fbpx
ಸಮಾಚಾರ

“ಕೊರೋನಾ ಕಾರಣದಿಂದ UPSC ಪರೀಕ್ಷೆಯನ್ನೇ ಮುಂದೂಡಿರುವಾಗ KPSC ನಡೆಸುತ್ತಿರುವುದೇಕೆ?” ಸರ್ಕಾರಕ್ಕೆ ಸಂಸದ ಜಿಸಿ ಚಂದ್ರಶೇಖರ್ ಪ್ರಶ್ನೆ

ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದರ ನಡುವೆಯೇ ಖಾಲಿ ಇರುವ ಹುದ್ದೆಗಳ ನೇಮಕಕ್ಕೆ ಪರೀಕ್ಷೆ ನಡೆಸಲು ಮುಂದಾಗಿರುವ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ವಿರುದ್ಧ ಪರೀಕ್ಷಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಆ.24ರಂದು ಕೆಪಿಎಸ್ಸಿ ಪರೀಕ್ಷೆ ನಿಗದಿಯಾಗಿದೆ. ಶೇ.20ರಷ್ಟು ಸರಕಾರಿ ನೌಕರರು ಸೇರಿದಂತೆ ಐದು ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ. ಪರೀಕ್ಷೆ ಬರೆಯಲು ಮುಂದಾಗಿರುವ ಸಾವಿರಾರು ಅಭ್ಯರ್ಥಿಗಳು ಕೊರೊನಾ ವಾರಿಯರ್ಸ್ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನೂ ಕೆಲವರು ಪ್ರವಾಹದ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ.

ಇದಲ್ಲದೇ ಬಸ್‌ಗಳ ವಿರಳ ಸಂಚಾರದಿಂದ ಪರೀಕ್ಷಾ ಕೇಂದ್ರಗಳಿಗೆ ಹೋಗುವುದೂ ಸವಾಲಾಗಿದೆ. ಕೆಲವು ಅಭ್ಯರ್ಥಿಗಳ ಪಾಲಿಗೆ ವಯೋಮಿತಿ ಕಾರಣ ಇದು ಕೊನೆ ಪರೀಕ್ಷೆಯೂ ಹೌದು. ಆದರೆ, ಇದಾವುದನ್ನೂ ಪರಿಗಣಿಸದೆ ಪರೀಕ್ಷೆ ನಡೆಸಲು ಸಜ್ಜಾಗಿರುವ ಸರಕಾರದ ನಿರ್ಧಾರದಿಂದ ಅಭ್ಯರ್ಥಿಗಳು ಪೇಚಿಗೆ ಸಿಲುಕಿದ್ದಾರೆ. ಹೀಗಾಗಿ ಪರೀಕ್ಷೆ ಮುಂದೂಡಬೇಕೆಂಬ ಆಗ್ರಹ ಕೇಳಿಬಂದಿದೆ.

 

 

ಕೋವಿಡ್‌-19 ಪ್ರಕರಣಗಳು ಉಲ್ಬಣಗೊಳ್ಳುತ್ತಿ­ರು­ವುದರಿಂದ ಪರೀಕ್ಷೆಯನ್ನು ಮುಂದೂಡಬೇಕು ಎಂಬ ಅಭಿಯಾನ ನಡೆಯುತ್ತಿದೆ. ಆದರೆ ಸರ್ಕಾರ ಮಾತ್ರ ಯಾವುದೇ ಪ್ರತಿಭಟನೆ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ಪರೀಕ್ಷೆ ಮಾಡಿಯೇ ತೀರುತ್ತೇವೆ ಎಂಬಂತೆ ವರ್ತಿಸುತ್ತಿದೆ. ಪರೀಕ್ಷಾರ್ಥಿಗಳ ಹಿತದೃಷ್ಟಿಯಿಂದ ಕೆಪಿಎಸ್‌ಸಿ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಆಗ್ರಹಿಸಿ ಸಂಸದ ಜಿಸಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಭವನದ ಬಳಿ ಪ್ರತಿಭಟನೆ ನಡೆದಿದೆ.

