fbpx
ಸಮಾಚಾರ

ಈ ಅಪೂರ್ವ ಸ್ವಾತಂತ್ರ್ಯ ಹೋರಾಟಗಾರರನ್ನು ನಾವು ಮರೆತಿದ್ದೇವೆ!!!

ಭಾರತದ ಇತಿಹಾಸದ ಪುಟಗಳನ್ನು ತಿರುವಿ ಹಾಕಿ ನೋಡಿದಾಗ ನವೋದಯ ಚಳುವಳಿಯ ಹಾಗೂ ಸ್ವಾತಂತ್ರ್ಯ ಸಂಗ್ರಾಮದ ಉಜ್ವಲ ತಾರೆಗಳು ಮಿನುಗುವುದನ್ನು ಕಾಣಬಹುದು. ಅಂತಹ ತಾರೆಗಳಲ್ಲಿ ಕರ್ನಾಟಕದ ಅಣ್ಣುಗುರೂಜಿಯವರು ಒಬ್ಬರು. ಅಣ್ಣುಗುರೂಜಿಯವರು 1905ರ ಜನವರಿ 12ರಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಪಾಶ್ಚಾಪೂರ ಗ್ರಾಮದಲ್ಲಿಜನಿಸಿದರು. ತಂದೆ ಯಮಾಜಿ ದೇಶಪಾಂಡೆ, ತಾಯಿ ಅಂಬಾಬಾಯಿ. ಈ ದಂಪತಿಗಳಿಗೆ ಮೂರು ಗಂಡು ಮಕ್ಕಳು. ಅದರಲ್ಲಿಎರಡನೆಯವರೇ ಅಣ್ಣೂಗುರೂಜಿಯವರು. ಇವರ ಮೂಲ ಹೆಸರು ಬಾಳಕೃಷ್ಣ.

ಇವರ ತಾಯಿಯ ತವರೂರು ಮದಿಹಳ್ಳಿ ಹಾಗೂ ದೊಡ್ಡವ್ವನ ಊರಾದ ಸುಲ್ತಾನಪುರದಲ್ಲಿ ತಮ್ಮ ಬಾಲ್ಯ ಕಳೆದರು. ಮನೆತನದ ಪರಿಸ್ಥಿತಿ ನಾಜೂಕ ಆಗಿದ್ದರಿಂದ ಹೆಚ್ಚಿನ ಶಿಕ್ಷಣ ಪಡೆಯಲಾಗಲಿಲ್ಲ.ಅಣ್ಣು ಗುರೂಜಿ 15 ವರ್ಷದವನಾಗಿದ್ದಾಗ ಅಂದರೆ 1920ರಲ್ಲಿ ತಂದೆಯನ್ನು ಕಳೆದುಕೊಂಡರು. ಆಗ ಕೆಲಸ ಹುಡುಕಿಕೊಂಡು ತಾಯಿಯೊಂದಿಗೆ ಇವರ ಕುಟುಂಬ ಬೆಳಗಾವಿಗೆ ಸ್ಥಳಾಂತರಗೊಂಡಿತು. ಅಲ್ಲಿ ಅಣ್ಣ ಸದಾಶಿವಗೆ ಮಾಸಿಕ 10 ರೂಪಾಯಿಗಳ ನೌಕರಿ ದೊರಕಿತು. ಅಣ್ಣು ಗುರೂಜಿಯವರು ಮನೆಯಲ್ಲಿಯೇ ಮರಾಠಿ ಕಲಿತು 12 ರೂ ತಿಂಗಳ ಪಗಾರದೊಂದಿಗೆ ಶಹಾಪೂರ ತಾಲೂಕಿನ ಕಛೇರಿಯಲ್ಲಿ ಕಾರಕೂನನಾಗಿ ಕೆಲಸಕ್ಕೆ ಸೇರಿಕೊಂಡರು.ಬೆಳಗಾವಿಯಲ್ಲಿ ಮಹಾತ್ಮಾಗಾಂಧೀಜಿಯವರು ಅಸಹಕಾರ ಚಳುವಳಿ ಆರಂಭಿಸಿದ ಸಂದರ್ಭದಲ್ಲಿ ಮಾಡಿದ ಭಾಷಣದಿಂದ ಪ್ರಭಾವಿತರಾದರು.

