fbpx
ಸಮಾಚಾರ

ಜಾತಿ ರಾಜಕಾರಣ: ಡಿಕೆ ಶಿವಕುಮಾರ್‌ ವಿರುದ್ಧ ಕುಮಾರಸ್ವಾಮಿ ವಾಗ್ದಾ​ಳಿ

ಆರ್‌ಆರ್‌ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಈಗ ಹಳೆ ‘ಜೋಡೆತ್ತು’ಗಳ ಕದನಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ವಿರುದ್ಧ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಈಗ ಆಕ್ರೋಶ ವ್ಯಕ್ತಪಡಿಸಿದ್ದು, ಇವರೆಲ್ಲ ಜಾತಿ ಗುತ್ತಿಗೆ ಪಡೆದಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಒಕ್ಕಲಿಗ ನಾಯಕತ್ವ ಪ್ರಭಾವ ಬೀರಿ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಪ್ರಯತ್ನಿಸುತ್ತಿರುವುದಕ್ಕೆ ನಗರದಲ್ಲಿಂದು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಕ್ಷೇತ್ರದಲ್ಲಿ ಶಿವಕುಮಾರ್ ಜಾತಿರಾಜಕಾರಣ ಆರಂಭಿಸಿದ್ದಾರೆ. ಹಿಂದೆ ಜಾತಿ ಮೇಲೆ ದಬ್ಬಾಳಿಕೆಯಾದಾಗ ಏಕೆ ಕ್ರಮ ತೆಗೆದುಕೊಳ್ಳಲಿಲ್ಲ. ಈಗ ಜಾತಿಯವರೆಲ್ಲ ಒಂದಾಗಬೇಕು. ನಮ್ಮವರಿಗೆ ತೊಂದರೆ ಕೊಡುತ್ತಾರೆ ಎನ್ನುವುದೆಷ್ಟು ಸರಿ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

“ಶಿವಕುಮಾರ್‌ ಅವರು ಜಾತಿ ರಾಜಕಾರಣ ಮಾಡಲು ಹೊರಟಿದ್ದಾರೆ. ಜಾತಿ ರಾಜಕಾರಣವನ್ನು ಇವರು ಗುತ್ತಿಗೆ ಪಡೆದಿದ್ದಾರೆಯೇ? ಜಾತಿಗಳ ಮೇಲೆ ದಬ್ಬಾಳಿಕೆ ನಡೆದಾಗ ತಡೆಯುವ ಕೆಲಸ ಯಾಕೆ ಮಾಡಲಿಲ್ಲ. ಈಗ ನಮ್ಮ ಜಾತಿಯವರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ನಾವೆಲ್ಲಾ ಒಂದಾಗಬೇಕು ಎಂದು ಚರ್ಚಿಸುತ್ತಿದ್ದಾರೆ. ಜಾತಿ ರಾಜಕಾರಣ ಮಾಡಲು ಯಾವ ಕಾಂಗ್ರೆಸ್‌ ನಾಯಕರು ಅವರಿಗೆ ಹೇಳಿದ್ದಾರೆ ಎನ್ನುವುದು ಗೊತ್ತಿದೆ” ಎಂದು ಕುಮಾರಸ್ವಾಮಿ ಗರಂ ಆಗಿದ್ದಾರೆ

ಇಂತಹ ವಿಚಾರಗಳ ಬಗ್ಗೆ ಮಾತನಾಡುವ ವೇಳೆ ಗಾಜಿನ ಮನೆಯಲ್ಲಿ ಕುಳಿತವರು, ಹೊಡೆದವರು ಯಾರು ಎನ್ನುವುದನ್ನು ತಿಳಿದುಕೊಂಡು ಮಾತನಾಡಬೇಕು. ಕಾರ್ಯಕರ್ತರನ್ನು ಹೆದರಿಸುವ ಸಂಸ್ಕೃತಿ ಆರಂಭವಾಗಿದ್ದು ಯಾವಾಗ? ಚುನಾವಣೆ ವೇಳೆ ನೆನಪಿಗೆ ಬಂದಿದೆಯೇ? ಜನರ ದಾರಿ ತಪ್ಪಿಸಲು ಹೀಗೆ ಹೇಳುತ್ತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top