ಇಂಥಾ ಪರಿಸ್ಥಿತಿಯಲ್ಲಿ ಸರ್ಕಾರ ಯಾವುದೇ ಕಾರಣಕ್ಕೂ ಕೆಪಿಎಸ್‌ಸಿ ಪರೀಕ್ಷೆಗಳನ್ನು ನಡೆಸಬಾರದು. ಪರೀಕ್ಷಾರ್ಥಿಗಳ ಹಿತದೃಷ್ಟಿಯಿಂದ ಕೆಪಿಎಸ್‌ಸಿ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಆಗ್ರಹಿಸಿ ವಿರೋಧ ಪಕ್ಷದ ವಿವಿಧ ನಾಯಕರುಗಳು ಪ್ರತಿಭಟನೆ ನಡೆಸಿದರು.. ಈ ವೇಳೆ ಮಾಧ್ಯಮ ಪ್ರತಿನಿಧಿಗಳ ಬಳಿ ಮಾತನಾಡಿದ ಸಂಸದ ಜಿಸಿ ಚಂದ್ರಶೇಖರ್ “ಇದು ಸಿಎಂ ವಿರುದ್ಧ ಪ್ರತಿಭಟನೆಯಲ್ಲ: KPSC ಪರೀಕ್ಷಾರ್ಥಿಗಳ ಪರ ಪ್ರತಿಭಟನೆ ಅಷ್ಟೇ ” ಎಂದು ಹೇಳಿದರು.

 

 

“ಇದನ್ನ ಮುಖ್ಯಮಂತ್ರಿಗಳು ತಮ್ಮ ವಿರುದ್ದದ ಪ್ರತಿಭಟನೆ ಅಂತ ತಿಳಿದುಕೊಳ್ಳಬಾರದು. ಇಡೀ ಕರ್ನಾಟಕದಲ್ಲಿ ನೊಂದ ವಿದ್ಯಾರ್ಥಿಗಳ ಅಳಲನ್ನು ನಿಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇವೆ. ವಿರೋಧ ಪಕ್ಷದವರು ಪ್ರತಿಭಟನೆ ಮಾಡುತ್ತಿದ್ದಾರಲ್ಲ ಎಂಬ ಕಾರಣಕ್ಕೆ ಇದನ್ನು ನೀವು ಪ್ರತಿಷ್ಠೆಯಾಗಿ ತೆಗೆದುಕೊಂಡು ಇದನ್ನು ಹತ್ತಿಕ್ಕಲು ಹೋಗಬಾರದು” ಎಂದು ಚಂದ್ರಶೇಖರ್ ಹೇಳಿದರು.

“ಕೋವಿಡ್‌ ರಾಜ್ಯದಲ್ಲಿ ವಿಷಮ ಪರಿಸ್ಥಿತಿಗೆ ತಲುಪಿದ್ದು ಹಾಗು ಆತಿವೃಷ್ಟಿಯಿಂದ ಜನರ ಬದುಕು ದುಸ್ಥಿತಿಗೆ ತಲುಪಿದೆ. ಪರಿಸ್ಥಿತಿಗೆ ಅನುಗುಣವಾಗಿ UPSC ಪರೀಕ್ಷೆಯನ್ನೇ ಮುಂದೂಡಲಾಗಿದೆ. ಹಾಗೆಯೆ ಬೇರೆ ರಾಜ್ಯಗಳ ಎಲ್ಲಾ ಪರೀಕ್ಷೆಗಳನ್ನು ಕೂಡ ಮುಂದೂಡಲಾಗಿದೆ. ಹೀಗಿರುವಾಗ ರಾಜ್ಯದಲ್ಲಿ ಕೆ.ಪಿ.ಎಸ್‌.ಸಿ ಪರೀಕ್ಷೆ ಮುಂದೂಡಲು ಸರ್ಕಾರ ನಿರ್ಧಾರ ಕೈಗೊಳ್ಳದೇ ಇರುವುದು ಯಾಕೆ ಎಂಬುದೇ ತಿಳಿಯುತ್ತಿಲ್ಲ.” ಎಂದು ಚಂದ್ರಶೇಖರ್ ಪ್ರಶ್ನಿಸಿದರು.