Image result for annu guruji

ಅಂದಿನಿಂದ ಅಣ್ಣು ಗುರೂಜಿ ಖಾದಿ ಧರಿಸತೊಡಗಿದರು. ಅವರ ತಾಯಿಯೂ ಕೂಡ ಖಾದಿ ಸೀರೆಯನ್ನೇ ಉಡತೊಡಗಿದರು. ಲೋಕಮಾನ್ಯತಿಲಕರಾದಿಯಾಗಿ ರಾಷ್ಟ್ರೀಯ ಮುಖಂಡರ ಭಾಷಣಗಳಿಂದ ಪ್ರಭಾವಿತರಾಗಿದ್ದರು. ಅದೇ ವೇಳೆ ಕರ್ನಾಟಕದ ಸಿಂಹ ಎಂದು ಹೆಸರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಗಂಗಾಧರರಾವ ದೇಶಪಾಂಡೆಯವರನ್ನು ಬ್ರಿಟಿಷ್ ಸರಕಾರ ಬಂಧಿಸಿತು. ಇದನ್ನರಿತ ಅಣ್ಣು ಗುರೂಜಿಯವರು ಅಂದೇ ತಮ್ಮ ನೌಕರಿಗೆ ರಾಜಿನಾಮೆ ನೀಡಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಸ್ವಾತಂತ್ರ್ಯ ಹೋರಾಟದ ಕೇಂದ್ರವಾಗಿದ್ದ ಪಾಶ್ಚಾಪೂರ ಇವರ ಕರ್ಮಭೂಮಿಯಾಯಿತು.

ಅಲ್ಲಿ ರಾಷ್ಟ್ರೀಯ ಶಾಲೆಯೊಂದನ್ನು ಆರಂಭಿಸಿದರು. ರಾಷ್ಟ್ರೀಯ ಮನೋಭಾವನೆ, ನೈತಿಕ ಮಟ್ಟ ಬೆಳೆಸುವ ಕಾರ್ಯ ಇಲ್ಲಿ ನಡೆಯುತ್ತಿತ್ತು. ಅಣ್ಣು ಗುರೂಜಿಯವರೆ ಬೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮೂರು ವರ್ಷ ನಡೆದ ಈ ಶಾಲೆಗೆ ಪರೀಕ್ಷೆಗೆಂದು ದ.ರಾ.ಬೇಂದ್ರೆ, ಬೆಟಗೆರಿ ಕೃಷ್ಣಶರ್ಮ, ಬಿಂದು ಮಾಧವ ಬುರ್ಲಿ ಮುಂತಾದವರು ಬರುತ್ತಿದ್ದರು. ಬಾಳಕೃಷ್ಣರು-ಅಣ್ಣು ಗುರೂಜಿಯಾದದ್ದು ಇಲ್ಲಿಯೇ. ತಾಯಿ ಇವರನ್ನು ಪ್ರೀತಿಯಿಂದ ಅಣ್ಣು ಎಂದು ಕರೆಯುತ್ತಿದ್ದರು. ಹಾಗೂ ಈ ರಾಷ್ಟ್ರೀಯ ಶಾಲೆಯಲ್ಲಿ ಬೋಧನಾಕಾರ್ಯ ಕೈಗೊಂಡಿದ್ದರಿಂದ “ಗುರೂಜಿ-ಅಣ್ಣು ಗುರೂಜಿ” ಎಂದು ಕರೆಯತೊಡಗಿದರು.ಸ್ವಾತಂತ್ರ್ಯ ಚಳುವಳಿಗೆ ಧುಮುಕಿ 1924ರಲ್ಲಿ ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆಯಲ್ಲಿ ಕಾಂಗ್ರೇಸ್ ಅಧೀವೇಶನ ಬೆಳಗಾವಿಯಲ್ಲಿ ನಡೆದಾಗ ಕಾರ್ಯಕರ್ತರಾಗಿ ಹಗಲಿರುಳು ದುಡಿದರು.

