fbpx
ಸಮಾಚಾರ

“ಕರ್ನಾಟಕದಲ್ಲಿ ಕನ್ನಡಿಗರಿಗೇ ಎಚ್ಚರಿಕೆ ನೀಡುವವರಿಗೆ ಶಾಸ್ತಿಯಾಗಲಿ” ಎಚ್‌ಡಿ ಕುಮಾರಸ್ವಾಮಿ ಆಗ್ರಹ

ಬೆಳಗಾವಿ ಪಾಲಿಕೆ ಎದುರು ಇತ್ತೀಚೆಗೆ ನಾಡ ಧ್ವಜ ಹಾರಿಸಿದ ಕನ್ನಡಪರ ಹೋರಾಟಗಾರರ ದಾಳಿ ನಡೆಸಿರುವುದನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಖಂಡಿಸಿದ್ದಾರೆ. ಕನ್ನಡ ಪರ ಹೋರಾಟಗಾರರಿಗೆ ರಕ್ಷಣೆ ನೀಡದ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

 

 

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ ಅವರು “ಬೆಳಗಾವಿ ಪಾಲಿಕೆ ಎದುರು ಡಿ.28ರಂದು ಕನ್ನಡಪರ ಹೋರಾಟಗಾರರು ನಾಡ ಧ್ವಜ ಹಾರಿಸಿದ ನಂತರದ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ನಮ್ಮ ನೆಲದಲ್ಲಿ ನಮ್ಮ ಧ್ವಜ ಹಾರಿಸಲು ಹರಸಾಹಸಪಡುವುದು, ಅದಕ್ಕೆ ಕಾವಲು ಕಾಯುವುದು, ಧ್ವಜ ತೆರವು ಮಾಡದಂತೆ ಅಧಿಕಾರಿಗಳಲ್ಲಿ ಮನವಿ ಮಾಡುವುದು ಇವೆಲ್ಲವೂ ಕನ್ನಡಿಗರ ಸ್ವಾಭಿಮಾನಕ್ಕೆ ಉಂಟಾದ ಧಕ್ಕೆ” ಎಂದು ಪ್ರತಿಪಾದಿಸಿದ್ದಾರೆ.

 

 


‘ಪಾಲಿಕೆ ಎದುರು ಧ್ಜಜ ಸ್ಥಾಪಿಸಿದ ಕನ್ನಡ ಹೋರಾಟಗಾರ ಶ್ರೀನಿವಾಸ ತಾಳಕೂರ ಎಂಬುವವರ ಅಂಗಡಿಗೆ ಕಿಡಿಗೇಡಿಗಳು ಬೆಂಕಿ ಇಡಲು ಯತ್ನಿಸಿರುವ ಘಟನೆಯೂ ನಡೆದು ಹೋಗಿದೆ. ಕರ್ನಾಟಕದಲ್ಲಿ, ಕನ್ನಡ ಧ್ವಜಕ್ಕಾಗಿ ಹೋರಾಡಿದವರ ಮೇಲೆ ಪದೇ ಪದೇ ದಾಳಿ ನಡೆಯುತ್ತದೆ ಎಂದರೆ, ಅವರಿಗೆ ರಕ್ಷಣೆ ನೀಡಲಾಗುತ್ತಿಲ್ಲ ಎಂದರೆ ಆಳುವವರ ಕನ್ನಡಾಭಿಮಾನ, ನಾಡ ಪ್ರೇಮ ಪ್ರಶ್ನಾರ್ಹ’ ಎಂದು ಹೇಳಿದ್ದಾರೆ.

“ಕನ್ನಡಿಗರ ಭಾವೈಕ್ಯದ ಸಂಕೇತವಾಗಿರುವ ಕನ್ನಡ ಧ್ವಜ ಡಿ.31ರ ಒಳಗಾಗಿ ತೆರವು ಗೊಳಿಸಬೇಕು ಎಂದು ಹೇಳಿದಾಗಲೇ ಮಹಾರಾಷ್ಟ್ರ ಏಕೀಕರಣ ಸಮಿತಿಯ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ಈಗ ಕನ್ನಡ ಹೋರಾಟಗಾರರ ಮೇಲೆ ದಾಳಿಯ ಪ್ರಯತ್ನಗಳು ನಡೆಯುತ್ತಿವೆ. ಕರ್ನಾಟಕದಲ್ಲಿ ಕನ್ನಡಿಗರಿಗೇ ಎಚ್ಚರಿಕೆ ನೀಡುವ ಧೈರ್ಯ ತೋರುವವರಿಗೆ ಶಾಸ್ತಿಯಾಗಬೇಕು. ” ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

“ಬೆಳಗಾವಿಯಲ್ಲಿ ಕನ್ನಡ ಧ್ವಜ ಸ್ಥಾಪಿಸಿದ ನಂತರದ ಘಟನೆಗಳನ್ನು ಸರ್ಕಾರ ಕೂಡಲೇ ಪರಿಶೀಲಿಸಬೇಕು. ಇದರಲ್ಲಿ ಉದ್ಧಟತನ ತೋರುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಆ ಮೂಲಕ ಕರ್ನಾಟಕದಲ್ಲಿ ‘ಕನ್ನಡಿಗನೇ ಸಾರ್ವಭೌಮ’ ಎಂಬ ಸಂದೇಶ ರವಾನಿಸಬೇಕು. ಇಲ್ಲವಾದರೆ, ಕೈಲಾಗದವರೆಲ್ಲರೂ ಕನ್ನಡಿಗರ ಮೇಲೆ ಸವಾರಿ ಮಾಡಲು ಬಂದಾರು…” ಎಂದು ಕುಮಾರಸ್ವಾಮಿ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top