fbpx
ಸಮಾಚಾರ

“ಚಿರು ಸರ್ಜಾ ಕುರಿತ ‘ಡ್ರಗ್ಸ್’ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ” ಇಂದ್ರಜಿತ್ ಲಂಕೇಶ್

ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ ಮಾಫಿಯಾದ ಕುರಿತ ಚರ್ಚೆ ಜೋರಾಗಿದೆ. ಈಗಾಗಲೇ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಸಿಸಿಬಿ ಕಚೇರಿಗೆ ತೆರಳಿ, ಸ್ಯಾಂಡಲ್‌ವುಡ್‌ನಲ್ಲಿ ಯಾರೆಲ್ಲ ಈ ಜಾಲದಲ್ಲಿ ಭಾಗಿಯಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಅವರು ನಟ ಚಿರಂಜೀವಿ ಸರ್ಜಾ ಬಗ್ಗೆ ನೀಡಿದ್ದ ಹೇಳಿಕೆಯೊಂದನ್ನು ವಾಪಸ್ ಪಡೆದುಕೊಂಡಿದ್ದಾರೆ.

ಸಿಸಿಬಿ ವಿಚಾರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಇಂದ್ರಜಿತ್ ಲಂಕೇಶ್ ಅವರು, ಈಗಾಗಲೇ ನಾನು ಚಿರಂಜೀವಿ ಸರ್ಜಾ ಅವರ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ಹಾಗೂ ಸುಂದರ್ ರಾಜ್ ಅವರ ಬಗ್ಗೆ ನೀಡಿದ್ದ ನನ್ನ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ ಎಂದರು.

ಚಿರಂಜೀವಿ ಸರ್ಜಾ ಯುವ ನಟರಾಗಿದ್ದು, ಆದ್ದರಿಂದಲೇ ನಾನು ಹೇಳಿದ್ದೆ. ಅವರು ಈಗ ಇದ್ದಿದ್ದರೆ ಮೇಘನಾ ಅವರು ಖುಷಿಯಿಂದ ಇರುತ್ತಿದ್ದರು. ಸತ್ತವರ ಬಗ್ಗೆ ಮಾತನಾಡಬಾರದು. ಸರ್ಜಾ ಅವರ ಬಗ್ಗೆ ನನಗೆ ಹೆಚ್ಚು ನೋವಿದೆ. ಆದರೆ ಈ ಮೂಲಕ ಹೇಳುತ್ತಿರುವುದೇನೆಂದರೇ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ. ಡ್ರಗ್ ಮಾಫಿಯಾ ಎಂಬುವುದು ಬಹುದೊಡ್ಡದಾಗಿದೆ. ಅದನ್ನು ಸಂಪೂರ್ಣವಾಗಿ ನಿಲ್ಲಿಸಲು ಆಗದಿದ್ದರೂ ಯುವ ಜನತೆಗೆ ಒಂದು ಸಂದೇಶ ರವಾನೆ ಆಗಲಿ ಎಂಬುವುದಷ್ಟೇ ನನ್ನ ಉದ್ದೇಶ ಎಂದು ಸ್ಪಷ್ಟಪಡಿಸಿದರು.

ಇಂದ್ರಜಿತ್ ಈ ಹಿಂದೆ ಹೇಳಿದ್ದು ಏನು?
ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ಮಾಧ್ಯಮಗಳ ಬಳಿ ಮಾತನಾಡಿದ್ದ ಇಂದ್ರಜಿತ್ ಅವರು “ಇತ್ತೀಚೆಗೆ ಮೃತಪಟ್ಟ ಯುವನಟನ ಶವಪರೀಕ್ಷೆ ಯಾಕೆ ಮಾಡ್ಲಿಲ್ಲ?” ಎಂದು ಪ್ರಶ್ನಿಸಿದ್ದರು. ಈ ಮಾತು ಸ್ಯಾಂಡಲ್​ವುಡ್​ ನಟನ ಸಾವಿನ ಬಗ್ಗೆ ಹೊಸ ಅನುಮಾನ ಹುಟ್ಟು ಹಾಕಿತ್ತು. ಇದರ ಬೆನ್ನಲ್ಲೇ ಇಂದ್ರಜಿತ್​ ಆರೋಪಕ್ಕೆ ಸರ್ಜಾ ಫ್ಯಾಮಿಲಿ ತಿರುಗೇಟು ಕೊಟ್ಟಿದೆ.

“ಇತ್ತೀಚಿಗೆ ಯುವ ನಟರೊಬ್ಬರು ತೀರಿಹೋದಾಗ ಎಲ್ಲರಿಗೂ ನೋವಾಗಿತ್ತು. ಆದರೆ ಈ ಬಗ್ಗೆ ಒಂದೇ ಒಂದು ತನಿಖೆ ಆಗಲಿಲ್ಲ. ಮೃತ ದೇಹಕ್ಕೆ ಯಾವುದೇ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಿಲ್ಲ. ಪೋಸ್ಟ್ ಮಾರ್ಟಮ್ ನಡೆಸದಂತೆ ರಾಜಕೀಯ ಒತ್ತಡ ಹೇರಲಾಯಿತು” ಎಂದು ಇಂದ್ರಜಿತ್ ಲಂಕೇಶ್ ಅವರು ಹೇಳಿದ್ದರು.

“ಆ ನಟನ ಕುಟುಂಬಕ್ಕೆ ನೋವು ಮಾಡುವ ಉದ್ದೇಶ ನನಗಿಲ್ಲ. ಆದರೆ, ಮರಣೋತ್ತರ ಪರೀಕ್ಷೆ ಏಕೆ ನಡೆಸಿಲ್ಲವೆಂಬುದೇ ನನ್ನ ಪ್ರಶ್ನೆ. ಡ್ರಗ್ಸ್​ನಿಂದಲೇ ಆ ನಟ ಮೃತಪಟ್ಟಿದ್ದರಾ ಎಂದು ತನಿಖೆ ನಡೆಸಿದ್ದರೆ ಎಲ್ಲ ಮಾಹಿತಿ ಬಹಿರಂಗವಾಗುತ್ತಿತ್ತು. ಜೊತೆಗೆ, ಡ್ರಗ್ಸ್​ ಜಾಲದಲ್ಲಿ ಇನ್ನೂ ಯಾರೆಲ್ಲಾ ಇದ್ದಾರೆ. ಇದರಿಂದ ಯಾರ್ಯಾರಿಗೆ ಚಿತ್ರರಂಗದಲ್ಲಿ ಅವಕಾಶ ಸಿಕ್ಕಿದೆ ಎಂದೂ ತಿಳಿಸುತ್ತೇನೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top