ಮುಂದೆ ಹಿಂಡಲಗಾ ಹಾಗೂ ಯರವಾಡ ಕಾರಾಗೃಹವಾಸವನ್ನು ಅನುಭವಿಸಿದರು. ನಂತರ ದೇಶಕ್ಕೆ ಸ್ವಾತಂತ್ರ್ಯ ಸಿಗುವವರೆಗೆ ಪ್ರತಿ ಹೋರಾಟದಲ್ಲೂ ಮೂಂಚುಣಿಯಲ್ಲಿದ್ದರು. ಖಾದಿ ಪ್ರಚಾರದಲ್ಲಿ ನಿರಂತರ ತೊಡಗಿಸಿಕೊಂಡರು. ಉಪ್ಪಿನ ಸತ್ಯಾಗ್ರಹದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಆಗ ಇವರಿಗೆ ಒಂಬತ್ತು ತಿಂಗಳು ಜೈಲು ಶಿಕ್ಷೆಯಾಯಿತು. ಜೈಲಿನಲ್ಲಿದ್ದಾಗಲೆ ಇಂಗ್ಲೀಷ ಭಾಷೆಯನ್ನು ಕಲಿತರು. ಇವರ ಇಡಿ ಮನೆಯೇ ಸ್ವಾತಂತ್ರ್ಯ ಯೋಧರ ಮನೆಯಾಗಿತ್ತು. ಅಣ್ಣ ಸದಾಶಿವ ಅತ್ತಿಗೆ ಪಾರ್ವತಿ, ತಮ್ಮ ಗಜಾನನ ಇವರೂ ಕೂಡಾ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಸೆರೆಮನೆ ಕಂಡು ಬಂದರು. ಈಗ ಬ್ರಿಟಿಷ್ ದುರಾಡಳಿತದ ವಿರುದ್ಧ ಜನಜಾಗೃತಿ ಕಾರ್ಯ ಕೈಕೊಂಡರು.

ವಿದೇಶಿ ವಸ್ತುಗಳ ಬಹಿಷ್ಕಾರ, ಸ್ವದೇಶಿ ಪ್ರಚಾರ, ಸಿಂಧಿ, ಸೆರೆ ಅಂಗಡಿಗಳ ಮುಂದೆ ಪಿಕೇಟಿಂಗ್, ಸಿಂಧಿ ಗಿಡ ಕಡಿಯುವ ಆಂದೋಲನ, ಕುಂದರನಾಡಿನ ಹಳ್ಳಿಗಳಲ್ಲಿ ಖಾದಿ ಪ್ರಚಾರ. 100 ಗ್ರಾಮಗಳಲ್ಲಿ ಸಂಚರಿಸಿ ಹರಿಜನರ ಬಗೆಗಿನ ಗಾಂಧಿ ವಿಚಾರಧಾರೆಗಳ ಪ್ರಚಾರ ಇವು ಅಣ್ಣುಗುರೂಜಿಯವರ ವಿಧಾಯಕ ಕಾರ್ಯಕ್ರಮಗಳು. ಅವಿಭಜಿತ ವಿಜಯಪುರ ಜಿಲ್ಲೆ ಜಮಖಂಡಿ ತಾಲೂಕಿನ “ಬಿದರಿ”ಯ ವಾಮನರಾವ, ಬಾಳಾಜಿ ದೇಸಾಯಿ ಇವರು ಅಣ್ಣುಗುರೂಜಿಯವರ ರಾಜಕೀಯ ಗುರುಗಳಾಗಿದ್ದರು. ವಾಮನರಾವರ ಪತ್ನಿ ಪದ್ಮಾವತಿಬಾಯಿ ಅಣ್ಣುಗುರೂಜಿಯವರ ಸೋದರಿಯಾಗಿದ್ದಳು. ಇವರ ಕಷ್ಟಕಾಲದಲ್ಲಿ ತಮ್ಮ ಆಭರಣಗಳನ್ನೆಲ್ಲ ದೇಶದ ಸ್ವಾತಂತ್ರ್ಯಕ್ಕಾಗಿ ದಾನನೀಡಿದ ಮಹಾಮಾತೆ ಪದ್ಮಾವತಿಬಾಯಿ.ಅಣ್ಣುಗುರೂಜಿಯವರು ಭಾರತಮಾತೆಯು ಸ್ವಾತಂತ್ರ್ಯ ಪಡೆಯುವವರೆಗೆ ತಾವು ಮದುವೆ ಮಾಡಿಕೊಳ್ಳುವುದಿಲ್ಲವೆಂದು ಪ್ರತಿಜ್ಞೆ ಮಾಡಿದರು. ಆದರೆ ದೇಶ ಸ್ವಾತಂತ್ರ್ಯವಾದ ಮೇಲೂ ಅವರು ಮದುವೆಯಾಗದೆ ಸಮಾಜಸೇವೆಯಲ್ಲಿ ತೊಡಗಿದರು. ನಿತ್ಯ ಚರಕದಿಂದ ನೂಲು ತೆಗೆಯುತ್ತಿದ್ದರು. ಖಾದಿಯನ್ನು ತಮ್ಮ ಜೀವನದ ಉಸಿರಾಗಿಸಿಕೊಂಡಿದ್ದರು.

