fbpx
ಸಮಾಚಾರ

”ನಿಮ್ಮ ತಾಳಕ್ಕೆ ಕುಣಿಯಲು ಜೆಡಿಎಸ್ ಗುಲಾಮಿ ಸಂಸ್ಕೃತಿಯ ಪಕ್ಷವಲ್ಲ” HDK ಗುಡುಗು

ಶನಿವಾರ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಿಡಿದಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇಂದು ಮತ್ತೊಮ್ಮೆ ಟ್ವೀಟ್ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಸಾಲು ಸಾಲು ಟ್ವೀಟ್ ಮಾಡಿರೋ ಕುಮಾರಸ್ವಾಮಿ ಅವರು ಮತ್ತೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

ಸಭಾಪತಿ ಅವಿಶ್ವಾಸ ನಿರ್ಣಯದ ವೇಳೆ ಬೆಂಬಲ ನೀಡುವಂತೆ ಯಾವ ಕಾಂಗ್ರೆಸ್ ನಾಯಕರೂ ನಮ್ಮಲ್ಲಿ ಕೇಳಿಕೊಂಡಿಲ್ಲ. ಕನಿಷ್ಠ ಸೌಜನ್ಯವೂ ಇಲ್ಲದ ಕಾಂಗ್ರೆಸ್ ನಾಯಕರಿಂದ ನಾವು ಜಾತ್ಯತೀತತೆಯ ಪಾಠ ಹೇಳಿಸಿಕೊಳ್ಳಬೇಕೆ ಎಂದು ಮಾಜಿ ಮುಖ್ಯಮಂತ್ರಿ ಪ್ರಶ್ನಿಸಿದ್ದಾರೆ.

“ಸಭಾಪತಿ ಅವಿಶ್ವಾಸ ನಿರ್ಣಯದ ವೇಳೆ ಬೆಂಬಲ ನೀಡುವಂತೆ ಕಾಂಗ್ರೆಸ್ನ ಯಾವ ನಾಯಕನೂ ಸೌಜನ್ಯಕ್ಕೂ ಜೆಡಿಎಸ್ ಬಳಿ ಚರ್ಚಿಸಿಲ್ಲ. ಹೀಗಿದ್ದೂ, ಜೆಡಿಎಸ್ನ ಜಾತ್ಯತೀತತೆಯ ಪರೀಕ್ಷೆ ನಡೆಯುತ್ತದೆ ಎಂಬ ಸಿದ್ದರಾಮಯ್ಯ ಹೇಳಿಕೆ ದುರಹಂಕಾರದ್ದು. ಬೆಂಬಲ ಕೇಳದಿದ್ದರೂ ಬೆಂಬಲಿಸಲು ನಾವೇನು ಗುಲಾಮರಲ್ಲ. ಕಾಂಗ್ರೆಸ್ಸಿನ ದೌಲತ್ತೇ ಅದರ ದುಸ್ಥಿತಿಗೆ ಕಾರಣ”

“ನಮ್ಮ ಧರ್ಮ, ದೇವರಲ್ಲಿ ಆಳ ನಂಬಿಕೆ ಹೊಂದಿಯೂ, ಎಲ್ಲರ ನಂಬಿಕೆಗಳನ್ನು ಗೌರವಿಸುವುದು, ಎಲ್ಲರನ್ನೂ ಸಮಾನವಾಗಿ ಕಾಣುವುದು” ದೇವೇಗೌಡರ ಜಾತ್ಯತೀತೆ ಎಂಬುದನ್ನು ಸಂದರ್ಭ ಸಿಕ್ಕಾಗ ಹೇಳಿದ್ದೇನೆ. ಆದರೆ ಕಾಂಗ್ರೆಸ್, ಸಿದ್ದರಾಮಯ್ಯರ ವ್ಯಾಖ್ಯಾನ ಇದಕ್ಕೆ ವಿರುದ್ಧವಾದ್ದು. ಜಾತಿಗಳನ್ನು ಒಡೆಯುವುದು, ಅನಗತ್ಯ ಓಲೈಕೆಯೇ ಅವರ ಜಾತ್ಯತೀತತೆ.”

“ಒಳ್ಳೆ ಇಮೇಜ್ ಅನ್ನು ಚುನಾವಣೆ ಮತ್ತು ಸ್ಥಾನಗಳಿಕೆ ಮೇಲೆ ಲೆಕ್ಕ ಹಾಕಿದ್ದಾರೆ ಸಿದ್ದರಾಮಯ್ಯನವರು. ಹಾಗಾದರೆ ದೇಶದ ಎಲ್ಲ ಕಡೆ ಸೋಲುತ್ತಿರುವ ಕಾಂಗ್ರೆಸ್ನ ಇಮೇಜ್ ಕತೆ ಏನು? 2018ರ ಚುನಾವಣೆಯಲ್ಲಿ 120 ರಿಂದ 80ಕ್ಕೆ ಕುಸಿದ, ಸ್ವತಃ ಚಾಮುಂಡೇಶ್ವರಿಯಲ್ಲಿ ಸೋತ ಸಿದ್ದರಾಮಯ್ಯನವರಿಗೆ ಇಮೇಜ್ ಇತ್ತೇ? ಇಮೇಜ್ ಇರುವುದು ನಮ್ಮ ಒಳ್ಳೆತನದಲ್ಲಿ”

