fbpx
ಸಮಾಚಾರ

ಚಂದನವನದ ಅಭಿನಯ ಚಕ್ರವರ್ತಿಗೆ ಇಂದು ಹುಟ್ಟುಹಬ್ಬದ ಸಂಭ್ರಮ: ಇದು ಕಿಚ್ಚ ನಡೆದ ಬಂದ ದಾರಿ

ಕನ್ನಡ ಚಿತ್ರರಂಗದ ಈ ತಲೆಮಾರಿನ ನಾಯಕನಟರನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಮುಂಚೂಣಿಯ ನಟ ಅಂದ್ರೆ ಅದು ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್. ತಮ್ಮ ವಿಭಿನ್ನ ಕಂಠ ಮತ್ತು ಮನೋಜ್ಞ ನಟನೆಯಿಂದಲೇ ಸ್ಟಾರ್ ಅನ್ನಿಸಿಕೊಂಡಿರುವ ಕಿಚ್ಚಾ ಸುದೀಪ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕಿಚ್ಚಾ ಸುದೀಪ್ ಸುದೀಪ್ ದೇಶ ವಿದೇಶಗಳಲ್ಲಿಯೂ ಸಖತ್ ಫೇಮಸ್. ಬೇರೆ ಬೇರೆ ಭಾಷೆಗಳಲ್ಲಿಯೂ ಬಹು ಬೇಡಿಕೆಯ ನಟ. ಸಿನಿಮಾವನ್ನೇ ಧ್ಯಾನದಂತೆ ಹಚ್ಚಿಕೊಂಡ ವಿರಳ ವ್ಯಕ್ತಿತ್ವಗಳಲ್ಲಿ ಒಬ್ಬರಾದ ಸುದೀಪ್ ಚಿತ್ರರಂಗಕ್ಕೆ ಅಡಿಯಿರಿಸಿ ಭರ್ತಿ 22 ವರ್ಷ ತುಂಬಿದೆ! ಸದ್ಯ ಸುದೀಪ್ ಅವರ 45ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸುದೀಪ್ ಅವರು ನಡೆದುಬಂದ ದಾರಿಯನ್ನೊಮ್ಮೆ ಅವಲೋಕಿಸೋಣ…

ತೊಂಭತ್ತಾರನೇ ಇಸವಿಯಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಸುದೀಪ್ ಹಲವಾರು ಏಳು ಬೀಳುಗಳನ್ನು ಕಂಡಿದ್ದಾರೆ. ಅವಕಾಶಕ್ಕಾಗಿ ಅಲೆದಿದ್ದಾರೆ, ಅದನ್ನು ದಕ್ಕಿಸಿಕೊಳ್ಳಲು ತೀರಾ ಸಣ್ಣಪುಟ್ಟಪಾತ್ರಗಳನ್ನೂ ಮಾಡಿದ್ದಾರೆ. ಯಾಕೆಂದರೆ ಸಿನಿಮಾ ಎಂಬುದು ಸುದೀಪ್ ಬದುಕಿನ ಮಹಾ ಕನಸಾಗಿತ್ತು. ಒಬ್ಬ ನಟ ಅಭಿಮಮಾನದ ಪರಿಧಿಯಾಚೆಗೂ ಇಷ್ಟವಾಗುವಂಥಾ ಕೆಲ ಕ್ವಾಲಿಟಿಗಳಿವೆ. ಅಂಥವು ಕಿಚ್ಚಾ ಸುದೀಪ್ ವ್ಯಕ್ತಿತ್ವದಲ್ಲಿಯೂ ಧಾರಾಳವಾಗಿಯೇ ಇವೆ. ಹೀರೋ ಆಗಲೂ ಸೈ, ವಿಲನ್ ಆಗಲೂ ರೆಡಿ ಎಂಬ ಮನಸ್ಥಿತಿಯಿಂದಲೇ ಸುದೀಪ್ ಎಲ್ಲರ ಮನ ಗೆದ್ದಿದ್ದಾರೆ. ತೆಲುಗು, ಹಿಂದಿ, ತಮಿಳು ಸೇರಿದಂತೆ ನಾನಾ ಭಾಷೆಗಳಲ್ಲಿಯೂ ಛಾಪು ಮೂಡಿಸಿದ್ದಾರೆ.

ತೆರೆ ಮೇಲೆ ಮಾತ್ರವಲ್ಲದೇ, ತೆರೆಯಾಚೆಗೂ ಹೀರೋ ಆಗಿಯೇ ಇರುವುದು ಸುದೀಪ್ ಸ್ಪೆಷಾಲಿಟಿ. ಬಲಗೈಲಿ ಕೊಟ್ಟಿದ್ದ ಎಡಗೈಗೆ ಗೊತ್ತಾಗಬಾರದು ಎಂಬಂತೆ ಸದಾ ಅಸಹಾಯಕರಿಗೆ ಸಹಾಯ ಮಾಡುತ್ತಾ, ಅಭಿಮಾನಿಗಳೀಗೂ ಮಾದರಿಯಾಗುತ್ತಾ ಮುಂದುವರೆಯುತ್ತಿರುವ ಸುದೀಪ್ ನಟನೆಯ ಬಹುನಿರೀಕ್ಷಿತ `ಕೋಟಿಗೊಬ್ಬ 3 ಚಿತ್ರ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ.

