fbpx
ಸಮಾಚಾರ

ಶಿರಾ ಉಪಚುನಾವಣೆಯಲ್ಲಿ ನಿಖಿಲ್ ಸ್ಪರ್ಧಿಸುತ್ತಾರಾ: ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ ತೆರೆ ಎಳೆದ ನಿಖಿಲ್ ಕುಮಾರಸ್ವಾಮಿ

ಶಿರಾದ ಶಾಸಕರಾಗಿದ್ದ ಬಿ ಸತ್ಯನಾರಾಯಣ ಅವರ ಸಾವಿನಿಂದ ತೆರವಾಗಿರುವ ಸ್ಥಾನಕ್ಕೆ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಾರೆ ಎಂಬ ವದಂತಿಗಳು ಎಲ್ಲೆಡೆ ಹರಡುತ್ತಿದೆ. ಈ ರೀತಿ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆ ಅಥವಾ ಚಿಂತನೆ ಇಲ್ಲ ಎಂದು ನಿಖಿಲ್‌ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ವದಂತಿಗಳನ್ನು ಹಬ್ಬಿಸಿರುವುದನ್ನು ಕಟುವಾಗಿ ಟೀಕಿಸಿರುವ ಅವರು, ಇಂತಹ ಕಪೋಲಕಲ್ಪಿತ ಸುದ್ದಿ, ವದಂತಿಗಳನ್ನು ಯಾರು ಹಬ್ಬಿಸುತ್ತಾರೋ? ಯಾಕೆ ಹಬ್ಬಿಸುತ್ತಾರೋ? ಇದರಿಂದ ಕುತ್ಸಿತ ಮನಸುಗಳಿಗೆ ಆಗುವ ಲಾಭ ಏನೆಂಬುದು ನನಗೆ ತಿಳಿಯದಾಗಿದೆ. ತುಮಕೂರು ಜಿಲ್ಲೆಯ ಶಿರಾ ವಿಧಾನಸಬಾ ಕ್ಷೇತ್ರದ ಚುನಾವಣೆ ಮೇಲೆ ಕಣ್ಣಿಟ್ಟಿದ್ದೇನೆ ಎಂಬಂತೆ ವದಂತಿಗಳನ್ನು ಪುಂಖಾನುಪುಂಖವಾಗಿ ಹರಿಯಬಿಡಲಾಗುತ್ತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸುಳ್ಳು ಸುದ್ದಿ ಹಬ್ಬಿಸಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

2018 ರ ವಿಧಾನಸಭಾ ಚುನಾವಣೆ ವೇಳೆ ಮೂರು ದಿನಗಳ ಕಾಲ ಶಿರಾ ಸೇರಿದಂತೆ ತುಮಕೂರು ಜಿಲ್ಲೆಯಲ್ಲಿ ಪಕ್ಷದ ಪರವಾಗಿ ನಿಷ್ಠಾವಂತ ಕಾರ್ಯಕರ್ತನಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ನಿಜ.

ಇನ್ನು ಸತ್ಯ ನಾರಾಯಣ ಅವರ ಪಕ್ಷ ನಿಷ್ಠೆ ಮತ್ತು ಬದ್ಧತೆ ಪ್ರಶ್ನಾತೀತ.‌ ಯಾವುದೇ ಆಮಿಷಗಳಿಗೆ ಬಲಿಯಾಗದೆ ಕೊನೆ ಉಸಿರಿರುವವರೆಗೂ ನಂಬಿದ ಪಕ್ಷವನ್ನು ಹೆಸರಿಗೆ ತಕ್ಕಂತೆ ‘ಸತ್ಯ”ವಾಗಿಸಿ ಕೊಂಡಿದ್ದರು.

ಉಪಚುನಾವಣೆಗೆ ಯೋಗ್ಯ, ಸಮರ್ಥ ಅಭ್ಯರ್ಥಿಯನ್ನು ಪಕ್ಷದ ವರಿಷ್ಠರು ಆಯ್ಕೆ ಮಾಡಲಿದ್ದಾರೆ. ಅವರ ಪರವಾಗಿಯೂ ಪಕ್ಷದ ಅಭ್ಯರ್ಥಿ ಪರ ಟೊಂಕಕಟ್ಟಿ ನಿಂತು ಪ್ರಚಾರ ಮಾಡಲಿದ್ದೇನೆ. ಇದರಲ್ಲಿ ಯಾರಿಗೂ ಎಳ್ಳಷ್ಟು ಸಂಶಯ ಬೇಡ.

