fbpx
ಸಮಾಚಾರ

“ನಿಮ್ಮನ್ನು ಸಭೆಗೆ ಕರೆದಿರಲಿಲ್ಲ” ಸಾ.ರಾ. ಮಹೇಶ್​- ಸಿಂಧೂರಿ ಮಾಸ್ಕ್ ಟಾಕ್​ ಫೈಟ್​! ಸಭೆಯಿಂದ ಹೊರನಡೆದ ಸಿಂಧೂರಿ

ಜೆಡಿಎಸ್‌ ಶಾಸಕ, ಮಾಜಿ ಸಚಿವ ಸಾ.ರಾ.ಮಹೇಶ್‌ ಮತ್ತು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನಡುವೆ ಮಾಸ್ಕ್‌ ವಿಚಾರಕ್ಕೆ ಮಾತಿಗೆ ಮಾತು ಬೆಳೆದ ಘಟನೆ ಮೈಸೂರಿನಲ್ಲಿ ನಡೆದಿದೆ. ಇಬ್ಬರ ನಡುವಿನ ಮನಸ್ಥಾಪಕ್ಕೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ವಿಧಾನಮಂಡಲ ಕಾಗದ ಪತ್ರಗಳ ಸಮಿತಿಯ ಸಭೆ ಸಾಕ್ಷಿಯಾಯಿತು.

ಕರ್ನಾಟಕ ವಿಧಾನಸಭಾ ಕಾಗದ ಪತ್ರಗಳ ಸಮಿತಿ ಅಧ್ಯಕ್ಷರಾದ ಶಾಸಕ ಸಾ.ರಾ.ಮಹೇಶ್‌ ನೇತೃತ್ವದಲ್ಲಿ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಿಗದಿಯಾಗಿತ್ತು. ಈ ಸಭೆಗೆ ಡಿಸಿ ರೋಹಿಣಿ ಸಿಂಧೂರಿ ಆಗಮಿಸಿ, ವೇದಿಕೆಯಲ್ಲಿ ಆಸನದ ವ್ಯವಸ್ಥೆ ಇರದಿದ್ದ ಹಿನ್ನೆಲೆ ವೇದಿಕೆ ಮುಂಭಾಗದ ಕುರ್ಚಿಯಲ್ಲಿ ಕುಳಿತರು.

ಇದಾದ ಬಳಿಕ ಸಭೆಯಲ್ಲಿ ಮಾಸ್ಕ್ ಹಾಕಿಕೊಂಡು ಡಿಸಿ ರೋಹಿಣಿ ಸಿಂಧೂರಿ ಮಾತು ಆರಂಭಿಸಿದರು. ಮಾತಿನ ಮಧ್ಯೆ ಸಾರಾ ಮಹೇಶ್‌ ನಿಮ್ಮ ಮಾತು ಕೇಳುತ್ತಿಲ್ಲ, ಮಾಸ್ಕ್ ತೆಗೆದು ಮಾತನಾಡಿ ಎಂದು ತಿಳಿಸುತ್ತಾರೆ. ಆಗ ರೋಹಿಣಿ ಸಿಂಧೂರಿ, ನಾನು ಮಾಸ್ಕ್ ತೆಗೆಯವುದಿಲ್ಲ, ಮಾಸ್ಕ್ ತೆಗೆದು ಮಾತನಾಡಬಾರದು. ಅದಕ್ಕಾಗಿ ಮಾಸ್ಕ್ ತೆಗೆಯುವುದಿಲ್ಲ ಎಂದು ಉತ್ತರಿಸುತ್ತಾರೆ.

ಬಳಿಕ ಮಾತು ಮುಂದುವರೆಸಿದ ಅವರು, ಈ ಸಭೆಯಲ್ಲಿ ನನಗೆ ಸಂಬಂಧಿಸಿದ ವಿಷಯಗಳ ಚರ್ಚೆ ನಡೆಯುತ್ತಿಲ್ಲ. ಹಾಗಾಗಿ ನೀವು ಸಮ್ಮತಿಸಿದರೆ ನಾನು ಸಭೆಯಿಂದ ತೆರಳುತ್ತೇನೆ ಎಂದು ಶಾಸಕ ಸಾರಾ ಮಹೇಶ್‌ ಅವರಿಗೆ ರೋಹಿಣಿ ಸಿಂಧೂರಿ ತಿಳಿಸುತ್ತಾರೆ.

ನಿಮ್ಮನ್ನು ಸಭೆಗೆ ಕರೆದಿರಲಿಲ್ಲ. ಆದರೂ, ತಾವು ಬಂದಿದ್ದು ಸಂತೋಷ. ಜಿಲ್ಲಾಧಿಕಾರಿಗೆ ಸಭೆಯ ಬಗ್ಗೆ ಮಾಹಿತಿ ಕೊಡುವುದು ಕರ್ತವ್ಯ. ಹಾಗಾಗಿ ನಾವು ಮಾಹಿತಿ ಕೊಟ್ಟಿದ್ದೇವೆ ಎಂದು ಸಾ.ರಾ. ಮಹೇಶ್ ಹೇಳಿದರು. ಮೈಸೂರಿಗೆ ಬಂದ ಕಾಗದ ಪತ್ರಗಳ ಸಮಿತಿಯನ್ನೂ ಸ್ವಾಗತಿಸಿಲ್ಲ. ಆದರೂ ಪರವಾಗಿಲ್ಲ ಸಮಯ ಇದ್ದರೆ ಇರಿ ಎಂದು ಸಹ ಶಾಸಕರು ಹೇಳಿದರು.

ಜೊತೆಗೆ, ನಿಮಗೆ ಬೇರೆ ಕೆಲಸ ಇದ್ದರೆ ಹೋಗಿ ಎಂದು ಹೇಳಿದರು. ಸಾ.ರಾ.ಮಹೇಶ್ ಹೀಗೆ ಹೇಳುತ್ತಿದ್ದಂತೆ ಸಭೆಯಿಂದ ತೆರಳಿದ ಡಿಸಿ ಸಿಂಧೂರಿ ಅವರು ತಮ್ಮ ಕಾರು ಹತ್ತಿ ಬೇಸರದಿಂದ ತೆರಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top