fbpx
ಸಮಾಚಾರ

ವಿಶೇಷ ರೀತಿಯಲ್ಲಿ ವಿಷ್ಣು ‘ದಾದಾ’ ಬಗ್ಗೆ ಅಭಿಮಾನ ಮೆರೆದ ನಟ ಸಂಚಾರಿ ವಿಜಯ್‌!

ವಿಜಯ್‌ ಅವರು ವಿಷ್ಣುವರ್ಧನ್‌ ಅವರನ್ನು ವಿಶೇಷ ರೀತಿಯಲ್ಲಿ ನೆನಪು ಮಾಡಿಕೊಂಡಿದ್ದಾರೆ. ‘ಸಾಹಸ ಸಿಂಹ’ನ ಜನ್ಮದಿನ ಪ್ರಯುಕ್ತ ಸಂಚಾರಿ ವಿಜಯ್‌ ಅಭಿಮಾನ ಮೆರೆದಿದ್ದಾರೆ.

ವಿಷ್ಣುವರ್ಧನ್​ ಅಭಿನಯದ ‘ದಾದಾ’ ಸಿನಿಮಾವನ್ನ ಬಹಳ ಇಷ್ಪಪಟ್ಟು, ‘ದಾದಾ’ ಪೋಸ್ಟರ್​ ಬರೆಯೋದನ್ನ ರೂಢಿಸಿಕೊಂಡಿದ್ದರಂತೆ ನಟ ವಿಜಯ್​. ಈಗ ಮತ್ತೆ ವಿಷ್ಣು ಹುಟ್ಟುಹಬ್ಬಕ್ಕೆ ‘ದಾದಾ’ ಪೋಸ್ಟರ್​ ತಿದ್ದಿ ಬರೆದಿದ್ದಾರೆ. ವಿಷ್ಣು ಜನ್ಮದಿನ ಪ್ರಯುಕ್ತ ಸಂಚಾರಿ ವಿಜಯ್‌ ಅವರ ಅಭಿಮಾನದ ಮಾತುಗಳು ಇಲ್ಲಿವೆ…

 

 

“ಚಿಕ್ಕ ವಯಸ್ಸಿನಲ್ಲಿ “ದಾದಾ” ಪೋಸ್ಟರನ್ನು ಮೊದಲು ಪೆನ್ನಿನಲ್ಲಿ ತಿದ್ದಿ ಹೇಗೆ ಬರೆಯುತ್ತಿದ್ದೆನೋ ಹಾಗೆಯೇ ಮತ್ತೆ ಬರೆಯುವ ಪ್ರಯತ್ನ ಮಾಡಿದ್ದೇನೆ. ವಿಷ್ಣು ಸರ್ ಬದುಕಿದ್ದಾಗ ಒಮ್ಮೆಯೂ ಅವರನ್ನೂ ಹತ್ತಿರದಿಂದ ನೋಡಿ ಮಾತನಾಡಿಸುವ ಅವಕಾಶ ಒದಗಿಬರಲಿಲ್ಲ ಆದರೆ ಅವರು ಕಾಲವಾದ ಮಾರನೆಯ ದಿನ ಕೊನೆಯ ಅವಕಾಶ ಸಿಕ್ಕಿದ್ದು ‘national college ground’ನಲ್ಲಿ, ಅಲ್ಲಿಯೂ ಆ ಜನ ಜಂಗುಳಿಯಲ್ಲಿ ಪೊಲೀಸರಿಂದ ಲಾಠಿ ಏಟು ತಿಂದು ಹರಿದ ಚಪ್ಪಲಿ ಎಳೆದಾಡಿಕೊಂಡು ಸಿಕ್ಕ ಅವಕಾಶದಲ್ಲೇ ಅಂತಿಮ ದರ್ಶನ ಮಾಡಿ ಸಮಾಧಾನ ಮಾಡಿಕೊಂಡಿದ್ದಾಯ್ತು. ಭೇಟಿಯಾಗಲು ಒಮ್ಮೆಯೂ ಸಾಧ್ಯವಾಗಲಿಲ್ಲ ಆದರೆ ಅವರ ಆಚಾರ ವಿಚಾರಗಳ ಬಗ್ಗೆ ಅವರನ್ನು ಹತ್ತಿರದಿಂದ ಬಲ್ಲವರಿಂದ ಕೇಳಿ ತಿಳಿದದ್ದೇ ಹೆಚ್ಚು.”