“ಜೆಡಿಎಸ್ ಬಿಜೆಪಿಯ ಬಿ ಟೀಮ್ ಎಂಬ ಕಾಂಗ್ರೆಸ್ಸಿಗರ ಸವಕಲು ಆರೋಪಕ್ಕೆ ಈ ಹಿಂದೆಯೇ ಉತ್ತರ ನೀಡಿದ್ದೇನೆ. ಈಗಲೂ ಹೇಳುತ್ತೇನೆ. ಕಾಂಗ್ರೆಸ್ಸೇ ಜೆಡಿಎಸ್ನ ಬಿ ಟೀಂ.ಕರ್ನಾಟಕ ಪ್ರದೇಶ ಕಾಂಗ್ರೆಸ್ನ ಪಕ್ಕದಲ್ಲಿ ಆವರಣ(ಬ್ರಾಕೆಟ್) ಹಾಕಿ ಅದರಲ್ಲಿ ಜೆಡಿಎಸ್ ಎಂದು ಬರೆದಾಗಷ್ಟೇ ಅದರ ಹೆಸರು ಪೂರ್ಣವಾಗುತ್ತದೆ. ಅಷ್ಟರ ಮಟ್ಟಿಗೆ ಅಲ್ಲಿ ಜೆಡಿಎಸ್ ಇದೆ.”

“ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದು ಹೈಕಮಾಂಡ್ ಎಂದು ಹೇಳಿದ್ದಾರೆ ಸಿದ್ದರಾಮಯ್ಯ. ಅಂದರೆ ಹೈಕಮಾಂಡ್ನ ನಿರ್ಣಯ ತಮಗೆ ಇಷ್ಟವಿರಲಿಲ್ಲ ಎಂಬುವುದು ಸಿದ್ದರಾಮಯ್ಯ ಅವರ ಮಾತಿನಲ್ಲಿ ಧ್ವನಿಸುತ್ತಿರುವ ಅರ್ಥ. ಹೀಗಾಗಿಯೇ ಸಿದ್ದರಾಮಯ್ಯ ಸರ್ಕಾರ ಕೆಡವಿದರು.ಅದರ ಅಪವಾದ ಬೇರೆಯವರಿಗೆ ಬಳಿದರು”

“ಜಾತ್ಯತೀತ ನಿಲುವಿನ ಬಗ್ಗೆ! ದೇವೇಗೌಡರ ಬದ್ದತೆ ಬಗ್ಗೆ ನಾವು ನಿಮ್ಮಿಂದ ಉಪದೇಶ ಕೇಳಬೇಕಿಲ್ಲ. ದೇವೇಗೌಡರ ಬದ್ಧತೆಯನ್ನು ಬಳಸಿಕೊಂಡು ಬ್ಲ್ಯಾಕ್ಮೇಲ್ ಮಾಡಿದ ಕಾಂಗ್ರೆಸ್ ಇವತ್ತು ಜೆಡಿಎಸ್ ನ ನಿಲುವನ್ನು ಪ್ರಶ್ನಿಸುವ ಯಾವ ನೈತಿಕತೆ ಉಳಿಸಿಕೊಂಡಿದೆ.”

“ಇನ್ನು ಫೈವ್ ಸ್ಟಾರ್ ಸಂಸ್ಕೃತಿ ಬಗ್ಗೆ ರಾಗ ಎಳೆದಿದ್ದಿರಿ? ಫೈವ್ ಸ್ಟಾರ್ ಹಾಗೂ ಗುಡಿಸಲಿನಿಂದಲೂ ಅಧಿಕಾರ ನಡೆಸಿದ್ದೇನೆ.ಜನತೆಗೆ ನನ್ನಷ್ಟು ಸುಲಭವಾಗಿ ದಕ್ಕುವ ರಾಜಕಾರಣಿ ಮತ್ತೊಬ್ಬರಿಲ್ಲ ಎಂಬುವುದನ್ನು ನೆನಪಿಸಲು ಬಯಸುತ್ತೇನೆ.”

“ನಿಮ್ಮ ತಾಳಕ್ಕೆ ಕುಣಿಯಲು ಜೆಡಿಎಸ್ ಗುಲಾಮಿ ಸಂಸ್ಕೃತಿಯ ಪಕ್ಷವಲ್ಲ ರಾಜ್ಯದ ಇಂದಿನ ರಾಜಕಾರಣದ ಅಯೋಮಯ ಸ್ಥಿತಿಗೆ ನಿಮ್ಮ ದ್ವಂದ್ವ ಹಾಗೂ ಇಬ್ಬಂದಿತನದ ನಿಲುವೇ ಕಾರಣ.” ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top