 


ಕ್ರಿಯೇಟಿವ್ ಕಿಚ್ಚ:
ಇವತ್ತು ಸುದೀಪ್ ಒಬ್ಬ ಜನಪ್ರಿಯ ನಾಯಕನಟ ಮಾತ್ರವಲ್ಲ; ಒಬ್ಬ ಕ್ರಿಯಾಶೀಲ ನಿರ್ದೇಶಕ ಎನಿಸಿಕೊಂಡಿದ್ದಾರೆ. ಮತ್ತೊಂದು ವಿಶೇಷವೆಂದರೆ ಕನ್ನಡ ಚಿತ್ರರಂಗದ ಈ ಲಂಬೂ ರಾಮ್ ಗೋಪಾಲ್ ವರ್ಮಾ ನಿರ್ದೇಶನದಲ್ಲಿ ಹಿಂದಿ ಚಿತ್ರರಂಗದ ಲಂಬೂ ಅಮಿತಾಬ್ ಜೊತೆ ರಣ್ ಚಿತ್ರದಲ್ಲಿ ನಟಿಸಿ, ಅವರಿಂದಲೂ ಭೇಷ್ ಎನಿಸಿಕೊಂಡಿದ್ದು. ನಂತರ ರಾಜಮೌಳಿಯಂಥ ಸ್ಟಾರ್ ನಿರ್ದೇಶಕನ `ಈಗ ಮತ್ತು ಬಾಹುಬಲಿ ಸಿನಿಮಾಗಳಲ್ಲಿ ನೆಗೆಟೀವ್ ಪಾತ್ರದಲ್ಲಿ ಕಾಣಿಸಿಕೊಂಡರೂ ಭರ್ಜರಿಯಾಗಿ ಮಿಂಚಿದ್ದು ಜಗತ್ತಿಗೇ ಗೊತ್ತಿರೋ ವಿಚಾರ.

ಹೀಗೆ ಕನ್ನಡದ ಹುಡುಗನೊಬ್ಬ ರಾಷ್ಟ್ರಮಟ್ಟದಲ್ಲಿ ಮಿನುಗುತ್ತಿರುವುದು ನಿಜಕ್ಕೂ ಸಂತೋಷದ ವಿಷಯ. ಸುದೀಪ್ ಯುವ ನಾಯಕನಟರುಗಳಲ್ಲಿ ಆರಂಭದಿಂದಲೂ ಕಲಿಯುವ ತುಡಿತ ಕಾಣುತ್ತಿತ್ತು. ತಾನು ನಾಯಕನಟನೆಂದು ಸುಮ್ಮನೆ ಕುಳಿತುಕೊಳ್ಳುವ ಬದಲು ಸಂಗೀತ, ಸಾಹಸ ದೃಶ್ಯ ಸಂಯೋಜನೆ, ಸಂಕಲನ, ಪ್ರಚಾರದ ವೈಖರಿ… ಹೀಗೆ ಎಲ್ಲದರ ಬಗ್ಗೆಯೂ ತಲೆಕೆಡಿಸಿಕೊಳ್ಳುತ್ತಿದ್ದರು. ಆರಂಭದಲ್ಲಿ ಸುದೀಪ್’ರ ಈ ವರ್ತನೆಯನ್ನು ನಿರ್ಮಾಪಕರು ಇಷ್ಟಪಡಲಿಲ್ಲ. ಈತ ಎಲ್ಲದರಲ್ಲೂ ಮೂಗು ತೂರಿಸುತ್ತಾನೆ ಎಂಬ ಅಪಸ್ವರ ಕೇಳಿಬಂತು. ಆದರೂ ಸುದೀಪ್ ಮಾತ್ರ ಇದ್ಯಾವುದರ ಬಗ್ಗೆ ಸಿನಿಮಾದ ಎಲ್ಲಾ ವಿಭಾಗಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡರು. ಇದರ ಫಲವಾಗಿಯೇ ಅವರು ಇಂದು ಅದ್ಭುತ ನಟ ಎಂದೆನಿಸಿಕೊಳ್ಳಲು ಸಾಧ್ಯವಾಗಿದೆ.