“ಚಿಕ್ಕಂದಿನಲ್ಲಿ “ದಾದಾ” ಚಿತ್ರ ತೆರೆಕಂಡಾಗ ನೋಡಿ ಹೊರಬಂದು ಅದೇ ಭಂಗಿಯಲ್ಲಿ ನಡೆಯೋದು, ಮಾತಾಡುವುದು, ಕೈ ತಿರುಗಿಸಿ ಅನುಕರಣೆ ಮಾಡೋ ಹುಚ್ಚು ಹತ್ತಿಸ್ಕೊಂಡಿದ್ವಿ . ಕನ್ನಡ ಸಿನೆಮಾಗಳ ಶೀರ್ಷಿಕೆಯನ್ನು ಮುದ್ದಾಗಿ ಬರೆಯೋ ಅಭ್ಯಾಸ ಬೆಳೆಸಿಕೊಂಡು ಬಂದಿದ್ದ ನಾನು ಈ ಚಿತ್ರದ ಶೀರ್ಷಿಕೆಯನ್ನು ಪೋಸ್ಟರ್ ನಲ್ಲಿ ಹೇಗಿತ್ತೋ ಹಾಗೆ ಬರೆಯುವುದನ್ನು ರೂಢಿಸಿಕೊಂಡಿದ್ದೆ, ಯಾರೇ ಬಂದು ಕೇಳಿದರೂ ಸಹ ಇಲ್ಲಾ ಅನ್ನದೆ ಬರೆದು ಕೊಡುತ್ತಿದ್ದೆ.”

“ಹೀಗೆ ತಿಳುವಳಿಕೆಯಿಲ್ಲದ ವಯಸ್ಸಲ್ಲೇ ಗೊತ್ತಿಲ್ಲದೇ ಅವರ ಚಿತ್ರದ ಶೀರ್ಷಿಕೆಗಳನ್ನು ಬರೆಯುತ್ತ ಸಿನಿಮಾಗಳನ್ನು ನೋಡುತ್ತಾ ಸಾವಿರಾರು ಜನರಲ್ಲಿ ನಾನೂ ಒಬ್ಬ ವಿಷ್ಣು ಸರ್ ಅಭಿಮಾನಿಯಾದೆ. ಮುಂದೆ ಅವರ ನಡೆ-ನುಡಿ ಕಷ್ಟದಲ್ಲಿರುವವರನ್ನು ಕಂಡು ಮರುಗುವ ಮನಸ್ಸು, ಹೊಸಬರನ್ನು ಪ್ರೋತ್ಸಾಹಿಸಿ ಬೆನ್ನು ತಟ್ಟುವ ಮಾನವೀಯ ಗುಣಗಳನ್ನು ಕೇಳಿ ತುಂಬಾ ಪ್ರಭಾವಿತನಾಗಿದ್ದೆ.”

“ಅವರು ಹೇಳಿದ ಮಾತೊಂದು ‘ಯಾರಿಗಾದರೂ ಸಹಾಯ ಮಾಡಿದರೆ ಅದನ್ನು ಅಲ್ಲಿಗೇ ಮರೆತುಬಿಡು, ಸಹಾಯ ಮಾಡಿದೆನೆಂಬ ಸಣ್ಣ ಅಹಂ ಕೂಡ ನಿನ್ನೊಳಗೆ ಇರದಂತೆ’. ಈ ಮಾತು ನನ್ನಂತಹ ಹಲವಾರು ಜನರ ಮೇಲೆ ಪ್ರಭಾವ ಬೀರಿದೆ. ಇಂದು ನಮ್ಮೊಂದಿಗೆ ನೀವಿದ್ದಿದ್ದರೆ ಇಂದಿನ ಯುವ ಪೀಳಿಗೆಗೆ ಮತ್ತಷ್ಟು ಸ್ಪೂರ್ತಿಯಾಗುತ್ತಿದ್ರಿ.”

ಸ್ನೇಹಜೀವಿ ಕರುನಾಡ ಯಜಮಾನರೇ, ನಿಮಗೆ ಮತ್ತೊಮ್ಮೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು -ಸಂಚಾರಿ ವಿಜಯ್, ನಟ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top