fbpx
ಸಮಾಚಾರ

ಗೊಮ್ಮಟೇಶ್ವರನ ಅವಹೇಳನ: ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಮೂಲಕ ಕನ್ನಡಿಗರಿಗೆ ಮತ್ತು ಜೈನರಿಗೆ ಅವಮಾನ ಮಾಡಿದ ವಿಶ್ವೇಶ್ವರ ಭಟ್

ಕೊರೋನಾ ಸಮಯದಲ್ಲಿ ಮಾಸ್ಕ್ ಧರಿಸಲು ನಿರ್ಲಕ್ಷ ತೋರುವ ಜನರನ್ನು ಟೀಕಿಸುವ ಭರದಲ್ಲಿ ಕರ್ನಾಟಕದ ಹೆಮ್ಮೆಯ ಹಾಗೂ ಜೈನರ ಪವಿತ್ರ ದೇವರಾದ ಗೊಮ್ಮಟೇಶ್ವರನಿಗೆ ಅಪಮಾನ ಮಾಡಿದ ವಿಚಾರವಾಗಿ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಮೂಲಕ ಮೊಂಡುತನ ಪ್ರದರ್ಶಿಸಿದ್ದಾರೆ.

ಈ ಕುರಿತು ಇಂದಿನ ಸಂಚಿಕೆಯ ಪತ್ರಿಕೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಭಟ್, “ಗೊಮ್ಮಟೇಶನಿಗೆ ಚಡ್ಡಿ ಹಾಕಿದಂತೆ ಎಂಬ ಪದಪ್ರಯೋಗ ಸಾಂದರ್ಭಿಕವಾಗಿ ಪ್ರಸ್ತಾಪಿಸಲಾಗಿದೆ” ಎಂದು ಹೇಳಿದ್ದಾರೆ. ಅಲ್ಲದೇ “ಈ ಪದಪ್ರಯೋಗ ಮಾಡಿದ್ದರ ಹಿಂದೆ ಯಾವುದೇ ದುರುದ್ದೇಶವಿಲ್ಲ” ಎಂದೂ ಸಹ ತಿಳಿಸಿದ್ದಾರೆ.

ಈ ವಿಚಾರದಲ್ಲಿ ಕ್ಷಮಾಪಣೆ ನಿರೀಕ್ಷೆಯಲ್ಲಿದ್ದ ಜೈನ ಸಮುದಾಯದವರಿಗೆ ವಿಶ್ವೇಶ್ವರ ಭಟ್ ಅವರ ಈ ಸಮರ್ಥನೆ ಮತ್ತೊಮ್ಮೆ ಅಸಮಾಧಾನ ತರಿಸಿದೆ. “ಗೊಮ್ಮಟೇಶ್ವರನ ಬಗ್ಗೆ ಆ ಪದ ಪ್ರಯೋಗ ಮಾಡಿದ್ದು ತಪ್ಪು ಎಂದು ಸಂಪಾದಕರು ಒಪ್ಪಿಕೊಂಡಿಲ್ಲ, ಕೇವಲ ಸಮರ್ಥನೆ ಮಾಡಿಕೊಂಡಿದ್ದಾರೆ.. ಈ ಮೂಲಕ ಒಂದು ವರ್ಗದ ಜನರ ಭಾವನೆಗಳಿಗೆ ತಾವು ಯಾವುದೇ ಬೆಲೆ ನೀಡುವುದಿಲ್ಲ ಎಂದು ಭಟ್ ಹೇಳಲು ಹೊರಟಿದ್ದಾರೆ” ಎಂಬ ಅಭಿಪ್ರಾಯವನ್ನು ಜೈನ ಸಮುದಾಯದವರು ವ್ಯಕ್ತಪಡಿಸಿದ್ದಾರೆ.

