fbpx
ಸಮಾಚಾರ

ಮೊನ್ನೇ ಅಷ್ಟೇ ಬಿಜೆಪಿ ಸೇರಿದ್ದ ಮಾಜಿ IPS ಅಣ್ಣಾಮಲೈ ವಿರುದ್ಧ ಕೇಸ್ ದಾಖಲು

ಕೆಲ ದಿನಗಳ ಹಿಂದಷ್ಟೇ ಬಿಜೆಪಿಗೆ ಸೇರಿದ್ದ ಕರ್ನಾಟಕ ಕೇಡರ್‌ನ ಮಾಜಿ ಐಪಿಎಸ್‌ ಅಧಿಕಾರಿ ಕೆ.ಅಣ್ಣಾಮಲೈ ವಿರುದ್ಧ ತಮಿಳುನಾಡಿನಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೊಯಮತ್ತೂರಿನಲ್ಲಿ ಕಾನೂನುಬಾಹಿರ ಸಭೆ ನಡೆಸಿದಕ್ಕಾಗಿ ಕೆ.ಅಣ್ಣಾಮಲೈ ಸೇರಿ ಪಕ್ಷದ ಕೆಲ ಕಾರ್ಯಕರ್ತರ ಮೇಲೆ ಕೊಯಮತ್ತೂರು ನಗರ ಪೊಲೀಸರು ಕೇಸ್‌ ದಾಖಲಿಸಿದ್ದಾರೆ.

ಬಿಜೆಪಿ ಸೇರಿದ ಬಳಿಕ ವಿಕೆಕೆ ಮೆನನ್ ರಸ್ತೆಯಲ್ಲಿರುವ ಬಿಜೆಪಿ ಕಚೇರಿಗೆ ಗುರುವಾರ ಅಣ್ಣಾಮಲೈ ಭೇಟಿ ನೀಡಿದ್ದರು. ಬಹಳಷ್ಟು ಕಾರ್ಯಕರ್ತರು ಕಚೇರಿಯಲ್ಲಿ ಸೇರಿ ಅವರನ್ನು ಸ್ವಾಗತಿಸಿದ್ದರು. ಕೋವಿಡ್ 19 ಹರಡದಂತೆ ಇರುವ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ ಕಚೇರಿಯಲ್ಲಿ ಬಹಳಷ್ಟು ಜನರು ಸೇರಿದ್ದರು. ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಅಣ್ಣಾಮಲೈ ವಾಹನದಿಂದಲೇ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದರು.

ಇದರ ಆಧಾರದ ಮೇಲೆ ಸಬ್‌ ಇನ್ಸ್‌ಪೆಕ್ಟರ್ ಸುಗನ್ಯಾ ನೀಡಿದ ದೂರಿನ ಆಧಾರದ ಮೇಲೆ, ಕತ್ತೂರು ಪೊಲೀಸರು ಕೆ.ಅಣ್ಣಾಮಲೈ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ನಂದಕುಮಾರ್, ಬಿಜೆಪಿ ರಾಜ್ಯ ಮಟ್ಟದ ನಾಯಕರಾದ ಜಿಕೆಎಸ್ ಸೆಲ್ವಕುಮಾರ್, ಎಸ್.ಆರ್.ಸೇಕರ್ ಮತ್ತು ಕನಗಸಬಪತಿ ಮತ್ತು ಇತರ ಕೆಲವು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕೆ.ಅಣ್ಣಾಮಲೈ ಹಾಗೂ ಇತರ ಬಿಜೆಪಿ ಕಾರ್ಯಕರ್ತರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 143, 269, 270, 285, 341 ಹಾಗೂ ಸಾಂಕ್ರಾಮಿಕ ರೋಗಗಳ ಕಾಯ್ದೆಯ ಸೆಕ್ಷನ್ 3ರ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top