ನಾನು ಶಿರಾ ಉಪಚುನಾವಣೆಯ ಅಭ್ಯರ್ಥಿಯಾಗುವ ಕನಸು ಕಂಡವನಲ್ಲ. ಯಾವುದೇ ಕಾರಣಕ್ಕೂ ನಾನು ಶಿರಾದಲ್ಲಿ ಅಭ್ಯರ್ಥಿ ಆಗುವುದಿಲ್ಲ ಎಂದು ಸ್ಪಷ್ಟಪಡಿಸುವೆ.

ಸತ್ಯನಾರಾಯಣ ಅವರ ‘ಚಿತೆ” ಆರುವ ಮುನ್ನವೇ ಉಪ ಚುನಾವಣೆ ಅಖಾಡಕ್ಕೆ ನನ್ನ ಹೆಸರನ್ನು ತೇಲಿ ಬಿಟ್ಟವರ ಬಗ್ಗೆ ಮರುಕವಿದೆ. ಇಂತಹ ಹೀನ ಸಂಸ್ಕೃತಿಯ ರಾಜಕೀಯ ಪರಂಪರೆ ನಮ್ಮದಲ್ಲ.

ಶಿರಾ ಉಪಚುನಾವಣೆಗೆ ನನ್ನನ್ನು ಕಣಕ್ಕಿಳಿಸಲು ಒತ್ತಡಗಳಿವೆ ಎಂಬಂತೆ ಹಾಗೂ ರಾಜಕೀಯ ನೆಲೆ ಕಂಡುಕೊಳ್ಳಲು ಈ ಕ್ಷೇತ್ರವನ್ನೇ ‘ಚಿಮ್ಮು ಹಲಗೆ” ಮಾಡಿ ಕೊಳ್ಳುವ ಹವಣಿಕೆಯಲ್ಲಿದ್ದಾರೆ ಎಂಬ ವದಂತಿಗಳನ್ನು ಸಾರಾಸಗಟಾಗಿ ತಳ್ಳಿ ಹಾಕುತ್ತೇನೆ.

ರಾಜ್ಯ ಜಾತ್ಯಾತೀತ ಯುವ ಜನತಾದಳದ ಅಧ್ಯಕ್ಷನಾಗಿರುವ ನಾನು ಪಕ್ಷಕ್ಕಾಗಿ ದುಡಿಯುವಾಗ ‘ಹುದ್ದೆ”ಯ ಕಿರೀಟವನ್ನು ಬದಿಗಿರಿಸಿ ಪಕ್ಷದ ಸಾಮಾನ್ಯ ಕಾರ್ಯಕರ್ತನಂತೆ ದಣಿವರಿಯದೆ ದುಡಿಯುತ್ತೇನೆ.

ಪಕ್ಷದ ನಿಷ್ಠಾವಂತ ಹಿರಿಯ-ಕಿರಿಯರ ನಿಸ್ವಾರ್ಥ ರಾಜಕೀಯ ನಿಷ್ಠೆಯೇ ಇದಕ್ಕೆ ಮೂಲ ಪ್ರೇರಣೆ ಎಂದಿರುವ ಅವರು
ಅರಿವುಂಟೆ?
ತೊಳಗಿ ಬೆಳಗಿ ಪ್ರಜ್ವಲಿಸಿ ಉರಿವ ಬೆಳಗು
ಕೆಡುವಲ್ಲಿ ಉಡುಗುತ್ತಿದ್ದೇನೆ ಎಂದು ನುಡಿಯಿತ್ತೆ?
ಇಂತಿವ ಹಿಡಿವಲ್ಲಿ ಬಿಡುವಲ್ಲಿ ಮಿಕ್ಕಾದವ
ಒಡಗೂಡುವಲ್ಲಿ ಅಡಿಯೇರಿ
ಮತ್ತೆ ಪುನರಪಿ
ಅಡಿ ಉಂಟೆ?
ತೊಟ್ಟು ಬಿಟ್ಟ ಹಣ್ಣಿಂಗೆ ಮತ್ತಾ ಬುಡದಾಸೆಯೇಕೆ? ನಿಶ್ಚಯವೆಂಬುದು ನಷ್ಟವಾದಲ್ಲಿ ಕಾಮಧೂಮ ಧೂಳೇಶ್ವರನೆಂಬ ಲಕ್ಷವೇತಕ್ಕೆ?
ಎಂಬ ಮಾದಾರ ಧೂಳಯ್ಯ ಅವರ ವಚನವನ್ನು ಉಲ್ಲೇಖಿಸಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top