ಏನಿದು ವಿವಾದ:
ವಿಶ್ವೇಶ್ವರ ಭಟ್ ಅವರು ‘ಮಾಸ್ಕ್’ ಕುರಿತು ಜನರನ್ನು ಅಪಹಾಸ್ಯ ಮಾಡುವ ಭರದಲ್ಲಿ ಕರ್ನಾಟಕದ ಹೆಮ್ಮೆಯ ಕಿರೀಟವಾದ ಶ್ರಾವಣ ಬೆಳಗೊಳದ ಗೊಮ್ಮಟೇಶ್ವರನಿಗೆ ಅಪಹಾಸ್ಯ ಮಾಡಿ ಲೇವಡಿ ಮಾಡಿದ್ದರು.

ತಮ್ಮ ವಿಶ್ವವಾಣಿ ಪತ್ರಿಕೆಯಲ್ಲಿ ವಿಶ್ವೇಶ್ವರ್ ಭಟ್ ಅವರು ಅಂಕಣವೊಂದನ್ನು ಬರೆದಿದ್ದರು. ಈಗಿನ ಕೊರೋನಾ ಸಮಯದಲ್ಲಿ ಬಹು ಮುಖ್ಯ ಎನಿಸಿರುವ ಮಾಸ್ಕ್ ವಿಚಾರವಾಗಿ ಜನರು ತೋರುತ್ತಿರುವ ಅಸಡ್ಡೆ ಮನೋಭಾವದ ಬಗೆಗಿನ ಅಂಕಣ ಇದಾಗಿತ್ತು. “ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ, ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸಿದರೂ ಜನರು ಮಾಸ್ಕ್ ಹಾಕಿಕೊಳ್ಳುವಲ್ಲಿ ನಿರ್ಲಕ್ಷ ತೋರುತ್ತಿದ್ದಾರೆ. ಈ ಜನರಿಗೆ ಮಾಸ್ಕ್ ಹಾಕಿಸುವುದು ಒಂದು ರೀತಿ ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿಸಿದಂತೆ” ಎಂಬ ಅರ್ಥದಲ್ಲಿ ಅಂಕಣದಲ್ಲಿ ಭಟ್ ಬರೆದಿದ್ದರು.

 

 

ಗೊಮ್ಮಟೇಶ್ವರನ ಬಗ್ಗೆ ಕೀಳು ಮನೋಭಾವದ ಬರಹ ಬರೆದಿರುವುದು ಈಗ ವಿಶ್ವೇಶ್ವರ ಭಟ್ ಅವರನ್ನು ವಿವಾದಕ್ಕೆ ಸಿಲುಕಿಸಿದೆ. ಮಾಸ್ಕ್ ವಿಚಾರದಲ್ಲಿ ಜನರನ್ನು ಲೇವಡಿ ಮಾಡುವ ಭರದಲ್ಲಿ ಪೂಜ್ಯನೀಯ ಗೊಮ್ಮಟನಿಗೆ ಅವಮಾನ ಮಾಡಿರುವುದಕ್ಕೆ ಸದ್ಯ ಜೈನ ಧರ್ಮೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

 

ಹಿಂದೂ ಮತ್ತು ಜೈನರ ಎರಡೂ ಧರ್ಮದ ಸಮಾಗಮ ಸ್ಥಳ ಎಂದು ಪ್ರಖ್ಯಾತಿ ಪಡೆದಿರುವ ಸರ್ವ ಸಂಘಗಳ ಪರಿತ್ಯಾಗವನ್ನು ಮಾಡಿರುವ ಗೊಮ್ಮಟೇಶ್ವರನ ಬಗ್ಗೆ ಅಪಹಾಸ್ಯ ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ‘ವಿಶ್ವೇಶ್ವರ ಭಟ್’ ವಿರುದ್ಧ ಭಾರಿ ವಿರೋಧ ವ್ಯಕ್ತವಾಗುತ್ತಿದ್ದು ಕ್ಷಮೆ ಕೇಳುವಂತೆ ಆಗ್ರಹಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top