fbpx
ಸಮಾಚಾರ

“ಹಸು ಕರುಗಳನ್ನು ಮಾರದೇ, ನಮ್ಮ ಹೆಂಡ್ತೀರನ್ನ ಮಾರಬೇಕಾ?” ಸರ್ಕಾರದ ವಿರುದ್ಧ ರೈತರ ಆಕ್ರೋಶ

ರಾಜ್ಯದಲ್ಲಿ ಗೋ ಹತ್ಯೆ ಸಂಪೂರ್ಣ ನಿಷೇಧವಾಗಿದೆ. ಎಮ್ಮೆ ಹಾಗೂ ಕೋಣಗಳಿಗೆ ಮಾತ್ರ 13 ವರ್ಷ ವಯಸ್ಸಾದ ಬಳಿಕ ಹತ್ಯೆ ಮಾಡಬಹುದು ಎಂಬ ಹೊಸ ವಿಧೇಯಕ ವಿರೋಧ ಪಕ್ಷಗಳ ತೀವ್ರ ವಿರೋಧದ ಮದ್ಯೆಯೂ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ.

ಗೋಹತ್ಯೆ ನಿಷೇದ ಮಾಡುವುದರಿಂದ ಗ್ರಾಮೀಣ ಪ್ರದೇಶದ ರೈತರ ಮೇಲೆ ಹೆಚ್ಚು ದುಷ್ಪರಿಣಾಮ ಬೀರುತ್ತದೆ ಎಂಬ ವಾದಗಳು ಮೊದಲಿನಿಂದಲೂ ವ್ಯಕ್ತವಾಗುತ್ತಿದ್ದವು. ಗೋಹತ್ಯಾ ನಿಷೇದ ಕಾಯ್ದೆ ಬಗ್ಗೆ ಪರ ಮತ್ತು ವಿರೋಧ ಚರ್ಚೆಗಳು ವ್ಯಕ್ತವಾಗುತ್ತಿದ್ದ ಮದ್ಯೆಯೇ ಗೋಹತ್ಯೆ ನಿಷೇಧದ ಬಿಸಿ ಮಾತ್ರ ಅದಾಗಲೇ ತಟ್ಟಲು ಶುರುವಾಗಿದ್ದು, ಚಾಮರಾಜನಗರದಲ್ಲಿ ರೈತರ ಆಕ್ರೋಶಕ್ಕೂ ಕಾರಣವಾಗಿದೆ.

ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೆ ಹೊಂದಿಕೊಂಡಿರುವ ಚಾಮರಾಜನಗರ ಜಿಲ್ಲೆಯ ರೈತರು ಜಾನುವಾರಗಳನ್ನು ಕೇರಳ, ತಮಿಳುನಾಡಿಗೆ ಸಾಗಿಸುತ್ತಿದ್ದರು. ಹಾಗೇ ರೈತರೂ ಕೂಡ ತಮ್ಮ ಅನುಪಯುಕ್ತ ಹಸುಗಳನ್ನು ಆ ರಾಜ್ಯಗಳಿಗೆ ಮಾರಾಟ ಮಾಡಿ, ಹಣ ಗಳಿಸುತ್ತಿದ್ದರು. ಆದರೆ ಇದೀಗ ರಾಜ್ಯದಲ್ಲಿ ಗೋಹತ್ಯೆ ನಿಷೇಧದ ಬಗ್ಗೆ ಜೋರಾಗಿ ಮಾತು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಕೇರಳ, ತಮಿಳುನಾಡಿನ ದಲ್ಲಾಳಿಗಳು ಚಾಮರಾಜನಗರಕ್ಕೆ ಬರುತ್ತಿಲ್ಲ. ಇದರಿಂದ ರೈತರು ಪ್ರಾಣಿಗಳ ಮಾರಾಟಕ್ಕೆ ತೀವ್ರ ಕಷ್ಟಪಡುತ್ತಿದ್ದಾರೆ.

ಸಾಮಾನ್ಯವಾಗಿ ಜನರು ತಮಗೆ ಬೇಡದ ಹಸುಗಳನ್ನು ಸಂತೆಯಲ್ಲಿ ಮಾರಾಟ ಮಾಡಿ ಬರುವ ಹಣದಿಂದ ತಮಗೆ ಇದ್ದ ಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರು ಆರ್ಥಿಕ ಸಂಕಷ್ಟ ಎದುರಾದಾಗ ಜಾನುವಾರು ಮಾರಲು ಮುಂದಾಗುತ್ತಾರೆ. ಆದರೆ ಈ ಬಾರಿ ಜಾನುವಾರುಗಳ ಮಾರಾಟ ತುಂಬ ಕಷ್ಟ ಎಂದು ನೋವು ತೋಡಿಕೊಳ್ಳುತ್ತಿದ್ದಾರೆ. ಮಾರಾಟ ಮಾಡಲು ತೆಗೆದುಕೊಂಡು ಬಂದ ಹಸುಗಳನ್ನು ಮಾರಲಾಗದೆ ಹಾಗೇ, ವಾಪಸ್ ಕೊಂಡೊಯ್ಯುತ್ತಿದ್ದಾರೆ.

