fbpx
ಸಮಾಚಾರ

4 ಕೆಜಿ ಚಿನ್ನ, 30 ವಾಹನ, 78 ಜಮೀನು, 89 ಕೋಟಿ ರೂ. ಆಸ್ತಿ: ‘ಕೋಟಿ’ಕುಳ ಮುನಿರತ್ನ ಬಳಿಯಿರುವ ಒಟ್ಟು ಅಸ್ತಿ ಎಷ್ಟು ಗೊತ್ತಾ?

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಿರುವ ಮುನಿರತ್ನ ಅವರು 89.13 ಕೋಟಿ ರು.ಗಿಂತ ಹೆಚ್ಚು ಆಸ್ತಿ ಹೊಂದಿದ್ದು, ದ್ವಿಚಕ್ರ ವಾಹನ, ಕಾರು ಸೇರಿದಂತೆ 30 ವಾಹನಗಳ ಮಾಲಿಕರಾಗಿದ್ದಾರೆ. ಚುನಾವಣಾಧಿಕಾರಿಗೆ ಬುಧವಾರ ಸಲ್ಲಿಕೆ ಮಾಡಿರುವ ಆಸ್ತಿ ವಿವರದಲ್ಲಿ ಮುನಿರತ್ನ ಅವರು ಈ ಬಗ್ಗೆ ಉಲ್ಲೇಖ ಮಾಡಿದ್ದಾರೆ.

ಚರಾಸ್ತಿ, ಸ್ಥಿರಾಸ್ತಿ ಸೇರಿ ಮುನಿರತ್ನ ಕುಟುಂಬದ ಬಳಿ 89.13 ಕೋಟಿ ರೂಪಾಯಿ ಆಸ್ತಿ ಇದೆ. ಅದೇ ರೀತಿ ಅವರಿಗೆ 42.32 ಕೋಟಿ ರೂಪಾಯಿ ಸಾಲವೂ ಇದೆ. ಜೊತೆಗೆ ತಮ್ಮ ವಿರುದ್ಧ ಐದು ಕ್ರಿಮಿನಲ್‌ ಕೇಸ್‌ಗಳು ದಾಖಲಾಗಿದ್ದು, ಪ್ರಕರಣ ವಿಚಾರಣೆಗೆ ಬಾಕಿ ಇದೆ ಎಂದು ಅವರು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

2018ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಈಗ ಅವರ ಆಸ್ತಿಯ ಮೌಲ್ಯ ಶೇಕಡ 103ರಷ್ಟು ಹೆಚ್ಚಳವಾಗಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಮುನಿರತ್ನ ಹಾಗೂ ಅವರ ಪತ್ನಿ ಒಟ್ಟು ₹ 43.71 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಚುನಾವಣಾಧಿಕಾರಿಗೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಘೋಷಿಸಿಕೊಂಡಿದ್ದರು. ಉಪ ಚುನಾವಣೆಗೆ ಬುಧವಾರ ನಾಮಪತ್ರ ಸಲ್ಲಿಸುವಾಗ ನೀಡಿರುವ ಪ್ರಮಾಣಪತ್ರದಲ್ಲಿ ₹ 89.13 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಬಹಿರಂಗಪಡಿಸಿದ್ದಾರೆ.

ಮುನಿರತ್ನ ಅವರ ಬಳಿ 10.66 ಲಕ್ಷ ರು.ನಗದು ಹೊಂದಿದ್ದಾರೆ.ಮುನಿರತ್ನ ಹೆಸರಲ್ಲಿ 26.11 ಕೋಟಿ ರು.ಮೌಲ್ಯದ ಚರಾಸ್ತಿ ಮತ್ತು 51.91 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಇದೆ.ಪತ್ನಿ ಬಳಿ 3. 98 ಲಕ್ಷ ರು.ನಗದು ಹೊಂದಿದ್ದು, ಅವರ ಹೆಸರಲ್ಲಿ 40.97 ಲಕ್ಷ ರು.ಮೌಲ್ಯದ ಚರಾಸ್ತಿ, 24.14 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಇದೆ.

ಮುನಿರತ್ನ ವಿರುದ್ಧ ಮೂರು ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿರುವ ಬಗ್ಗೆಯೂ ಆಸ್ತಿ ವಿವರದಲ್ಲಿ ನಮೂದಿಸಲಾಗಿದೆ.ವಿವಿಧ ಬ್ಯಾಂಕ್, ಹಣಕಾಸು ಸಂಸ್ಥೆಯ ಖಾತೆಯಲ್ಲಿ1. 08 ಕೋಟಿ ರು. ಇದ್ದು, 21. 37ಕೋಟಿ ರು. ಸಾಲ ನೀಡಿದ್ದಾರೆ.ದ್ವಿಚಕ್ರ ವಾಹನ, ಕಾರುಗಳು ಸೇರಿ 1.31 ಕೋಟಿ ರು. ಮೌಲ್ಯದ ವಾಹನಗಳು ಇವೆ.

ಮುನಿರತ್ನ ಹೆಸರಲ್ಲಿ 42.03 ಕೋಟಿ ರು. ಸಾಲ ಇದ್ದು, ಪತ್ನಿ ಹೆಸರಲ್ಲಿ 4.38 ಕೋಟಿ ರು. ಸಾಲ ಇದೆ. ಮುನಿರತ್ನ ಹೆಸರಲ್ಲಿ 3 ಕೆಜಿಗೂ ಅಧಿಕ ಚಿನ್ನ, 40.94 ಕೆಜಿ ಬೆಳ್ಳಿ ಇದ್ದು, 1.23 ಕೋಟಿ ರು. ಮೌಲ್ಯದಾಗಿದೆ. ಪತ್ನಿ ಬಳಿ 4.40 ಲಕ್ಷ ರು. ಮೌಲ್ಯದ 360 ಗ್ರಾಂ ಚಿನ್ನ ಇದೆ ಎಂದು ಆಸ್ತಿ ವಿವರದಲ್ಲಿ ತಿಳಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top