fbpx
ಸಮಾಚಾರ

ಸಿರಾಜ್‌, ಸುಂದರ್‌ ಸೇರಿ ಆರು ಮಂದಿಗೆ ಮಹೀಂದ್ರಾ ಥಾರ್‌ ಗಿಫ್ಟ್ ಮಾಡಿದ ಆನಂದ್​ ಮಹೀಂದ್ರಾ

ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್​ ಗಾವಾಸ್ಕರ್​ ಟ್ರೋಫಿಯಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಿತ್ತು. 2-1 ಅಂತರದಲ್ಲಿ ಸರಣಿ ಗೆಲ್ಲುವ ಮೂಲಕ ಟೀಂ ಇಂಡಿಯಾ, ಆಸ್ಟ್ರೇಲಿಯಾ ಕ್ರಿಕೆಟ್​ ತಂಡಕ್ಕೆ ಸೋಲಿನ ರುಚಿ ತೋರಿಸಿತ್ತು. ಈ ಬಾರಿ ಟೆಸ್ಟ್​​ನಲ್ಲಿ ಡೆಬ್ಯೂ ಮಾಡಿ ಅತ್ಯುತ್ತಮ ಪ್ರದರ್ಶನ ನೀಡಿದ ಆರು ಯುವ ಆಟಗಾರರಿಗೆ ಆನಂದ್ ಮಹೀಂದ್ರಾ ಎಸ್​​ಯವಿ ಗಿಫ್ಟ್​ ಮಾಡಿದ್ದಾರೆ!

ಭಾರತದ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನಲ್ಲಿ ನೆರವಾಗಿದ್ದ ಯುವ ಆಟಗಾರರಾದ ಮೊಹಮ್ಮದ್‌ ಸಿರಾಜ್, ಟಿ ನಟರಾಜನ್‌, ಶುಭಮನ್‌ ಗಿಲ್‌, ವಾಷಿಂಗ್ಟನ್‌ ಸುಂದರ್‌, ಶಾರ್ದುಲ್‌ ಠಾಕೂರ್‌ ಹಾಗೂ ನವದೀಪ್‌ ಸೈನಿ ಅವರಿಗೆ ಥಾರ್‌-ಎಸ್‌ಯುವಿ ಕೊಡುಗೆ ನೀಡಲಾಗುವುದೆಂದು ಆನಂದ ಮಹೀಂದ್ರಾ ಶನಿವಾರ ಘೋಷಿಸಿದ್ದಾರೆ.

“ಒಬ್ಬೊಬ್ಬರ ಯಶಸ್ಸಿನ ಕಥೆ ಒಂದೊಂದು ರೀತಿ ಇದೆ. ಸರಣಿಯಲ್ಲಿ ಎದುರಾಗಿದ್ದ ಎಲ್ಲಾ ತೊಡಕುಗಳನ್ನು ಭಾರತ ಮೆಟ್ಟಿ ನಿಂತು ಯಶಸ್ಸು ಕಂಡಿದೆ. ಟೀಮ್‌ ಇಂಡಿಯಾದ ಈ ಸಾಧನೆ ಮುಂದಿನ ಪೀಳಿಗೆಗೆ ಮಾದರಿಯಾಗಲಿದೆ. ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಆರಂಭಿಕ ಹಂತದಲ್ಲಿರುವ ಎಲ್ಲಾ ಆಟಗಾರರಿಗೂ ತಮ್ಮ ವೈಯಕ್ತಿಕ ಖರ್ಚಿನಿಂದ ಹೊಸ ಥಾರ್‌ ಎಸ್‌ಯುವಿಯನ್ನು ಕೊಡುಗೆಯಾಗಿ ನೀಡುತ್ತಿದ್ದೇನೆ,” ಎಂದು ಮತ್ತೊಂದು ಟ್ವೀಟ್‌ ಮಾಡಿದ್ದಾರೆ.

“ಯುವ ಆಟಗಾರರು ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಇನ್ನಷ್ಟು ಸಾಧನೆ ಮಾಡಲಿ ಎಂಬ ಕಾರಣದಿಂದ ಈ ಕೊಡುಗೆ ನೀಡುತ್ತಿದ್ದೇನೆ. ಮೊಹಮ್ಮದ್ ಸಿರಾಜ್‌, ಶಾರ್ದುಲ್ ಠಾಕೂರ್, ಶುಭಮನ್‌ ಗಿಲ್‌, ಟಿ ನಟರಾಜನ್‌, ನವದೀಪ್‌ ಸೈನಿ ಹಾಗೂ ವಾಷಿಂಗ್ಟನ್‌ ಸುಂದರ್‌ ಅವರಿಗೆ ಮಹೀಂದ್ರಾ ಆಟೋ ಆದ್ಯತೆಯ ಮೇರೆಗೆ ಥಾರ್‌ ಎಸ್‌ಯುವಿಯನ್ನು ನೀಡುತ್ತಿದೆ,” ಎಂದು ಕೊನೆಯ ಟ್ವೀಟ್‌ನಲ್ಲಿ ಮಹೀಂದ್ರಾ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top