fbpx
ಸಮಾಚಾರ

“ನನಗೆ ಅಮ್ಮನಾಗಲು ಇಷ್ಟವಿಲ್ಲ, ಮಾತೃತ್ವವನ್ನು ತ್ಯಜಿಸುತ್ತಿದ್ದೇನೆಂದು ಪ್ರತಿಜ್ಞೆ ಮಾಡುತ್ತೇನೆ: ನಟಿ ಪಾರುಲ್ ಯಾದವ್ ಹೀಗೆ ಹೇಳಿದ್ಯಾಕೆ?

ಉತ್ತರ ಪ್ರದೇಶದ ಹತ್ರಾಸ್ ನಲ್ಲಿ 19 ವರ್ಷದ ದಲಿತ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ನಟಿ ಪಾರುಲ್ ಯಾದವ್ ಅವರು, ತಾನು ತಾಯಿಯಾಗುವುದಿಲ್ಲ ಎಂದು ಹೇಳಿದ್ದಾರೆ.

ಹೌದು, ಇತ್ತೀಚೆಗೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಉತ್ತರಪ್ರದೇಶ ಹತ್ರಾಸ್ ಗ್ರಾಮದ ಯುವತಿಯ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಅಲ್ಲದೇ ಪೋಷಕರಿಗೂ ಮಗಳ ಮುಖವನ್ನು ತೋರಿಸಿದ ರಾತ್ರೋರಾತ್ರಿ ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಈ ಬಗ್ಗೆ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಘಟನೆಯ ಕುರಿತು ಪಾರುಲ್ ಆಕ್ರೋಶ ಹೊರಹಾಕಿದ್ದಾರೆ.

 

 

ಈ ಬಗ್ಗೆ ಟ್ವೀಟ್ ಮಾಡಿರುವ ನಟಿ, “ತಾಯಿಯಾಗುವುದು ಹೆಣ್ತನದ ಸಾರಾಂಶ. ಆದರೆ ಇಂದು ನಾನು ಅಮ್ಮನಾಗಲು ಬಯಸುವುದಿಲ್ಲ. ಒಬ್ಬ ಹೆಣ್ಣಾಗಿ ಈ ರೀತಿ ಹೇಳುವುದು ತುಂಬಾ ಕಷ್ಟವಾಗಿದೆ. ಆದರೆ ನನ್ನ ಮಾತೃತ್ವವನ್ನು ತ್ಯಜಿಸುತ್ತಿದ್ದೇನೆ ಎಂದು ನಾನು ಪ್ರತಿಜ್ಞೆ ಮಾಡುತ್ತೇನೆ” ಎಂದಿದ್ದಾರೆ.

ಅಲ್ಲದೇ, “ಒಂದು ವೇಳೆ ನನ್ನ ಮಗು ಹೆಣ್ಣಾದರೆ ಏನು ಮಾಡುವುದು? ಈ ದೇಶ ಎಲ್ಲ ಕಡೆಯಲ್ಲೂ ಹೆಣ್ಣಿಗೆ ಕೆಟ್ಟದಾಗಿಯೇ ಇದೆ” ಎಂದು ಟ್ವಿಟ್ಟರಿನಲ್ಲಿ ಬರೆದುಕೊಂಡಿದ್ದಾರೆ.

“ಹತ್ರಾಸ್‍ನಲ್ಲಿ ನಡೆದ ಭಯಾನಕ ಘಟನೆಯೇ ಇದಕ್ಕೆ ಇತ್ತೀಚಿನ ಉದಾಹರಣೆಯಾಗಿದೆ. ಕಾರಣಗಳು ಬೇರೆಯಾಗಿರಬಹುದು. ಆದರೆ ಯಾವಾಗಲೂ ಮಹಿಳೆಯರಿಗೆ ತೊಂದರೆ ಆಗುತ್ತದೆ. ಅದರಿಂದ ಆಕೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ನಟಿ ಪಾರುಲ್ ಯಾದವ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top