fbpx
ಸಮಾಚಾರ

ಜ್ಯೂನಿಯರ್ ರಾಜಕುಮಾರ್​ ಎಂದೇ ಖ್ಯಾತರಾಗಿದ್ದ ಹಿರಿಯ ಕಲಾವಿದ ನಿಧನ!

ಕನ್ನಡದ ಹಿರಿಯ ರಂಗಕರ್ಮಿ ಹಾಗೂ ಜ್ಯೂನಿಯರ್ ರಾಜ್‌ ಕುಮಾರ್ ಎಂದೇ ಖ್ಯಾತಿ ಗಳಿಸಿಕೊಂಡಿದ್ದ ಕೊಡಗನೂರು ಜಯಕುಮಾರ್ ಇಂದು ನಿಧನರಾಗಿದ್ದಾರೆ. 70 ವರ್ಷದ ಜಯಕುಮಾರ್ ದಾವಣಗೆರೆಯ ಬಾಪೂಜಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ಕಿರುತೆರೆಯಲ್ಲಿ ಪಾಪ ಪಾಂಡು ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ವೃತ್ತಿ ರಂಗಭೂಮಿಯಲ್ಲಿ ಅನೇಕ ಪೌರಾಣಿಕ ಪಾತ್ರಗಳಿಗೆ ಜೀವ ತುಂಬಿದ್ದರು. ಹಿರಿಯ ಕಲಾವಿದ ಜಯಕುಮಾರ್ ಅವರ ಹುಟ್ಟೂರು ದಾವಣಗೆರೆ ತಾಲೂಕಿನ ಕೊಡಗನೂರು. ಹತ್ತನೇ ವಯಸ್ಸಿನಲ್ಲೇ ಬಣ್ಣದ ನಂಟು. ಅಭಿನಯಿಸಿದ ರಂಗನಾಟಕಗಳ ಲೆಕ್ಕ ಇಟ್ಟವರಲ್ಲ.

ತಾಯಿಗೊಬ್ಬ ಕರ್ಣ, ಸತ್ಯನಾರಾಯಣ ಪೂಜಾಫಲ, ಸಾಂಗ್ಲಿಯಾನ-3, ಜನುಮದ ಜೋಡಿ, ಕಿಟ್ಟಿ, ಜಾಕಿ, ರಾಜ, ತಾಯಿ, ಶಬರಿ, ಮರಣದಂಡನೆ ಸೇರಿದಂತೆ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸಂಕ್ರಾಂತಿ, ಮಹಾಮಾಯೆ, ಅಪ್ಪ, ಕೆಳದಿ ಚನ್ನಮ್ಮ, ಭಾಗೀರಥಿ, ಶ್ರೀ ರಾಘವೇಂದ್ರ ವೈಭವ, ಪಾ.ಪ.ಪಾಂಡು, ಶ್ರೀ ಕಲಾಭೈರವ ಮಹಾತ್ಮೆ ಸೇರಿದಂತೆ 20ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸುವರ್ಣ ಅಕಾಡೆಮಿ ಪ್ರಶಸ್ತಿ, ವರದಪ್ಪ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ.

ಗುಬ್ಬಿ ಕಂಪನಿ, ಕೆಬಿಆರ್‌ ಕಂಪನಿ, ಕುಮಾರೇಶ್ವರ ನಾಟಕ ಸಂಘ, ಶ್ರೀ ಶೈಲ ಮಲ್ಲಿಕಾರ್ಜುನ ನಾಟ್ಯ ಸಂಘ, ಕರ್ನಾಟಕ ಕಲಾ ವೈಭವ ಸಂಘ, ಸಂಗಮೇಶ್ವರ ನಾಟಕ ಸಂಘಗಳ ಹಲವಾರು ನಾಟಕಗಳಲ್ಲಿ ಜಯಕುಮಾರ್ ಅಭಿನಯಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top