Image result for annu guruji

ನಾ ಸು.ಹರ್ಡಿಕರರು ಸ್ಥಾಪಿಸಿದ ಹಿಂದುಸ್ತಾನ ಸೇವಾದಳದಲ್ಲಿ ಸೇರಿ ಯುವಕರನ್ನು ಸಂಘಟಿಸಿದರು. ಮತ್ತು ಗಂಗಾಧರರಾವ ದೇಶಪಾಂಡೆಯವರೊಡನೆ ಸೇರಿ ಹುದಲಿ ಗ್ರಾಮದಲ್ಲಿ 1937ರಲ್ಲಿ ಗಾಂಧೀ ಸೇವಾಸಂಘ ಸ್ಥಾಪಿಸಿದರು. ಗ್ರಾಮ ಸುಧಾರಣೆಗೆ ಅಸ್ಪøಶ್ಯತೆ ನಿವಾರಣೆ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು.ಬೆಳಗಾವಿ ಜಿಲ್ಲೆಯಾದ್ಯಂತ 1942ರಲ್ಲಿ “ಚಲೇಜಾವ್” ಚಳುವಳಿ ಅತ್ಯುತ್ಸಾಹದಿಂದ ಆರಂಭವಾಯಿತು. ರೈಲು ಹಳಿ ಕೀಳುವುದು, ಪೋಲಿಸ್ ಸ್ಟೇಷನ್, ಅಂಚೆ ಕಛೇರಿ, ಸರಕಾರಿ ಕಛೇರಿಗಳನ್ನು ಸುಡುವುದು, ಸರಕಾರಿ ಖಜಾನೆಗಳನ್ನು ಲೂಟಿ ಮಾಡುವುದು, ಮೊದಲಾದ ಕಾರ್ಯಗಳು ಅವ್ಯಾಹತವಾಗಿ ನಡೆದವು.

