ಡ್ರಗ್ಸ್ ಮಾಫಿಯಾಗೂ ಸ್ಯಾಂಡಲ್ ವುಡ್ ಗೂ ನಂಟಿರುವ ಸುದ್ದಿ ಹೊರಬಂದ ಬಳಿಕ, ಅನೇಕ ನಟ, ನಟಿಯರು ತಮ್ಮದೇ ಆದ ಹೇಳಿಕೆ, ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಈ ನಡುವೆ ಗಾಂಜಾ ಡ್ರಗ್ ಅಲ್ಲ ಅದೊಂದು ಮೆಡಿಸಿನ್ ಎಂದು ಯುವನಟ ರಾಕೇಶ್ ಅಡಿಗ ಹೇಳಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ಖಾಸಗಿ ವಾಹಿನಿಗೆ ಮಾತನಾಡಿದ ಯುವನಟ “ಗಾಂಜಾ ಬಗ್ಗೆ ತಪ್ಪು ಕಲ್ಪನೆ ಇದೆ. ಅದನ್ನು ಹೋಗಲಾಡಿಸಬೇಕು. ಅಲ್ಲದೆ ಗಾಂಜಾವನ್ನು ಕಾನೂನುಬದ್ದಗೊಳಿಸನೇಕು” ಎಂದಿದ್ದಾರೆ.
ಡ್ರಗ್ ಎಂಬುದು ಇಡೀ ಪ್ರಪಂಚದಲ್ಲೇ ಇದೆ. ಈಗ ಸ್ಯಾಂಡಲ್ವುಡ್ನಲ್ಲಿ ಕೆಲವರನ್ನು ಗುರುತಿಸಿ ಅವರನ್ನು ಅಪರಾಧಿಗಳನ್ನಾಗಿ ಮಾಡಬೇಡಿ. ಅವರನ್ನು ಹೊರಗೆ ಇಡುವುದು ಬೇಡ. ಯಾರು ಅದನ್ನು ತೆಗೆದುಕೊಳ್ಳುತ್ತಿದ್ದಾರೆ ಎನ್ನುವುದಕ್ಕಿಂತ ಯಾರು ತಂದು ಮಾರುತ್ತಿದ್ದಾರೆ ಅವರನ್ನು ಹಿಡಿದುಕೊಳ್ಳಬೇಕು. ನಾನು ಒಬ್ಬ ಸಾಮಾನ್ಯ ಪ್ರಜೆಯಾಗಿ ಹೇಳುತ್ತಿದ್ದೇನೆ ಗಾಂಜಾವನ್ನು ಡ್ರಗ್ನಿಂದ ದೂರ ಇಡಬೇಕು. ಗಾಂಜಾ ಒಂದು ಗಿಡ, ಅದಕ್ಕೆ ನೂರಾರು ವರ್ಷಗಳ ಇತಿಹಾಸವಿದೆ ಎಂದು ರಾಕೇಶ್ ಹೇಳಿದರು.
ಈ ಹಿಂದೆ ಗಾಂಜಾ ಭಾರತೀಯ ಸಂಸ್ಕೃತಿಗೆ ಬೆರೆತು ಹೋಗಿತ್ತು. 1985ರಲ್ಲಿ ಇದು ಬ್ಯಾನ್ ಆಯ್ತು, ಹಾಗಾದರೆ 1985ರವರೆಗೆ ಭಾರತದಲ್ಲಿ ಎಲ್ಲರೂ ಡ್ರಗ್ ಅಡಿಕ್ಟ್ ಆಗಿದ್ರಾ ಎಂದು ರಾಕೇಶ್ ಪ್ರಶ್ನೆ ಮಾಡಿದ್ದಾರೆ.
ಜೊತೆಗೆ ನಾನೂ ಗಾಂಜಾವನ್ನು ತೆಗೆದುಕೊಳ್ಳುತ್ತಿದ್ದೆ. ಈಗಲೂ ಅದರಿಂದ ಮಾಡಿದ ಕೇಕ್, ಕುಕಿಗಳನ್ನು ಯಾರದರೂ ಮಾಡಿಕೊಟ್ಟರೆ ತಿನ್ನುತ್ತೇನೆ ಎಂದು ರಾಕೇಶ್ ಬಹಿರಂಗವಾಗಿ ಹೇಳಿಕೆ ನೀಡಿದರು.
ಮುಂದುವರಿದು “ಅಮೆರಿಕಾದಲ್ಲಿ ಗಾಂಜಾ ಕಾನೂನುಬದ್ದ ವಸ್ತುವಾಗಿದೆ. ಅಮೆರಿಕಾವನ್ನೇ ಎಲ್ಲಾ ವಿಚಾರಗಳಲ್ಲಿ ಹಿಂಬಾಲಿಸುವ ನಮ್ಮಲ್ಲಿ ಹೀಗೇಕೆ ನಡೆಯುತ್ತಿದೆ? ಗಾಂಜಾದಿಂದ ಆರ್ಥಿಕತೆ, ಔಷಧ ಉದ್ಯಮಕ್ಕೂ ಲಾಭವಿದೆ” ಎಂದು ರಾಕೇಶ್ ಅಡಿಗ ಹೇಳಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
