fbpx
ಸಮಾಚಾರ

“ಇಂದ್ರಜಿತ್ ಸಾರ್ವಜನಿಕವಾಗಿ ಬೇಷರತ್ ಕ್ಷಮೆ ಕೇಳಬೇಕು” ವಾಣಿಜ್ಯ ಮಂಡಳಿಗೆ ಚಿರು ಸರ್ಜಾ ಪತ್ನಿ ಮೇಘನಾ ಪತ್ರ

ಸ್ಯಾಂಡಲ್‌ವುಡ್‌ ನಲ್ಲಿ ಸಂಚಲನ ಮೂಡಿಸುತ್ತಿರುವ ಡ್ರಗ್ಸ್ ಮಾಫಿಯಾ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾಡಿರುವ ಆರೋಪಕ್ಕೆ ಚಿರು ಪತ್ನಿ ಮೇಘನಾ ತಿರುಗೇಟು ನೀಡಿದ್ದಾರೆ. “ಇಂದ್ರಜಿತ್ ಸಾರ್ವಜನಿಕವಾಗಿ ಬೇಷರತ್ ಕ್ಷಮೆ ಕೇಳಬೇಕು” ವಾಣಿಜ್ಯ ಮಂಡಳಿಗೆ ಚಿರು ಸರ್ಜಾ ಪತ್ನಿ ಮೇಘನಾ ಪತ್ರ ಬರೆದಿದ್ದಾರೆ.

“ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿಕೆಯಿಂದ ನನಗೆ ನೋವಾಗಿದ್ದು, ಅವರು ಸಾರ್ವಜನಿಕವಾಗಿ ಬೇಷರತ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿ ನಟಿ ಮೃಘನಾ ರಾಜ್ ಅವರು ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.” ಎಂದು ಫಿಲಂ ಚೇಂಬರ್ ನ NM ಸುರೇಶ್ ಅವರು ಪ್ರಸ್ತಾಪ ಮಾಡಿದ್ದಾರೆ.

ಅಲ್ಲದೆ ಮೇಘನಾ ರಾಜ್ ಬರೆದ ಪತ್ರವನ್ನು ಸುರೇಶ ಓದಿದರು. “ಇಂದ್ರಜಿತ್ ಮಾತುಗಳ ನನಗೆ ಮಾನಸಿಕ ತೊಳಲಾಟಕ್ಕೆ ತಳ್ಳಿವೆ. ಗರ್ಭಿಣಿ ಆಗಿರುವ ನಾನು ಮಾನಸಿಕ ತೊಳಲಾಟದಲ್ಲಿದ್ದೇನೆ. ನನ್ನ ದಿವಂಗತ ಪತಿ ಮೇಲೆ ಇಂದ್ರಜಿತ್ ಆರೋಪ ಮಾಡಿದ್ದಾರೆ. ಇಂದ್ರಜಿತ್ ಸಾರ್ವಜನಿಕವಾಗಿ ಬೇಷರತ್ ಕ್ಷಮೆ ಕೇಳಬೇಕು ” ಎಂದು ಪತ್ರದಲ್ಲಿ ಬರೆಯಲಾಗಿದೆ ಎಂದು ಸುರೇಶ್ ಓದಿ ಹೇಳಿದರು.

ಮೇಘನಾ ರಾಜ್ ಪತ್ರದ ಹಿನ್ನೆಲೆಯಲ್ಲಿ ಇಂದ್ರಜಿತ್ ಅವರಿಗೆ ಪತ್ರ ಬರೆಯುತ್ತೇವೆ. ಈ ಮೂಲಕ ಮೇಘನಾಬರೆದ ಪತ್ರದ ವಿಷಯವನ್ನು ಇಂದ್ರಜಿತ್ ಗಮನಕ್ಕೆ ತರುವುದಾಗಿ ಕೆ.ವಿ ಚಂದ್ರಶೇಖರ್ ತಿಳಿಸಿದರು.

