fbpx
ಸಮಾಚಾರ

‘ಜನರನ್ನು ಗುರುತಿಸುತ್ತಿದ್ದಾರೆ. ಆದರೆ, ಮಾತನಾಡಲು ಆಗುತ್ತಿಲ್ಲ’

ಜನಪ್ರಿಯ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಕೊರೊನಾ ಪಾಸಿಟಿವ್ ಆದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಕಳೆದ ಕೆಲ ದಿನಗಳಿಂದ ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ. ಸದ್ಯ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ. ಈ ಮಧ್ಯೆ ಪುತ್ರ ಎಸ್‌ಪಿಬಿ ಚರಣ್‌, ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದ ಕುರಿತು ಮಾಹಿತಿ ನೀಡಿದ್ದಾರೆ. ಫೇಸ್‌ಬುಕ್‌ನಲ್ಲಿ‌ ವಿಡಿಯೋ ಅಪ್‌ಲೋಡ್ ಮಾಡಿ, ಆ ಮೂಲಕ ಎಸ್‌ಪಿಬಿ ಅವರ ಆರೋಗ್ಯದ ಬಗ್ಗೆ ತಿಳಿಸಿದ್ದಾರೆ.

 

 

ಬಾಲಸುಬ್ರಹ್ಮಣ್ಯಂ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ನಿನ್ನೆ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು. ನಮ್ಮ ತಂದೆಯ ಆರೋಗ್ಯದಲ್ಲಿ ಚೇತರಿಸಿಕೊಂಡಿದ್ದು, ಅವರಲ್ಲಿ ಚಲನೆ ಕಂಡುಬರುತ್ತಿದೆ. ಹಾಗೇ ಚಿಕಿತ್ಸೆ ನೀಡುತ್ತಿರುವ ವೈದ್ಯರನ್ನು ಗುರುತಿಸುತ್ತಿದ್ದಾರೆ ಎಂದು ಅವರ ಪುತ್ರ ಎಸ್​.ಪಿ. ಚರಣ್​ ತಿಳಿಸಿದ್ದಾರೆ.

‘ಇಲ್ಲಿಯವರೆಗೂ ಅಪ್ಪ ಆಸ್ಪತ್ರೆಯ ಮೂರನೇ ಮಹಡಿಯಲ್ಲಿದ್ದ ಐಸಿಯುನಲ್ಲಿದ್ದರು. ಈಗ ಅವರನ್ನು ಆರನೇ ಮಹಡಿಯಲ್ಲಿರುವ ವಿಶೇಷ ಐಸಿಯುಗೆ ಸ್ಥಳಾಂತರಿಸಲಾಗಿದೆ. ಇದಕ್ಕೆ ಸಾಕಷ್ಟು ಸಮಯ ಹಿಡಿಯಿತು. ಅವರ ಆರೋಗ್ಯದಲ್ಲಿ ಮೊದಲಿಗಿಂತಲೂ ಈಗ ಸಾಕಷ್ಟು ಸುಧಾರಣೆ ಕಂಡುಬಂದಿದೆ. ವೈದ್ಯರ ಮಾತುಗಳಿಗೆ ಹೆಬ್ಬೆರಳು ತೋರುವ ಮೂಲಕ ಸ್ಪಂದಿಸುತ್ತಿದ್ದಾರೆ’ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ತಿಳಿಸಿದ್ದಾರೆ.

‘ಅಪ್ಪನ ಆರೋಗ್ಯದಲ್ಲಿ ಸುಧಾರಣೆಯಾಗಿರುವುದು ವೈದ್ಯರ ಗಮನಕ್ಕೂ ಬಂದಿದೆ. ಅವರ ಚಿಕಿತ್ಸೆಗಾಗಿ ವೈದ್ಯಕೀಯ ತಂಡ ಸಾಕಷ್ಟು ಶ್ರಮಿಸುತ್ತಿದೆ. ಒಂದೆರಡು ದಿನಗಳಲ್ಲಿ ಅವರು ಚೇತರಿಸಿಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ದೀರ್ಘ ಸಮಯ ಹಿಡಿಯಲಿದೆ. ಅವರು ಜನರನ್ನು ಗುರುತಿಸುತ್ತಿದ್ದಾರೆ. ಆದರೆ, ಮಾತನಾಡಲು ಆಗುತ್ತಿಲ್ಲ. ಶೀಘ್ರವೇ ಅವರ ಆರೋಗ್ಯ ಸಹಜ ಸ್ಥಿತಿಗೆ ಮರಳಲಿದೆ ಎಂಬ ವಿಶ್ವಾಸವಿದೆ. ’ ಎಂದು ತಿಳಿಸಿದ್ದಾರೆ.

ಇನ್ನು, ಎಸ್‌ಪಿಬಿ ಅವರ ಪತ್ನಿಗೂ ಕೊರೊನಾ ಪಾಸಿಟಿವ್ ಆಗಿದೆ ಎಂದು ಹೇಳಲಾಗಿತ್ತು. ಸದ್ಯ ಅವರ ಆರೋಗ್ಯದ ಬಗ್ಗೆಯೂ ಚರಣ್ ಮಾಹಿತಿ ನೀಡಿದ್ದು, ‘ಅಮ್ಮನ ಆರೋಗ್ಯ ಸುಧಾರಿಸುತ್ತಿದೆ. ಮಂಗಳವಾರ ಅಥವಾ ಬುಧವಾರ ಅವರು ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಿ ಮನೆಗೆ ಮರಳಲಿದ್ದಾರೆ. ತಂದೆಯ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು’ ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top