“ಮುಖ್ಯವಾಗಿ ಎರಡು ವಿಚಾರವನ್ನು ತಮಗೆ ತಿಳಿಸಲು ಇಚ್ಛಿಸುತ್ತೇನೆ. ಒಂದು KPSC ಅವರ ಕಾರ್ಯ ವೈಖರಿ ಇನ್ನೊಂದು ರಾಜ್ಯ ಸರ್ಕಾರದ ಕಾರ್ಯ ವೈಖರಿ.. ಈ ವಿಚಾರವಾಗಿ ನಾನು ಈಗಾಗಲೇ ಮುಖ್ಯಮಂತ್ರಿಗಳಿಗೆ ಮತ್ತು ಪ್ರಧಾನ ಕಾರ್ಯದರ್ಶಿಗಳಿಗೆ ಎರಡು ಪತ್ರಗಳನ್ನು ಬರೆದಿದ್ದೇನೆ. ಆದರೆ ಒಬ್ಬರ ಸಂಸದ ಪತ್ರ ಬರೆದರೂ ಕೂಡ ಅದಕ್ಕೆ ಉತ್ತರ ನೀಡುವ ಸೌಜನ್ಯವನ್ನು ಅಧಿಕಾರಿಗಳು ತೋರಿಸುತ್ತಿಲ್ಲ” ಎಂದು ಬೇಸರ ಹೊರಹಾಕಿದರು.

“ಕೆಪಿಎಸ್‌ಸಿ‌ ಪರೀಕ್ಷೆಯ ಅಭ್ಯರ್ಥಿಗಳಲ್ಲಿ 20% ಸರ್ಕಾರಿ ನೌಕರರಿದ್ದಾರೆ. ಇವರೆಲ್ಲ‌ ಕಡ್ಡಾಯ ಕೊರೊನಾ ವಾರಿಯರ್ ಆಗಿ ಕೆಲಸ ಮಾಡ್ತಿದ್ದಾರೆ. ಇವರಲ್ಲಿ ಯಾರಿಗಾದರೂ ಕೊರೊನಾ ಸೋಂಕಿದ್ದರೆ ಉಳಿದವರಿಗೂ ಹರಡುವ ಸಾಧ್ಯತೆ ಇದೆ ಹಾಗಾಗಿ ಪರೀಕ್ಷೆ ನಡೆಸಬಾರದು” ಎಂದು ಚಂದ್ರಶೇಖರ್ ಆಗ್ರಹಿಸಿದರು.

“ಪ್ರಜೆಗಳಿಂದ ಪ್ರಜೆಗಳಿಗಾಗಿ ಮತ್ತು ಪ್ರಜೆಗಳಿಗೋಸ್ಕರ ನಡೆಯುವ ಸರ್ಕಾರ ಯಾವಾಗಲೂ ಪ್ರಜೆಗಳ ಹಿತ ಕಾಯಬೇಕು, ಪ್ರಜೆಗಳಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಬಾರದು. ಅಭ್ಯರ್ಥಿಗಳ ಮುಂದಿನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮಾನವೀಯತೆಯ ದೃಷ್ಟಿಯಿಂದ ಪರೀಕ್ಷಯನ್ನು ಮುಂದೂಡಬೇಕು” ಎಂದು ಸರ್ಕಾರಕ್ಕೆ ಸಂಸದ ಜಿಸಿ ಚಂದ್ರಶೇಖರ್ ಮನವಿ ಮಾಡಿಕೊಂಡರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top