fbpx
ಸಮಾಚಾರ

ರೈಲಿಗೆ ತಲೆಕೊಟ್ಟು ವಿಧಾನ ಪರಿಷತ್ ಉಪ ಸಭಾಪತಿ ಧರ್ಮೇಗೌಡ ಆತ್ಮಹತ್ಯೆ!

ವಿಧಾನ ಪರಿಷತ್ತಿನ ಉಪ ಸಭಾಪತಿ ಹಾಗೂ ಜೆಡಿಎಸ್ ನಾಯಕ ಎಸ್ ಎಲ್ ಧರ್ಮೇಗೌಡರ ಮೃತದೇಹ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನಲ್ಲಿ ರೈಲ್ವೆ ಹಳಿ ಪಕ್ಕ ಪತ್ತೆಯಾಗಿದ್ದು ಆಘಾತವನ್ನುಂಟುಮಾಡಿದೆ. ಸ್ಥಳದಲ್ಲಿ ಡೆತ್ ನೋಟ್ ಸಿಕ್ಕಿದೆ.

H.D.ಕುಮಾರಸ್ವಾಮಿ ಆಪ್ತರಾಗಿದ್ದ ಎಸ್.ಎಲ್.ಧರ್ಮೇಗೌಡ. ಗನ್‌ಮ್ಯಾನ್‌, ಎಸ್ಕಾರ್ಟ್ ಸಿಬ್ಬಂದಿ ಮನೆಗೆ ಕಳಿಸಿ ನಿನ್ನೆ ಸಂಜೆ ವೇಳೆಗೆ ತಮ್ಮ ಡ್ರೈವರ್ ಜತೆ ಕಾರಿನಲ್ಲಿ ಸಖರಾಯಪಟ್ಟಣದ ಮನೆಯಿಂದ ಗುಣಸಾಗರಕ್ಕೆ ಬಂದಿದ್ದರು.

ಬಳಿಕ ರೈಲು ಹಳಿ ಬಳಿ ಕಾರು ನಿಲ್ಲಿಸಲು ಡ್ರೈವರ್‌ಗೆ ಸೂಚಿಸಿದ್ರು. ನನಗೆ ಒಬ್ಬರ ಜೊತೆ ಖಾಸಗಿಯಾಗಿ ಮಾತನಾಡಬೇಕು. ನೀನು ಹೋಗು ಎಂದು ಚಾಲಕನನ್ನು ಕಳಿಸಿದ್ದಾರೆ. ನಂತರ ಕಡೂರಿನ ವ್ಯಕ್ತಿಗೆ ಕರೆ ಮಾಡಿ ಜನಶತಾಬ್ಧಿ ರೈಲು ಬರುವ ಸಮಯವನ್ನು ವಿಚಾರಿಸಿದ್ದಾರೆ. ಬಳಿಕ ತಮ್ಮ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡು ಚಲಿಸುವ ರೈಲಿಗೆ ತಲೆ ಕೊಟ್ಟಿದ್ದಾರೆ.

ಹಾಗೆ ಹೋದವರು ಮತ್ತೆ ಬಹಳ ಹೊತ್ತಾದರೂ ಬಾರದೇ ಇದ್ದಾಗ, ಚಾಲಕ ಫೋನ್ ಕರೆ ಮಾಡಿದ್ದ. ಪ್ರತಿಕ್ರಿಯೆ ಸಿಗದ ಕಾರಣ ಧರ್ಮೇಗೌಡರ ಪುತ್ರನಿಗೆ ಕರೆ ಮಾಡಿದ ಚಾಲಕ, ಧರ್ಮೇಗೌಡರು ಫೋನ್ ಪಿಕ್ ಮಾಡದೇ ಇರುವ ವಿಚಾರ ತಿಳಿಸಿದ್ದ. ಇದಾಗಿ ಕಡೂರು ಪೊಲೀಸರಿಗೂ ಮಾಹಿತಿ ಹೋಗಿದ್ದು ಎಲ್ಲರೂ ಹುಡುಕಾಟ ಆರಂಭಿಸಿದ್ದಾರೆ.

ಕೊನೆಗೆ ಗುಣಸಾಗರದಲ್ಲಿ ಮೊಬೈಲ್ ಲೊಕೇಶನ್ ಪತ್ತೆಯಾಗಿದೆ. ತೀವ್ರ ಹುಡುಕಾಟ ನಡೆಸಿದಾಗ ರೈಲ್ವೆ ಹಳಿ ಸಮೀಪ ಎರಡು ಭಾಗವಾಗಿರುವ ಮೃತದೇಹ ಪತ್ತೆಯಾಗಿದೆ. ಪೊಲೀಸರು ಕೂಡಲೇ ಮುಂದಿನ ಕ್ರಮಗಳನ್ನು ತೆಗೆದುಕೊಂಡಿದ್ದು, ತನಿಖೆ ನಡೆಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top