fbpx
ಸಮಾಚಾರ

ಕರ್ನಾಟಕದ ಯಾದಗಿರಿಯ ತ್ರಿವಳಿ ಮಕ್ಕಳ ಬಡ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ ನಟ ಸೋನು ಸೂದ್

ಕೊರೋನಾ ಕಾಲದಲ್ಲಿ ಹಲವರ ಪಾಲಿಗೆ ಬಾಲಿವುಡ್ ನಟ ಸೋನು ಸೂದ್ ಅಕ್ಷರಶಃ ದೇವದೂತನಾಗಿ ಕಾಣಿಸಿಕೊಂಡಿದ್ದಾರೆ. ಯಾರೆಲ್ಲಾ ಕಷ್ಟದಲ್ಲಿದ್ದಾರೋ ಅವರಿಗೆ ತಮ್ಮ ಕೈಯಿಂದ ಸಾಧ್ಯವಾದ ಸಹಾಯವನ್ನು ಮಾಡುತ್ತಾ ಬರುತ್ತಿದ್ದಾರೆ ಸೋನು ಸೂದ್. ಇದೀಗ ಕರ್ನಾಟಕದ ಯಾದಗಿರಿ ಜಿಲ್ಲೆಯ ರಾಮಸಮುದ್ರ ಗ್ರಾಮದ ಬಡ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ.

ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದ ಪದ್ಮಾ ಎಂಬಾಕೆ ಆ.22ರಂದು ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಮುದ್ದಾದ ಮೂವರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. ಪತಿ ನಾಗರಾಜ ಬೆಂಗಳೂರಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಲಾಕ್‌ಡೌನ್‌ನಿಂದಾಗಿ ಕೆಲಸ ಬಿಟ್ಟು ಮನೆಯಲ್ಲಿದ್ದ ನಾಗರಾಜಗೆ ಕುಟುಂಬದ ನಿರ್ವಹಣೆಯೇ ಕಷ್ಟವಾಗಿದ್ದ ಈ ಸಂದರ್ಭದಲ್ಲಿ ಪತ್ನಿ ಪದ್ಮಾ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದು ಆರ್ಥಿಕ ಪರಿಸ್ಥಿತಿ ನೆನೆದು ಚಿಂತೆಗೆ ಕಾರಣವಾಗಿತ್ತು.

ತಾಯಿ ಮಕ್ಕಳು ಆರೋಗ್ಯವಾಗಿರೋದು ನಾಗರಾಜ್‌ಗೆ ಖುಷಿ ತಂದಿತ್ತಾದರೂ, ಮೊದಲಿನ ಹೆಣ್ಣು ಮಗು ಸೇರಿದಂತೆ ನಾಲ್ವರು ಮಕ್ಕಳ ಭವಿಷ್ಯದ ಬಗ್ಗೆ ತೀವ್ರ ಚಿಂತಿತರಾಗಿದ್ದರು. ಈ ಮಾಹಿತಿ ಅರಿತ ಯಾದಗಿರಿಯ ಸ್ಥಳೀಯ ಪತ್ರಿಕೆಯ ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ರೆಡ್ಡಿ ಹತ್ತಿಕುಣಿ, ಸೋನು ಟೀಮ್‌ಗೆ ಮೆಸೇಜ್‌ ಮಾಡಿ ನಾಗರಾಜ್‌ ಪರಿಸ್ಥಿತಿ ಬಗ್ಗೆ ವಿವರಿಸಿದ್ದರು.

ಕೂಡಲೇ ನಾಗರಾಜ್ ಜೊತೆ ಮಾತಾಡಿದ ಸೋನು ಸೂದ್ ತಂಡದ ಸದಸ್ಯ ಗೋವಿಂದ್ ಅಗರ್ವಾಲ್, ಎಲ್ಲಾ ಮಾಹಿತಿ ಪಡೆದು ನೆರವಿನ ಭರವಸೆ ನೀಡಿದ್ದಾರೆ. ಸದ್ಯ ಮೂರು ತಿಂಗಳ ದಿನಸಿ ಪದಾರ್ಥ ನೀಡಲು ಮುಂದಾಗಿರೋ ಸೋನು ತಂಡ, ಭವಿಷ್ಯದಲ್ಲಿ ಮಕ್ಕಳ ಚಿಕಿತ್ಸೆ ವೆಚ್ಚ ಭರಿಸುವುದಾಗಿ ತಿಳಿಸಿದೆ. ನೆರವು ನೀಡಲು ಮುಂದಾಗಿರುವ ತಂಡಕ್ಕೆ ನಾಗರಾಜ್ ಕೃತಜ್ಞತೆ ಸಲ್ಲಿಸಿದ್ದಾರೆ.

ಮಲ್ಲಿಕಾರ್ಜುನ ರೆಡ್ಡಿ ಈ ಬಗ್ಗೆ ನಟ ಸೋನು ಸೂದ್ ಜೊತೆ ಮಾತನಾಡಿ ಸಮಸ್ಯೆಯ ಬಗ್ಗೆ ತಿಳಿಸಿದ್ದಾರೆ. ನಂತರ ಸೋನು ಸೂದ್ ಕೂಡ ಮಲ್ಲಿಕಾರ್ಜುನ ರೆಡ್ಡಿ ಅವರ ಜೊತೆ ಮಾತನಾಡಿ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ತ್ರಿವಳಿ ಮಕ್ಕಳ ಪೋಷಕರ ನೋವಿಗೆ ನಟ ಸೋನು ಸೂದ್ ಕಾಳಜಿ ತೋರಿ ನೆರವಿನ ಭರವಸೆ ನೀಡಿದ್ದು, ಬಡ ಕುಟುಂಬಕ್ಕೆ ಖುಷಿಕೊಟ್ಟಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top