fbpx
ಸಮಾಚಾರ

ಪ್ರವೇಶಕ್ಕೂ ಮುನ್ನವೇ ರಾಜಕೀಯಕ್ಕೆ ವಿದಾಯ ಘೋಷಿಸಿದ ರಜಿನಿಕಾಂತ್: ಕ್ಷಮೆ ಯಾಚಿಸಿದ ‘ತಲೈವಾ’!

ತಮಿಳುನಾಡಿನಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಇದಕ್ಕೂ ಮುನ್ನ ದಕ್ಷಿಣ ಭಾರತದ ಪ್ರಖ್ಯಾತ ನಟ ಸೂಪರ್ ಸ್ಟಾರ್ ರಜನೀಕಾಂತ್ ತಮ್ಮ ಪಕ್ಷದ ಬಗ್ಗೆ ಘೋಷಣೆ ಮಾಡಲಿದ್ದಾರೆನ್ನಲಾಗಿತ್ತು. ಆದರೀಗ ಅನಾರೋಗ್ಯ ಕಾಡುತ್ತಿರುವ ಹಿನ್ನೆಲೆ ತಾವು ರಾಜಕೀಯದಿಂದ ದೂರ ಉಳಿಯುತ್ತಿರುವುದಾಗಿ ಘೋಷಿಸಿದ್ದಾರೆ ಹಾಗೂ ತಮ್ಮ ಯೋಜನೆಗಳನ್ನು ರದ್ದುಗೊಳಿಸಿದ್ದಾರೆ.

 

 

ಸುದೀರ್ಘವಾದ ಪತ್ರವೊಂದನ್ನು ಬರೆದು ಟ್ವೀಟರ್ ನಲ್ಲಿ ಹಂಚಿಕೊಂಡಿರುವ ರಜನಿಕಾಂತ್, ಅನಾರೋಗ್ಯದ ಕಾರಣಕ್ಕೆ ಸಕ್ರೀಯ ರಾಜಕಾರಣ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.‌ ಜೊತೆಗೆ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಅಪಾರ ನಿರೀಕ್ಷೆ ಇತ್ತು. ಆ ನಿರೀಕ್ಷೆಗಳನ್ನು ಹುಸಿ ಗೊಳಿಸುತ್ತಿರುವ ಕಾರಣಕ್ಕೆ ಕ್ಷಮೆ ಕೇಳುತ್ತಿದ್ದೇನೆ ಎಂದು ಕೂಡ ಹೇಳಿದ್ದಾರೆ.

ಸದ್ಯ ನನಗೆ ಆರೋಗ್ಯದ ಕಡೆಗೆ ಗಮನಹರಿಸಬೇಕಾಗಿದೆ. ಈಗ ನನ್ನ ರಾಜಕೀಯ ಪಕ್ಷವನ್ನು ಅಧಿಕೃತವಾಗಿ ಹೊರತಂದರೂ ಮನೆಮನೆಗೆ ಹೋಗಿ ಪ್ರಚಾರ ಮಾಡಲು ಸಾಧ್ಯವಿಲ್ಲ. ಇನ್ನು ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಿ ಆದ ಮೇಲೆ ಕೇವಲ ಸಾಮಾಜಿಕ ಮಾಧ್ಯಮ, ಮಾಧ್ಯಮಗಳ ಮೂಲಕ ಪ್ರಚಾರ ಮಾಡಿದರೆ, ರಾಜಕೀಯ ಕ್ರಾಂತಿಯನ್ನು ಸೃಷ್ಟಿಸಲು ಸಾಧ್ಯವಾಗುವುದಿಲ್ಲ.. ಮುಂಬರುವ ತಮಿಳುನಾಡು ಚುನಾವಣೆಯಲ್ಲಿ ಮಹತ್ವದ ಗೆಲುವು ಸಾಧಿಸಲೂ ಸಾಧ್ಯವಾಗುವುದಿಲ್ಲ. ಈ ವಾಸ್ತವವನ್ನು ರಾಜಕೀಯ ಅನುಭವ ಇರುವವರು ಒಪ್ಪಿಕೊಳ್ಳಲೇಬೇಕು..

ಚುನಾವಣಾ ರಾಜಕೀಯಕ್ಕೆ ಇಳಿಯದೆಯೂ ನಾನು ಜನರ ಸೇವೆ ಮಾಡಬಲ್ಲೆ. ನನಗೆ ಸತ್ಯವನ್ನು ಮಾತಾಡಲು ಎಂದಿಗೂ ಭಯವಿಲ್ಲ. ನನ್ನ ಸತ್ಯ ಮತ್ತು ಪಾರದರ್ಶಕತೆಯನ್ನು ಪ್ರೀತಿಸುವ, ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವ ನನ್ನೆಲ್ಲ ಅಭಿಮಾನಿಗಳಲ್ಲೂ ಈ ನಿರ್ಧಾರವನ್ನು ಸ್ವೀಕರಿಸುವಂತೆ ಮನವಿ ಮಾಡುತ್ತೇನೆ. ಹಾಗೇ ನನ್ನ ರಜಿನಿ ಮಕ್ಕಳ್ ಮಂದ್ರಮ್ ಇಷ್ಟು ದಿನಗಳಂತೆ ಕಾರ್ಯ ನಿರ್ವಹಿಸಲಿದೆ ಎಂದು ರಜಿನಿ ಇಂದಿನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top