ಚಳುವಳಿಯನ್ನು ಬಲಪಡಿಸುವ ನಿಮಿತ್ಯ ಅಣ್ಣು ಗುರೂಜಿಯವರು ಭೂಗತವಾಗಿದ್ದುಕೊಂಡು ತಂತ್ರ ಹೋರಾಟದಲ್ಲಿ ತೊಡಗಿದ್ದರು. ಪಾಶ್ಚಾ ಪೂರದಲ್ಲಿ ಇವರ ತಂಡ ಬೀಡು ಬಿಟ್ಟಿದೆ ಎಂದು ಮಾಹಿತಿ ಕಲೆ ಹಾಕಿ ರಾತ್ರಿ ವೇಳೆ ಬ್ರಿಟಿಷ ಪೋಲಿಸರು ಗುಂಡಿನ ಮಳೆ ಗರೆದರು. ಆಗ ಅಲ್ಲಿ ಉರುಳಿದ ಹೆಣ ನೋಡಿ ಅಣ್ಣುಗುರೂಜಿಯವರದೇ ಎಂದು ಪೋಲಿಸರು ಸಂತಸಪಟ್ಟರು. ಆದರೆ ಅಣ್ಣಗುರೂಜಿ ಪಾರಾಗಿ ಹೋಗಿದ್ದರು. ಇವರ ತಂಡದಲ್ಲಿಯ ಪ್ರಮುಖರೆಲ್ಲರೂ ಬಚಾವಾಗಿ ತಪ್ಪಿಸಿಕೊಂಡರು. ವಾಮನರಾವ ದೇಸಾಯಿ, ಅಣ್ಣುಗುರೂಜಿ, ಶ್ರೀರಂಗ ಕಾಮತ, ಚನ್ನಪ್ಪವಾಲಿ, ರಾಮಚಂದ್ರ ವಡವಿ ಮತ್ತಿತ್ತರರಿಗೆ ಬ್ರಿಟಿಷ ಪೋಲಿಸರು ಇವರನ್ನು ಜೀವಂತ ಇಲ್ಲವೆ ಅವರ ಶವವನ್ನು ತಂದು ಕೊಟ್ಟವರಿಗೆ 5000/- ರೂ ಬಹುಮಾನ ಇಟ್ಟದ್ದರು. ಪಿತೂರಿಯಿಂದ ಅಣ್ಣುಗುರೂಜಿಯವರು ವಿಜಯಪುರದಲ್ಲಿ ಮಧ್ಯರಾತ್ರಿ ಬಂಧಿಸಲ್ಪಟ್ಟರು. ಎರಡುವರೆ ವರ್ಷ ಜೈಲು ಶಿಕ್ಷೆ ಅನುಭವಿಸಿದರು. ಸ್ವಾತಂತ್ರ್ಯ ಚಳುವಳಿಯ ಅವಧಿಯಲ್ಲಿ ಏಳು ಸಲ ಏಳು ವರ್ಷ ಒಂದು ತಿಂಗಳು ಶಿಕ್ಷೆ ಅನುಭವಿಸಿದರು.ದೇಶ ಸ್ವಾತಂತ್ರ್ಯಾನಂತರ ಅಧಿಕಾರಕ್ಕೆ, ಆಮಿಷಕ್ಕೆ ಒಳಗಾಗದೆ ಪಾಶ್ಚಾಪೂರಕ್ಕೆ ಮರಳಿ ಕೃಷಿಕರಾಗಿ ಜೀವನ ನಿರ್ವಹಣೆ ಮಾಡಿದರು. ಸ್ವಾತಂತ್ರ್ಯ ಯೋಧರ ಪಿಂಚಣಿಗೆ ಅರ್ಜಿ ಹಾಕಲಿಲ್ಲ, ಅದನ್ನು ಪಡೆಯಲಿಲ್ಲ. ಮುಂದೆ ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ಆರಂಭಿಸಿದರು. ಬೆಳಗಾವಿಯಲ್ಲಿ ರಾಜ್ಯಮಟ್ಟದ ಎರಡು ಸಭೆ ಏರ್ಪಡಿಸಿದರು. ಮೈಸೂರು ಮಹಾರಾಜರಾದ ಚಾಮರಾಜ ಒಡೆಯರ ಹತ್ತಿರ ನಿಯೋಗ ಒಯ್ದು ಕರ್ನಾಟಕ ಏಕೀಕರಣದ ಮಹತ್ವ ತಿಳಿಸಿ ಅವರ ಮನ ಒಲಿಸಿದರು.

ಕನ್ನಡ-ನಾಡು-ನುಡಿ ಇವರ ಉಸಿರಾಗಿತ್ತು. ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದರ ವಿರುದ್ಧ ಬಂಡೆದ್ಧು ಗೂಂಡಾಗಿರಿ ನಡೆಸಿದ ಮರಾಠಿ ಮುಠ್ಠಾಳರ ವಿರುದ್ಧ ಸೆಡ್ಡು ಹೊಡೆದು ನಿಂತರು. ಕನ್ನಡಿಗರನ್ನು ಸಂಘಟಿಸಿದರು. ಮಹಾಜನ್ ಕಮಿಷನ್ ಮುಂದೆ ಬೆಳಗಾವಿ ಕನ್ನಡಿಗರದೆಂದು ಮನವರಿಕೆÀ ಮಾಡಿಕೊಟ್ಟರು.ಅಣ್ಣುಗುರೂಜಿ ತಮ್ಮ ತತ್ವಗಳಿಗೆ ಎಂದೂ ರಾಜಿ ಆದವರಲ್ಲ. ಸ್ವಾತಂತ್ರ್ಯದ ನಂತರ ಇವರು ಬೆಳಗಾವಿ ಜಿಲ್ಲಾ ಕಾಂಗ್ರೇಸ್ ಕಮಿಟಿ ಅಧ್ಯಕ್ಷರಾಗಿ ಸೇವೆಸಲ್ಲಿಸಿದರು. ಸಾರ್ವಜನಿಕ ಕಾರ್ಯಗಳಲ್ಲಿ ಇವರಿಗೆ ಹೆಚ್ಚು ಆಸಕ್ತಿ.

