fbpx
ಸಮಾಚಾರ

ಕೊರೊನಾದ ಮದ್ಯೆ ಸಿಎಂ BSYಗೆ ಎದುರಾಯ್ತು ‘ಕೋರ್ಟ್​’ ಸಂಕಷ್ಟ

ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ನಡೆದ ಉಪಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಗೋಕಾಕ್’ನ ಜೆಎಂಎಫ್’ಸಿ ನ್ಯಾಯಾಲಯ ಶುಕ್ರವಾರ ಸಮನ್ಸ್ ಜಾರಿ ಮಾಡಿದೆ.

ನವೆಂಬರ್ 23 ರಂದು ವಾಲ್ಮೀಕಿ ಸ್ಟೇಡಿಯಂ ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ್ದ ಯಡಿಯೂರಪ್ಪ ಅವರು, ವೀರಶೈವ-ಲಿಂಗಾಯತ ಸಮುದಾಯದ ಮತದಾರರಿಗೆ ವೀರಶೈವ ಸಮಾಜದ ಒಂದೇ ಒಂದು ಮತಗಳು ಆ ಕಡೆ, ಈ ಕಡೆ ಆಗದಂತೆ ಮತ ಚಲಾವಣೆ ಆಗಬೇಕು ಎಂದು ಹೇಳಿದ್ದರು. ಗೋಕಾಕ್ನಲ್ಲಿ ಲಿಂಗಾಯತ-ವೀರಶೈವ ಪ್ರಬಲ ಸಮುದಾಯಗಳಾಗಿದ್ದು, ವೀರಶೈವ ಮತದಾರರನ್ನು ಬಲಪಡಿಸುವ ಯತ್ನ ನಡೆಸಿದ್ದರು ಎಂಬ ಆರೋಪಗಳು ಕೇಳಿ ಬಂದಿದ್ದವು.

ಚುನಾವಣೆ ವೇಳೆ ನಿರ್ದಿಷ್ಟ ಜನಾಂಗವನ್ನು ಓಲೈಸುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಫ್ಲೈಯಿಂಗ್‌ ಸ್ಕ್ವಾಡ್‌ ಅಧಿಕಾರಿಯಾಗಿದ್ದ ಲಕ್ಷ್ಮಣ ತುಕ್ಕಪ್ಪ ಹಾಗೂ ಅವರ ಸಹಾಯಕ ಮಾರುತಿ ಗೋವಿಂದ ಉಪ್ಪಾರ ಅವರು ಜನಪ್ರತಿನಿಧಿಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು, ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಸಿದ್ದರು.

ಇದರ ವಿಚಾರಣೆ ನಡೆಸಿದ ನ್ಯಾಯಾಧೀಶ ಸಿ.ಕೆ. ವೀರೇಶಕುಮಾರ್‌ ಅವರು, ‘ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪುರಾವೆಗಳು ಲಭ್ಯ ಇವೆ ಎನ್ನುವುದು ನ್ಯಾಯಾಲಯಕ್ಕೆ ಮನವರಿಕೆಯಾಗಿದೆ. ಹೀಗಾಗಿ, ಪೊಲೀಸರು ಸಲ್ಲಿಸಿರುವ ಬಿ ರಿಪೋರ್ಟ್‌ ವಜಾಗೊಳಿಸಲಾಗಿದೆ’ ಎಂದು ಮುಖ್ಯಮಂತ್ರಿಗಳಿಗ ಸಮನ್ಸ್ ಜಾರಿ ಮಾಡಿದೆ ಎಂದು ತಿಳಿದುಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top