ಇಂದ್ರಜಿತ್ ಮಾಡಿದ್ದ ಆರೋಪವೇನು?
ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ಮಾಧ್ಯಮಗಳ ಬಳಿ ಮಾತನಾಡಿದ್ದ ಇಂದ್ರಜಿತ್ ಅವರು “ಇತ್ತೀಚೆಗೆ ಮೃತಪಟ್ಟ ಯುವನಟನ ಶವಪರೀಕ್ಷೆ ಯಾಕೆ ಮಾಡ್ಲಿಲ್ಲ?” ಎಂದು ಪ್ರಶ್ನಿಸಿದ್ದರು. ಈ ಮಾತು ಸ್ಯಾಂಡಲ್​ವುಡ್​ ನಟನ ಸಾವಿನ ಬಗ್ಗೆ ಹೊಸ ಅನುಮಾನ ಹುಟ್ಟು ಹಾಕಿತ್ತು. ಇದರ ಬೆನ್ನಲ್ಲೇ ಇಂದ್ರಜಿತ್​ ಆರೋಪಕ್ಕೆ ಸರ್ಜಾ ಫ್ಯಾಮಿಲಿ ತಿರುಗೇಟು ಕೊಟ್ಟಿದೆ.

“ಇತ್ತೀಚಿಗೆ ಯುವ ನಟರೊಬ್ಬರು ತೀರಿಹೋದಾಗ ಎಲ್ಲರಿಗೂ ನೋವಾಗಿತ್ತು. ಆದರೆ ಈ ಬಗ್ಗೆ ಒಂದೇ ಒಂದು ತನಿಖೆ ಆಗಲಿಲ್ಲ. ಮೃತ ದೇಹಕ್ಕೆ ಯಾವುದೇ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಿಲ್ಲ. ಪೋಸ್ಟ್ ಮಾರ್ಟಮ್ ನಡೆಸದಂತೆ ರಾಜಕೀಯ ಒತ್ತಡ ಹೇರಲಾಯಿತು” ಎಂದು ಇಂದ್ರಜಿತ್ ಲಂಕೇಶ್ ಅವರು ಹೇಳಿದ್ದರು.

“ಆ ನಟನ ಕುಟುಂಬಕ್ಕೆ ನೋವು ಮಾಡುವ ಉದ್ದೇಶ ನನಗಿಲ್ಲ. ಆದರೆ, ಮರಣೋತ್ತರ ಪರೀಕ್ಷೆ ಏಕೆ ನಡೆಸಿಲ್ಲವೆಂಬುದೇ ನನ್ನ ಪ್ರಶ್ನೆ. ಡ್ರಗ್ಸ್​ನಿಂದಲೇ ಆ ನಟ ಮೃತಪಟ್ಟಿದ್ದರಾ ಎಂದು ತನಿಖೆ ನಡೆಸಿದ್ದರೆ ಎಲ್ಲ ಮಾಹಿತಿ ಬಹಿರಂಗವಾಗುತ್ತಿತ್ತು. ಜೊತೆಗೆ, ಡ್ರಗ್ಸ್​ ಜಾಲದಲ್ಲಿ ಇನ್ನೂ ಯಾರೆಲ್ಲಾ ಇದ್ದಾರೆ. ಇದರಿಂದ ಯಾರ್ಯಾರಿಗೆ ಚಿತ್ರರಂಗದಲ್ಲಿ ಅವಕಾಶ ಸಿಕ್ಕಿದೆ ಎಂದೂ ತಿಳಿಸುತ್ತೇನೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದರು.

ಹೇಳಿಕೆ ವಾಪಸ್ ಪಡೆದ ನಿರ್ದೇಶಕ:
ಈ ವಿಚಾರ ಭಾರೀ ಚರ್ಚೆಯಾಗುತ್ತಿದ್ದಂತೆಯೇ ಇಂದ್ರಜಿತ್ ಅವರು ತನ್ನ ಹೇಳಿಕೆಯನ್ನು ವಾಪಸ್ ಪಡೆದುಕೊಂಡಿದ್ದರು. ಮೊದಲ ಬಾರಿಗೆ ಸಿಸಿಬಿ ವಿಚಾರಣೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗಾಗಲೇ ನಾನು ಚಿರಂಜೀವಿ ಸರ್ಜಾ ಅವರ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ಹಾಗೂ ಸುಂದರ್ ರಾಜ್ ಅವರ ಬಗ್ಗೆ ನೀಡಿದ್ದ ನನ್ನ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ ಎಂದು ಹೇಳಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top