fbpx
ಸಮಾಚಾರ

ಗೊಮ್ಮಟೇಶನಿಗೆ ಅಪಮಾನ ಮಾಡಿದ ವಿಶ್ವೇಶ್ವರ ಭಟ್ ವಿರುದ್ಧ ಜೈನ ಸ್ವಾಮೀಜಿ ಗುಡುಗು

ಮಾಸ್ಕ್ ಧರಿಸಲು ಹಿಂದೇಟು ಹಾಕುವ ಜನರನ್ನು ಟೀಕಿಸುವ ಭರದಲ್ಲಿ ಜೈನರ ಪವಿತ್ರ ದೇವರಾದ ಗೊಮ್ಮಟೇಶ್ವರನಿಗೆ ಅಪಮಾನ ಮಾಡಿದ ವಿಚಾರವಾಗಿ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ವಿರುದ್ಧ ಮೂಡುಬಿದಿರೆಯ ಜೈನ ಸ್ವಾಮಿಗಳಾದ ಜಗದ್ಗುರು ಡಾ.ಸ್ವಸ್ಥಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಸಮಾಧಾನ ಹೊರಹಾಕಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸ್ವಾಮೀಜಿ, “ಯಾರೇ ಆಗಲಿ ಒಂದು ಧರ್ಮದ ದೇವರನ್ನು ಅವಹೇಳನ ಮಾಡುವುದು ಅವರ ಕೀಳು ಮನಸ್ಥಿತಿಯನ್ನು ತೋರಿಸುತ್ತದೆ. ಲಕ್ಷಾಂತರ ಮಂದಿ ಪೂಜಿಸುವ ದೇವರನ್ನು ಹೀಯಾಳಿಸಿ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ಯಾರೂ ಮಾಡಬಾರದು. ಸಮಾಜದಲ್ಲಿ ಉತ್ತಮ ಸ್ಥಾನಮಾನ ಗಳಿಸಿರುವ ವಿಶ್ವೇಶ್ವರ ಭಟ್ ಅವ್ರು ಗೊಮ್ಮಟೇಶ್ವರನ ಅಪಹಾಸ್ಯ ಮಾಡಿರುವುದು ಅಕ್ಷಮ್ಯ ಅಪರಾಧ. ಇದು ಒಂದು ಧರ್ಮದ ಸಿದ್ಧಾಂತಕ್ಕೆ ಮಾಡಿದ ಅಪಮಾನ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಏನಿದು ವಿವಾದ:
ವಿಶ್ವೇಶ್ವರ ಭಟ್ ಅವರು ‘ಮಾಸ್ಕ್’ ಕುರಿತು ಜನರನ್ನು ಅಪಹಾಸ್ಯ ಮಾಡುವ ಭರದಲ್ಲಿ ಕರ್ನಾಟಕದ ಹೆಮ್ಮೆಯ ಕಿರೀಟವಾದ ಶ್ರಾವಣ ಬೆಳಗೊಳದ ಗೊಮ್ಮಟೇಶ್ವರನಿಗೆ ಅಪಹಾಸ್ಯ ಮಾಡಿ ಲೇವಡಿ ಮಾಡಿದ್ದರು.

ತಮ್ಮ ವಿಶ್ವವಾಣಿ ಪತ್ರಿಕೆಯಲ್ಲಿ ವಿಶ್ವೇಶ್ವರ್ ಭಟ್ ಅವರು ಅಂಕಣವೊಂದನ್ನು ಬರೆದಿದ್ದರು. ಈಗಿನ ಕೊರೋನಾ ಸಮಯದಲ್ಲಿ ಬಹು ಮುಖ್ಯ ಎನಿಸಿರುವ ಮಾಸ್ಕ್ ವಿಚಾರವಾಗಿ ಜನರು ತೋರುತ್ತಿರುವ ಅಸಡ್ಡೆ ಮನೋಭಾವದ ಬಗೆಗಿನ ಅಂಕಣ ಇದಾಗಿತ್ತು. “ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ, ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸಿದರೂ ಜನರು ಮಾಸ್ಕ್ ಹಾಕಿಕೊಳ್ಳುವಲ್ಲಿ ನಿರ್ಲಕ್ಷ ತೋರುತ್ತಿದ್ದಾರೆ. ಈ ಜನರಿಗೆ ಮಾಸ್ಕ್ ಹಾಕಿಸುವುದು ಒಂದು ರೀತಿ ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿಸಿದಂತೆ” ಎಂಬ ಅರ್ಥದಲ್ಲಿ ಅಂಕಣದಲ್ಲಿ ಭಟ್ ಬರೆದಿದ್ದರು.

 

 

ಗೊಮ್ಮಟೇಶ್ವರನ ಬಗ್ಗೆ ಕೀಳು ಮನೋಭಾವದ ಬರಹ ಬರೆದಿರುವುದು ಈಗ ವಿಶ್ವೇಶ್ವರ ಭಟ್ ಅವರನ್ನು ವಿವಾದಕ್ಕೆ ಸಿಲುಕಿಸಿದೆ. ಮಾಸ್ಕ್ ವಿಚಾರದಲ್ಲಿ ಜನರನ್ನು ಲೇವಡಿ ಮಾಡುವ ಭರದಲ್ಲಿ ಪೂಜ್ಯನೀಯ ಗೊಮ್ಮಟನಿಗೆ ಅವಮಾನ ಮಾಡಿರುವುದಕ್ಕೆ ಸದ್ಯ ಜೈನ ಧರ್ಮೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹಿಂದೂ ಮತ್ತು ಜೈನರ ಎರಡೂ ಧರ್ಮದ ಸಮಾಗಮ ಸ್ಥಳ ಎಂದು ಪ್ರಖ್ಯಾತಿ ಪಡೆದಿರುವ ಸರ್ವ ಸಂಘಗಳ ಪರಿತ್ಯಾಗವನ್ನು ಮಾಡಿರುವ ಗೊಮ್ಮಟೇಶ್ವರನ ಬಗ್ಗೆ ಅಪಹಾಸ್ಯ ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ‘ವಿಶ್ವೇಶ್ವರ ಭಟ್’ ವಿರುದ್ಧ ಭಾರಿ ವಿರೋಧ ವ್ಯಕ್ತವಾಗುತ್ತಿದ್ದು ಕ್ಷಮೆ ಕೇಳುವಂತೆ ಆಗ್ರಹಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top