ಸಿನಿಮಾನೇ ಉಸಿರು…
ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ರಿಯಲ್‌ಸ್ಟಾರ್ ಉಪೇಂದ್ರ ಅವರಂತೆ ದಿನದ ೨೪ ಗಂಟೆಯೂ ಸಿನಿಮಾ ಬಗ್ಗೆ ಚಿಂತಿಸುವ ಯುವನಾಯಕನಟನೆಂದರೆ ಸುದೀಪ್ ಮಾತ್ರ. ಆರಂಭದಲ್ಲಿ ಸುದೀಪ್ ತಾನು ರವಿಚಂದ್ರನ್ ಅವರಂತೆ ಶೋಮ್ಯಾನ್ ಆಗಬೇಕು ಎಂಬ ಮಾತುಗಳನ್ನು ಆಡುತ್ತಿದ್ದರು. ಅದಕ್ಕಿಂತಲೂ ಮೊದಲು ಅವರು ಮೆಚ್ಚುತ್ತಿದ್ದ ಮತ್ತೊಬ್ಬ ನಾಯಕನಟನೆಂದರೆ ದಿ.ಶಂಕರ್‌ನಾಗ್! ಈಗ ನೋಡಿದರೆ ಸುದೀಪ್, ರವಿಚಂದ್ರನ್ ಅವರ ಶ್ರೀಮಂತಿಕೆ, ಶಂಕರ್‌ನಾಗ್‌ರ ಸಾಹಸ ಮನೋಭಾವ ಮತ್ತು ಉಪೇಂದ್ರರ ಕ್ರಿಯಾಶೀಲತೆ ಇವೆಲ್ಲ ಮಿಳಿತಗೊಂಡಂತೆ ಕಾಣಿಸುತ್ತಾರೆ. ಈ ಕಾರಣಕ್ಕಾಗಿಯೋ ಏನೋ ಈಗಿನ ಜಮಾನದ ಹೀರೋಗಳಿಗೆಲ್ಲಾ ಈ ಸುದೀಪ್ ಸ್ಫೂರ್ತಿಯ ಚಿಲುಮೆಯಾಗಿ ಕಾಣಿಸುತ್ತಾರೆ. ಉದಾಹರಣೆಗೆ ಚಿರಂಜೀವಿ ಸರ್ಜಾ, ತರುಣ್, ಪ್ರದೀಪ್, ರಾಹುಲ್, ತರುಣ್ ಸುಧೀರ್… ಮೊದಲಾದ ಅನೇಕ ಯುವನಾಯಕನಟರು ನಾವೆಲ್ಲಾ ಸುದೀಪ್ ಅಭಿಮಾನಿಗಳು ಎಂದು ಬಹಿರಂಗವಾಗಿಯೇ ಹೇಳಿಕೊಳ್ಳುತ್ತಿದ್ದಾರೆ.

ಹೀಗೆ ಸುದೀಪ್ ಕನ್ನಡ ಚಿತ್ರರಂಗದಲ್ಲಿ ಒಂದು ಶಕ್ತಿಯಾಗಿ ಉದಯಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲೇ ಸುದೀಪ್ ರಾಜಕೀಯಕ್ಕೆ ಪಾದಾರ್ಪಣೆ ಮಾಡುವ ಸುದ್ದಿಯೂ ಆಗಾಗ ಕೇಳಿಬರುತ್ತಿದೆ. `ಸಿನಿಮಾ ನಿರ್ಮಿಸುವುದು, ಎಲೆಕ್ಷನ್‌ಗೆ ನಿಂತು ದುಡ್ಡು ಇನ್‌ವೆಸ್ಟ್ ಮಾಡುವುದು ಎರಡೂ ಒಂದೇ. ಲಾಭದ ಗ್ಯಾರೆಂಟಿ ಇಲ್ಲ. ಎಂದು ರಾಜಕಾರಣವನ್ನು ಸೈಲೆಂಟಾಗಿ ಸೈಡಿನಲ್ಲಿಟ್ಟಿರುವ ಕಿಚ್ಚ ಮುಂದೊಂದು ದಿನ ರಾಜಕೀಯಕ್ಕೆ ನೇರವಾಗಿ ಎಂಟ್ರಿ ಕೊಟ್ಟರೂ ಆಶ್ಚರ್ಯವಿಲ್ಲ. ಅದೆಲ್ಲ ಏನೇ ಆಗಲಿ ಕನ್ನಡ ಚಿತ್ರರಂಗದ ಅಪ್ಪಟ ಕಲಾವಿದ, ತಂತ್ರಜ್ಞನಾಗಿರುವ ಕಿಚ್ಚನ ಸೇವೆ ಕನ್ನಡ ಚಿತ್ರರಂಗಕ್ಕೆ ಯಾವತ್ತಿಗೂ ಇದ್ದೇಇರಲಿ…ಒನ್ಸ್ ಎಗೈನ್ ಹ್ಯಾಪಿ ಬರ್ತಡೇ ಕಿಚ್ಚ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top