fbpx
ಸಮಾಚಾರ

ವಿಷ್ಣುವರ್ಧನ್ ಆಧ್ಯಾತ್ಮಿಕ ಗುರು ಬನ್ನಂಜೆ ಗೋವಿಂದಾಚಾರ್ಯ ನಿಧನ

ನಾಡಿನ ಪ್ರಮುಖ ಹಿರಿಯ ವಿದ್ವಾಂಸ, ವಾಗ್ಮಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಬನ್ನಂಜೆ ಗೋವಿಂದಾಚಾರ್ಯ ಭಾನುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ. ಬನ್ನಂಜೆ ಗೋವಿಂದಾಚಾರ್ಯ ಅವರು, ಡಾ.ವಿಷ್ಣುವರ್ಧನ್ ಅವರ ಆಧ್ಯಾತ್ಮಿಕ ಗುರು ಆಗಿದ್ದರು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಇತ್ತೀಚೆಗೆ ತೀವ್ರ ಅನಾರೋಗ್ಯ ಕಾಡಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಉಡುಪಿ ಜಿಲ್ಲೆಯ ಅಂಬಲಪಾಡಿಯಲ್ಲಿರುವ ತಮ್ಮ ಸ್ವಗೃಹದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. 84 ವರ್ಷದ ಬನ್ನಂಜೆ ಗೋವಿಂದಾಚಾರ್ಯರು ನಾಲ್ವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಅವರ ಪುತ್ರ ಇತ್ತೀಚೆಗೆ ನಿಧನರಾಗಿದ್ದರು.

ಪಡುಮನ್ನೂರು ನಾರಾಯಣ ಆಚಾರ್ಯರ ಪುತ್ರರಾದ ಬನ್ನಂಜೆ ಗೋವಿಂದಾಚಾರ್ಯರು ಪ್ರಾಚೀನ ಜ್ಞಾನಶಾಖೆಗಳಾದ ವೇದ, ಉಪನಿಷತ್ತು, ಪುರಾಣ, ರಾಮಾಯಣ, ಮಹಾಭಾರತದ ಕುರಿತು ದೇಶ ವಿದೇಶಗಳಲ್ಲಿ ಇಲ್ಲಿಯವರೆಗೂ 26,000 ಗಂಟೆಗೂ ಹೆಚ್ಚು ಕಾಲ ಉಪನ್ಯಾಸ ಹಾಗೂ ಪ್ರವಚನ ನೀಡಿದ್ದಾರೆ.

ಕೃಷ್ಣ ಮಠ, ಅಷ್ಟಮಠಗಳು ಸೇರಿದಂತೆ ನಾಡಿನ ಪ್ರಸಿದ್ಧ ಮಠ ಹಾಗೂ ಸಂಸ್ಥಾನಗಳಿಂದ ವಿದ್ಯಾ ವಾಚಸ್ಪತಿ, ವಿದ್ಯಾ ರತ್ನಾಕರ, ಪಂಡಿತ ರತ್ನ, ಸಂಶೋಧನಾ ವಿಚಕ್ಷಣ ಪಂಡಿತಾಚಾರ್ಯ ಬಿರುದುಗಳನ್ನು ಅವರಿಗೆ ಪ್ರದಾನ ಮಾಡಲಾಗಿದೆ. ಉಡುಪಿಯ ಕೃಷ್ಣ ಮಠದ ಆಸ್ಥಾನ‌ ವಿದ್ವಾನ್ ಆಗಿಯೂ ಕಾರ್ಯ ನಿರ್ವಹಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top