fbpx
ಸಮಾಚಾರ

ಬೆಳ್ಳಂಬೆಳಗ್ಗೆ ನಟಿ ಸಂಜನಾ ಗಲ್ರಾನಿ ಮನೆ ಮೇಲೆ ಸಿಸಿಬಿ ದಾಳಿ: ಸಂಜನಾ ಗಲ್ರಾನಿ ಸಿಸಿಬಿ ವಶಕ್ಕೆ

ಕನ್ನಡ ಚಿತ್ರರಂಗಕ್ಕೂ ಡ್ರಗ್ಸ್‌ ಮಾಫಿಯಾಗೂ ನಂಟು ಇದೆ ಎಂಬ ಆರೋಪದ ಮೇಲೆ ಹಲವರ ವಿಚಾರಣೆ ನಡೆಯುತ್ತಿದ್ದು, ಈಗ ನಟಿ ಸಂಜನಾ ಗಲ್ರಾನಿ ಅವರ ಮೇಲೆ ಅನುಮಾನದ ಕಣ್ಣುಗಳು ಬಿದ್ದಿವೆ. ಬೆಂಗಳೂರಿನ ಇಂದಿರಾ ನಗರದಲ್ಲಿ ಇರುವ ಅವರ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ರಾಗಿಣಿ ತನಿಖಾಧಿಕಾರಿಗಳಾದ ಇನ್ಸ್ ಪೆಕ್ಟರ್ ಪುನೀತ್ ನೇತೃತ್ವದ ಆರು ಜನರ ತಂಡ ಇಂದು ಮುಂಜಾನೆ ಇಂದಿರಾನಗರದ 100 ಫೀಟ್ ರಸ್ತೆಯಲ್ಲಿರುವ ಸಂಜನಾ ಮನೆಯ ಮೇಲೆ ದಿಢೀರ್​ ದಾಳಿ ನಡೆಸಿದೆ. ರಾಹುಲ್ ಹಾಗೂ ಪೃಥ್ವಿ ವಿಚಾರಣೆ ವೇಳೆ ಕೊಟ್ಟ ಮಾಹಿತಿ ಆಧರಿಸಿ ರೇಡ್ ನಡೆದಿದೆ ಎನ್ನಲಾಗಿದೆ. ಈ ಹಿಂದೆ ರಾಗಿಣಿ ಮನೆ ಮೇಲೆ ರೇಡ್​ ಮಾಡಿದಾಗ ಸಾಕ್ಷಿಗಳ ಸಮಕ್ಷದಲ್ಲಿ ತನಿಖೆ ನಡೆದಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರು ಸರ್ಕಾರಿ ಸಾಕ್ಷಿಗಳ ಸಮಕ್ಷಮ ದಲ್ಲಿ ಸಂಜನಾ ಮನೆಯ ಶೋಧಕಾರ್ಯ ನಡೆದಿದೆ.

ಸಂಜನಾ ಅವರ ಬಿಎಂಡಬ್ಲ್ಯು ಕಾರನ್ನು ಪೊಲೀಸರು ಪರಿಶೀಲಿಸಿದ್ದಾರೆ. ಕಾರು ಅರ್ಚನಾ ಗರ್ಲಾನಿ ಎಂಬ ಹೆಸರಲ್ಲಿ ನೋಂದಣಿ ಆಗಿದ್ದು, ಸಂಜನಾ ಅವರಿಗೆ ಎರಡು ಹೆಸರಿದೆಯೇ? ಅಥವಾ ಅರ್ಚನಾ ಯಾರು ಎಂಬುದರ ಬಗ್ಗೆ ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲ.

ಸಂಜನಾ ಸಿಸಿಬಿ ವಶಕ್ಕೆ:
ಶೋಧಕಾರ್ಯ ಪೂರ್ಣಗೊಳ್ಳುತ್ತಿದ್ದಂತೆ ಸಂಜನಾ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ನಟಿ ಸಂಜನಾ ಕೂಗಾಡಿದ್ದಾರೆ. ಮನೆಯಲ್ಲಿ ಏನೂ ಸಿಗದೇ ಇದ್ದರೂ ಏಕೆ ನನ್ನನ್ನು ವಶಕ್ಕೆ ಪಡೆಯುತ್ತಿದ್ದೀರಿ ಎಂದು ವಾಗ್ವಾದ ನಡೆಸಿದ್ದಾರೆ. ಶೀಘ್ರವೇ ಅವರನ್ನು ಸಿಸಿಬಿ ಕೇಂದ್ರಕ್ಕೆ ಕರೆದೊಯ್ಯಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top