fbpx
ಸಮಾಚಾರ

ಸರ್ಕಾರಿ ಕಚೇರಿ, ಬ್ಯಾಂಕ್ ಹಿಂದಿಯಲ್ಲೇ ಮಾತನಾಡಲು ಅಮಿತ್ ಶಾ ಆಗ್ರಹ

ಪ್ರತಿ ವರ್ಷದಂತೆ ಇಂದು ಅಂದರೆ ಸೆಪ್ಟೆಂಬರ್ 14 ರಂದು ಒಕ್ಕೂಟ ಸರ್ಕಾರ ಹಿಂದಿ ದಿವಸವನ್ನು ಆಚರಿಸುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹಿಂದಿಯೇತರ ರಾಜ್ಯಗಳಿಂದ ದೊಡ್ಡ ಮಟ್ಟದಲ್ಲಿ ವಿರೋಧವೂ ವ್ಯಕ್ತವಾಗಿದೆ. ‘ಹಿಂದಿ ಬರಲ್ಲ ಹೋಗೋ’ ಎನ್ನುವ ಟಿ ಶರ್ಟ್​ಗಳು ಟ್ರೆಂಡ್​ನಲ್ಲಿವೆ. ಈಗ ಕೇಂದ್ರ ಗೃಹ ಸಚಿವ ಅಮಿತ್​ ಶಾ ಆಡಿರುವ ಮಾತುಗಳು ಪ್ರಾದೇಶಿಕ ಭಾಷೆ ಪ್ರೇಮಿಗಳಿಗೆ ಸಿಟ್ಟು ತರಿಸಿದೆ

ಹಿಂದಿ ದಿವಸ್ ಅಂಗವಾಗಿ ಸೋಮವಾರ ಸರಣಿ ಟ್ವೀಟ್‌ಗಳ ಜತೆಗೆ ವಿಡಿಯೊ ಸಂದೇಶ ನೀಡಿರುವ ಅವರು, ‘ಹಿಂದಿ ಭಾಷೆ, ಭಾರತೀಯ ಸಂಸ್ಕೃತಿಯ ಭಾಗವಾಗಿದೆ. ಸ್ವಾತಂತ್ರ್ಯ ಹೋರಾಟದ ಕಾಲದಿಂದಲೂ ಭಾರತದ ಏಕತೆ ಮತ್ತು ಸಮಗ್ರತೆಯ ಪರಿಣಾಮಕಾರಿ ಮಾಧ್ಯಮವಾಗಿದೆ’ ಎಂದು ಪ್ರತಿಪಾದಿಸಿದ್ದಾರೆ.

‘ಒಂದು ದೇಶವನ್ನು ಅದರ ಗಡಿ ಮತ್ತು ಭೌಗೋಳಿಕತೆಯಿಂದ ಗುರುತಿಸಲಾಗುತ್ತದೆ. ಆದರೆ, ಒಂದು ದೇಶದ ಪ್ರಮುಖ ಗುರುತು ಎಂದರೆ ಅದು ಭಾಷೆ ಮಾತ್ರ. ಭಾಷಾ ವೈವಿಧ್ಯವೇ ಭಾರತದ ಏಕತೆ ಮತ್ತು ಶಕ್ತಿಯ ಸಂಕೇತ. ಹೀಗೆ ಭಾಷೆ, ಸಾಂಸ್ಕೃತಿಯ ವೈವಿಧ್ಯದಿಂದ ತುಂಬಿರುವ ಭಾರತವವನ್ನು ಹಿಂದಿ ಭಾಷೆ ಶತಮಾನಗಳಿಂದ ಒಗ್ಗೂಡಿಸುವ ಶಕ್ತಿಯಾಗಿದೆ’ ಎಂದು ಹೇಳಿದ್ದಾರೆ.

ದೇಶ ಒಗ್ಗೂಡಿಸುವಲ್ಲಿ ಹಿಂದಿ ಭಾಷೆಯ ಪಾತ್ರ ಬಹಳಷ್ಟಿದೆ ಹಾಗಾಗಿ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ, ಬ್ಯಾಂಕ್‌ಗಳಲ್ಲಿ ಹಿಂದಿ ಭಾಷೆಯ ಬಳಕೆಯನ್ನು ಹೆಚ್ಚು ಮಾಡಬೇಕು ಎಂದಿದ್ದಾರೆ. ಜೊತೆಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಿಂದಿ ಭಾಷೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂದಿದ್ದಾರೆ.

ಅಮಿತ್ ಷಾ ಅವರ ಈ ಹೇಳಿಕೆಗೆ ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಹಿಂದಿಯನ್ನು ನಮ್ಮ ಮೇಲೆ ಬಲವಂತವಾಗಿ ಹೇರುವ ಪ್ರಯತ್ನ ನಡೆಸಿದರೆ ಅತ್ಯುಗ್ರ ಹೋರಾಟ ಮಾಡಬೇಕಾಗಬಹುದು ಎಂದು ಕನ್ನಡ, ತಮಿಳು, ಮಲಯಾಳಂ ಭಾಷಾ ಪ್ರೇಮಿಗಳು ಸವಾಲು ಎಸೆದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top