fbpx
ಸಮಾಚಾರ

ನಿರ್ಮಾಪಕ ಕೆ. ಮಂಜು ವಿರುದ್ಧ ಎಫ್ಐಆರ್ ದಾಖಲು

ಹಣ ಪಡೆದು ವಂಚನೆ ಮಾಡಿರುವ ಹಿನ್ನೆಯಲ್ಲಿ ಸ್ಯಾಂಡಲ್​ವುಡ್ ಖ್ಯಾತ ನಿರ್ಮಾಪಕ ಕೆ. ಮಂಜು ವಿರುದ್ಧ ಎಫ್​ಐಆರ್​ ದಾಖಲಾಗಿದೆ. ‘ಹೆಬ್ಬಟ್ ರಾಮಕ್ಕ’ ಚಿತ್ರದ ನಿರ್ಮಾಪಕ ಎಸ್.ಎ ಪುಟ್ಟರಾಜು ಅವರಿಂದ ದೂರು ದಾಖಲಿಸಿರುವುದಾಗಿ ಮೂಲಗಳು ತಿಳಿಸಿವೆ.

ಐಪಿಸಿ ಸೆಕ್ಷನ್ 420, 506 ಮತ್ತು 34 ಸೆಕ್ಷನ್ ಅಡಿಯಲ್ಲಿ ಎಫ್ ಐಆರ್ ದಾಖಲಾಗಿದೆ. ಎಫ್ ಐಆರ್ ನಲ್ಲಿ ಮಂಜು ಅವರನ್ನು ಎರಡನೇ ಆರೋಪಿಯಾಗಿ ದಾಖಲಿಸಲಾಗಿದೆ. ರಾಜ್ಗೋಪಾಲ್ ಬಿ.ಎಂ, ರಮೇಶ್ ಬಾಬು, ವಿಜಯಲಕ್ಷ್ಮಿ ಎಂಬುವವರು ಪ್ರಮುಖ ಆರೋಪಿಗಳಾಗಿದ್ದಾರೆ.

ಹೊಸಕೋಟೆ ತಾಲೂಕಿನ ಸೊಣ್ಣೇನಹಳ್ಳಿ ಬಳಿ ಇರುವ ತಮ್ಮ ಜಮೀನನ್ನು ರಾಜ್‌ಗೋಪಾಲ್‌ ಎಂಬುವರು ಮಾರಾಟ ಮಾಡಿದ್ದರು. ಅದನ್ನು ಖರೀದಿಸಿದ್ದ ಪುಟ್ಟರಾಜು, ಆರ್‌ಟಿಜಿಎಸ್‌ ಮೂಲಕ ಮುಂಗಡವಾಗಿ ಹಣ ನೀಡಿದ್ದರು. ಅದೇ ಜಮೀನು ಖರೀದಿಸಲು ಮುಂದಾಗಿದ್ದ ಕೆ.ಮಂಜು, ರಾಜ್‌ಗೋಪಾಲ್‌ ಜೊತೆಯಲ್ಲಿ ಒಪ್ಪಂದ ಸಹ ಮಾಡಿಕೊಂಡಿದ್ದರು. ಈ ವಿಷಯ ಗೊತ್ತಾಗುತ್ತಿದ್ದಂತೆ ಪುಟ್ಟರಾಜು ಪ್ರಶ್ನಿಸಿದ್ದರು.

ಪುಟ್ಟರಾಜು ಹೆಸರಿಗೆ ಜಮೀನು ನೋಂದಣಿ ಮಾಡಿಸುವುದಾಗಿ ಹೇಳಿ ಆರೋಪಿಗಳು ಮತ್ತಷ್ಟು ಹಣ ಪಡೆದಿದ್ದರೆಂದು ದೂರಲಾಗಿದೆ. ಆರೋಪಿಗಳು ಜಮೀನು ನೋಂದಣಿ ಮಾಡಿಸಿರಲಿಲ್ಲ. ಹಣವನ್ನೂ ವಾಪಸು ಕೊಟ್ಟಿರಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಜೀವ ಬೆದರಿಕೆ ಹಾಕಿದ್ದರು ಎಂದು ಪುಟ್ಟರಾಜು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top