ಮಾರಾಟ ಮಾಡಲು ಕರೆತಂದಿದ್ದ ಹಸುಕರುಗಳನ್ನು ಮಾರಲಾಗದೆ ಪರದಾಡುತ್ತಿರುವ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಪೊಲೀಸರು ಜಾನುವಾರಗಳನ್ನು ಮಾರಾಟ ಬಾರದು ಎಂದು ಬೆದರಿಸುತ್ತಿದ್ದಾರೆ. ನಾವು ಬೇರೆಯವರಿಗೆ ಹಸುಗಳನ್ನು ಮಾರಾಟ ಮಾಡುವುದಿಲ್ಲ, ಸರ್ಕಾರ ಹಸುಕರುಗಳನ್ನು ಖರೀದಿಸಲಿ” ಎಂದು ಆಗ್ರಹಿಸುತ್ತಿದ್ದಾರೆ.

ಈ ಬಗ್ಗೆ ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯ ರೈತ ಶಿವಮಾದಪ್ಪ ಅವರು ಸರ್ಕಾರದ ವಿರುದ್ಧ ಅಳಲು ತೋಡಿಕೊಂಡಿದ್ದಾರೆ. “ಜಮೀನಿನಲ್ಲಿ ಸರಿಯಾಗಿ ಬೆಳೆಯಾಗಿಲ್ಲ. ಬರ ಬಂದಿದ್ದಕ್ಕೆ ಯಾವ ಬೆಲೆ ಪರಿಹಾರ ಕೂಡ ಸರ್ಕಾರ ಕೊಟ್ಟಿಲ್ಲ . ಮನೆಯಲ್ಲಿ ಊಟಕ್ಕೂ ಏನೂ ಇಲ್ಲದಂತಾದ ಪರಿಸ್ಥಿತಿ ಎದುರಾಗಿದೆ. ಅಷ್ಟೇ ಅಲ್ಲದೆ ಅರೋಗ್ಯ ಕೂಡ ಹದಗೆಟ್ಟಿದ್ದು ದಿನಕ್ಕೆ ಏಳೆಂಟು ಮಾತ್ರಗಳನ್ನು ತೆಗೆದುಕೊಳ್ಳಬೇಕು. ಇಂಥ ಪರಿಸ್ಥಿತಲ್ಲಿ ಹಸುಕರುಗಳನ್ನು ಮಾರಾಟ ಮಾಡೋಣ ಅಂದರೆ ಆಗುತ್ತಿಲ್ಲ ಏನು ಮಾಡೋದು. ಹಸು ಕರುಗಳನ್ನು ಮಾರದೇ ನಮ್ಮ ಹೆಂಡತಿಯರನ್ನು ಮಾರೋದಾ?” ಎಂದು ಸರ್ಕಾರದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಮೇಶ್ ಎಂಬ ಸ್ಥಳೀಯ ರೈತರು ಮಾತನಾಡಿ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು. “ಈ ವರ್ಷ ಸರಿಯಾಗಿ ಮಳೆಯಾಗಿಲ್ಲದ ಕಾರಣ ಬೆಳೆ ಕೂಡ ಆಗಿಲ್ಲ. ಇನ್ನೂ ಕೆಲವೇ ದಿನಗಳಲ್ಲಿ ಬೇಸಿಗೆ ಕಾಲ ಕೂಡ ಆರಂಭವಾಗುತ್ತದೆ. ಜಾನುವಾರುಗಳನ್ನು ಮೇಯಿಸಲು ಒಬ್ಬ ಆಳನ್ನು ಕೆಲಸಕ್ಕೆ ಇಡಬೇಕು. ಆಳುಗಳನ್ನು ಇಟ್ಟುಕೊಂಡು ಜಾನುವಾರುಗಳನ್ನು ಸಾಕುವಷ್ಟು ಸಾಮರ್ಥ್ಯ ನಮಗೆ ಇಲ್ಲ. ಈಗ ಸದ್ಯ ಅನುಪಯುಕ್ತ ಜಾನುವಾರುಗಳನ್ನು ಮಾರಾಟಮಾಡಿ ಬಂದ ಹಣದಿಂದ ಮಕ್ಕಳ ಮದುವೆ, ಶಾಲಾ ಖರ್ಚುಗಳನ್ನು ನಿಭಾಯಿಸಲು ನಿರ್ಧರಿಸಿದ್ದೇವೆ. ಸರ್ಕಾರ ಬೆಳೆಗಳನ್ನು ಖರೀದಿ ಮಾಡುವ ರೀತಿಯಲ್ಲಿ ನಮ್ಮ ದನಕರುಗಳನ್ನೂ ಖರೀದಿಸಿ ನಮಗೆ ಅನುಕೂಲ ಮಾಡಿಕೊಡಲಿ” ಎಂದು ಹೇಳಿದರು.

ಒಟ್ಟಾರೆಯಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೋಹತ್ಯಾ ನಿಷೇದ ಕಾಯ್ದೆ ರೈತಾಪಿ ವರ್ಗಕ್ಕೆ ತಲೆನೋವು ತರಿಸಿದೆ. ಹೀಗಾಗಿ ಸರ್ಕಾರ ಗೋಹತ್ಯಾ ನಿಷೇದ ಕಾಯ್ದೆಯನ್ನು ವಾಪಸ್ಸು ಪಡೆಯಬೇಕು. ಇಲ್ಲವಾದರೆ ಬೆಂಬಲ ಬೆಲೆ ನೀಡಿ ಸರ್ಕಾರವೇ ರೈತರ ಜಾನುವಾರುಗಳನ್ನು ಖರೀದಿಸಬೇಕು” ಎಂದು ರೈತರು ಆಗ್ರಹಿಸಿದ್ದಾರೆ. ರೈತರ ಈ ಮನವಿಗೆ ಸರ್ಕಾರ ಹೇಗೆ ಸ್ಪಂದಿಸುತ್ತದೆ ಎಂಬುದನ್ನ ಕಾದುನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top