತ್ರಾ’ ಚಿತ್ರದಲ್ಲಿ, ಡಾ.ರಾಜ್ ಆಲ್ಕೊಹಾಲ್ ನ ಅಪಾಯವನ್ನು ಒತ್ತಿ ಹೇಳಿದರು- ಆಗ ಅವರನ್ನು ಆರಾಧಿಸುತ್ತಿದ್ದ ಅಪಾರ ಅಭಿಮಾನಿ ಬಳಗ ಮದ್ಯಪಾನವನ್ನು ತೊರೆದಿತ್ತು. ಅಸಂಖ್ಯಾತ ಚಲನಚಿತ್ರಗಳ ಪಟ್ಟಿಯಲ್ಲಿ ಡಾ. ರಾಜ್ ಅವರ ಇಂಥಾ ಅದ್ಭುತ ಪಾತ್ರಗಳ ಪಟ್ಟಿ ಬೆಳೆಯುತ್ತದೆ. ಮತ್ತೊಂದು ಉದಾಹರಣೆಯೆಂದರೆ, ಡಾ. ರಾಜ್ ಮರಣದ ನಂತರ ಅವರ ಕಣ್ಣುಗಳನ್ನು ಅವರ ಇಚ್ಛೆಯಂತೆ ದಾನ ಮಾಡಲಾಯಿತು, ಇದು ಸಾವಿರಾರು ಅನುಯಾಯಿಗಳಿಗೆ ಪ್ರೇರಿತವಾಗಿ ಕಣ್ಣಿನ ದಾನಕ್ಕಾಗಿ ಮಾತ್ರವಲ್ಲದೆ ಇತರ ಅಂಗಾಂಗ ದಾನಕ್ಕೂ ಅವರ ಅಭಿಮಾನಿಗಳು ಮುಂದಾಗಿದ್ದಾರೆ.

ಡಾ. ರಾಜ್ ಅವ್ರು ತಮ್ಮ ಯಾವುದೇ ಸಿನಿಮಾಗಳಲ್ಲಿ ಮದ್ಯಪಾನ, ಧೂಮಪಾನ, ತಂಬಾಕು, ಮಾದಕ ವಸ್ತುಗಳು ಅಥವಾ ಯಾವುದೇ ಸಾಮಾಜಿಕ ವಿರೋಧಿ ಪ್ರತಿಜ್ಞೆ ಪದಗಳನ್ನು ಎಂದಿಗೂ ವೈಭವೀಕರಿಸಿ ಹೇಳಿಲ್ಲ. ಅಷ್ಟೇ ಅಲ್ಲದೆ ಅವರು ಯಾವಾಗಲೂ ಯುವಕರಿಗೆ ಉತ್ತಮ ಸಾಮಾಜಿಕ ಸಂದೇಶಗಳನ್ನು ನೀಡುವ ಪಾತ್ರಗಳಲ್ಲಿಯೇ ನಟಿಸುತ್ತಿದ್ದರು.

ರಾಜ್ಯಕ್ಕೆ, ರಾಜ್ಯದ ಜನರಿಗೆ, ಕನ್ನಡ ಭಾಷೆಗೆ ಡಾ.ರಾಜ್ ಯಾವಾಗಲೂ ಸಾಂಸ್ಕೃತಿಕ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈಗಲೂ ಬಹುಪಾಲು ಕನ್ನಡಿಗರು ಅವರನ್ನು ತಮ್ಮ ಜೀವನಕ್ಕೆ ಆದರ್ಶಪ್ರಾಯವೆಂದು ತೆಗೆದುಕೊಂಡಿದ್ದಾರೆ. ಡಾ. ರಾಜ್ ಕುಮಾರ್ ಅವರು ಭಾರತೀಯ ಚಿತ್ರರಂಗದಲ್ಲಿ ಅನನ್ಯ ನಟರಾಗಿದ್ದರು. ಅತೀ ಹೆಚ್ಚು ಸಂಖ್ಯೆಯ ಅಭಿಮಾನಿ ಸಂಘಗಳನ್ನು ಡಾ.ರಾಜ್ ಹೊಂದಿದ್ದಾರೆ ಮತ್ತು ಅತಿ ಹೆಚ್ಚು ಸಂಖ್ಯೆಯಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಡಾ.ರಾಜ್ ಅವರ ಪ್ರತಿಮೆಗಳು ಸ್ಥಾಪಿತವಾಗಿವೆ.

ಡಾ. ರಾಜ್ ಕುಮಾರ್ ಅವರು 1983 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದರು. ಕರ್ನಾಟಕ ಸರ್ಕಾರವು ಅವರಿಗೆ 1992 ರಲ್ಲಿ ಅತ್ಯುನ್ನತ ರಾಜ್ಯ ನಾಗರಿಕ ಪ್ರಶಸ್ತಿ ‘ಕರ್ನಾಟಕ ರತ್ನ’ ವನ್ನು ನೀಡಿತು. ಭಾರತ ಸರ್ಕಾರವು ಅವರಿಗೆ 1995 ರಲ್ಲಿ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿಯನ್ನು ನೀಡಿತು. 1985 ರಲ್ಲಿ ಅವರು ಪ್ರತಿಷ್ಠಿತ ‘ಕೆಂಟುಕಿ ಕರ್ನಲ್ ಪ್ರಶಸ್ತಿ’ಯನ್ನು ಸಹ ಪಡೆದರು, ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಅಂದಿನ ಅಮೇರಿಕದ ಕೆಂಟುಕಿ ರಾಜ್ಯದ ಗವರ್ನಲ್ ರಾಜ್ ಅವರಿಗೆ ಪ್ರದಾನ ಮಾಡಿದ್ದರು.

ಭಾರತ ರತ್ನ ಪ್ರಶಸ್ತಿಯನ್ನು ಎಂ.ಜಿ.ರಾಮಚಂದ್ರನ್, ಸತ್ಯಜಿತ್ ರೇ, ಲತಾ ಮಂಗೇಶ್ಕರ್, ಭೂಪೆನ್ ಹಜಾರಿಕಾ ಮುಂತಾದ ಖ್ಯಾತ ಚಲನಚಿತ್ರ ವ್ಯಕ್ತಿಗಳಿಗೆ ಪ್ರದಾನ ಮಾಡಲಾಗಿದೆ. ಆದ್ದರಿಂದ ಭಾರತ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ಡಾ.ರಾಜ್ ಕುಮಾರ್ ಅವರಿಗೆ ನೀಡಬೇಕೆಂದು ಸಮಸ್ತ ಕನ್ನಡಿಗರ ಪರವಾಗಿ ವಿನಂತಿಸುತ್ತೇನೆ.. ಧನ್ಯವಾದಗಳು……”

ಹೀಗೆ ಸಂಸದ ಜಿಸಿ ಚಂದ್ರಶೇಖರ್ ಅವರು ತಮ್ಮ ಪತ್ರದಲ್ಲಿ ವಿಸ್ತಾರವಾಗಿ ಡಾ ರಾಜ್ ಅವರ ಬಗ್ಗೆ ಬರೆದು ಅವರ ಸಾಧನೆಗಳ ಬಗ್ಗೆ ಪ್ರಧಾನಿಗೆ ಮನವರಿಕೆ ಮಾಡುವ
ಪ್ರಯತ್ನ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top