ಬೆಳಗಾವಿಯಲ್ಲಿ ಮಾಹಾತ್ಮಾಗಾಂಧಿ ವಿಶ್ವಸ್ಥ ಮಂಡಳಿ ಸ್ಥಾಪನೆ ಮಾಡಿದರು. ಇವರು ಸಂಪೂರ್ಣ ಪಾನ ನಿರೋಧದ ಪ್ರತಿಪಾದಕರಾಗಿದ್ದರು. ಪಾನ ನಿರೋಧ ಸಡಿಲಿಕೆ ವಿರುದ್ಧ ಸರಕಾರದೊಡನೆ ಹೋರಾಡಿದ ಇವರನ್ನು ಕಾಂಗ್ರೆಸ್ ಪಕ್ಷದಿಂದ ಹೊರಹಾಕಿತು. 1975ರಲ್ಲಿ ಜೂನ್ 25 ರಂದು ತುರ್ತು ಪರಿಸ್ಥಿತಿ ಘೋಷಣೆಯಾದಾಗ ಅದನ್ನು ಹುಕ್ಕೇರಿ ನ್ಯಾಯಾಲಯದ ಎದುರು ಪ್ರತಿಭಟಿಸಿ ಬಂಧನಕ್ಕೆ ಒಳಗಾದರು. ತುರ್ತು ಪರಿಸ್ಥಿತಿ ಕರಾಳ ಕೃತ್ಯಗಳ ಬಗ್ಗೆ “ದುಶ್ಯಾಸನ ಪರ್ವ” ಎಂಬ ಕೃತಿ ಬರೆದು ಪ್ರಕಟಿಸಿದರು. ಹರಿತ ಲೇಖನಿ ಮುಂದುವರಿದು ಬೆಳಗಾವಿ ಜಿಲ್ಲಾ ಸ್ವಾತಂತ್ರ್ಯ ಹೋರಾಟ, ಬೆಳಗಾವಿ ಗಡಿ ಹೋರಾಟ, ಮಹಾಜನ್ ಆಯೋಗ ಹಾಗೂ ನಾ ನಡೆದು ಬಂದ ದಾರಿ ಕೃತಿಗಳನ್ನು ರಚಿಸಿ ಲೋಕಾರ್ಪಣೆಗೊಳಿಸಿದ್ದಾರೆ. ಅಣ್ಣುಗುರೂಜಿಯವರು ಚತುರ ಸಂಘಟನಾಕಾರರು, ಹರಿತ ಭಾಷಣಕಾರರು, ಶ್ರೇಷ್ಠ ಸಾಹಿತಿಯಾಗಿಯೂ, ನಿಷ್ಠುರವಾದಿಯಾಗಿಯೂ, ಎಂಟೆದೆಯ ಬಂಟನಾಗಿ, ಅಪ್ಪಟ ಗಾಂಧೀವಾದಿ ಬಾಳಕೃಷ್ಣಯಮಾಜಿ. ದೇಶಪಾಂಡೆಯವರು ದಿನಾಂಕ 24-7-1990 ರಂದು ಮರಳಿ ಬಾರದ ಲೋಕಕ್ಕೆಯಾತ್ರೆಗೈದರು. ಇಂಥ ಮಹಾನುಭಾವರನ್ನು ನಿತ್ಯವೂ ಸ್ಮರಿಸಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top