fbpx
ಸಮಾಚಾರ

ಬರೋಬ್ಬರಿ ನಾಲ್ಕು ವರ್ಷಗಳ ನಂತರ ಜೈಲಿನಿಂದ ಬಿಡುಗಡೆಗೊಂಡ ಶಶಿಕಲಾ

ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಕಳೆದ ನಾಲ್ಕು ವರ್ಷಗಳಿಂದ ಪರಪ್ಪಮನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾ, ಇಂದು(ಜ.27-ಬುಧವಾರ) ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.

ಈಗಾಗಲೇ ತಮ್ಮ ಶಿಕ್ಷೆಯ ಅವಧಿ ಪೂರ್ಣಗೊಳಿಸಿರುವ ಶಶಿಕಲಾ ಅವರಿಗೆ ಮಾರಕ ಕರೊನಾ ಸೋಂಕು ತಗುಲಿರುವುದರಿಂದ, ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ನ್ಯಾಯಾಂಗ ಬಂಧನದಿಂದ ಬಿಡುಗಡೆಗಾಗಿ ಆಸ್ಪತ್ರೆಯಲ್ಲೇ ಜೈಲು ಅಧಿಕಾರಿಗಳು ಶಶಿಕಲಾ ಅವರ ಸಹಿಯನ್ನು ಔಪಚಾರಿಕವಾಗಿ ಪಡೆದುಕೊಂಡಿದ್ದಾರೆ.

ನ್ಯಾಯಾಲಯದ ಆದೇಶದನ್ವಯ ಶಶಿಕಲಾ ಜ.27ರಂದು ಬಿಡುಗಡೆಯಾಗಲಿದ್ದಾರೆ. ಆಸ್ಪತ್ರೆಯಲ್ಲಿದ್ದರೂ ಜೈಲು ಸಿಬ್ಬಂದಿ ಬಿಡುಗಡೆ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ. ಜೈಲು ಸಿಬ್ಬಂದಿಯೇ ಆಸ್ಪತ್ರೆಗೆ ಭೇಟಿ ನೀಡಿ ಶಶಿಕಲಾ ಬಿಡುಗಡೆ ಪ್ರಕ್ರಿಯೆ ಪೂರ್ಣಗೊಳಿಸಲಿದ್ದಾರೆ. ಬಳಿಕ ಅಗತ್ಯ ಬಿದ್ದರೆ ಸ್ಥಳೀಯ ಪೊಲೀಸರು ಭದ್ರತೆ ಒದಗಿಸಲಿದ್ದಾರೆ.

ರಾಜಕೀಯ ಎದುರಾಳಿ ಇರುವ ಪ್ರಭಾವಿ ನಾಯಕಿಯಾಗಿರುವುದರಿಂದ ಸರ್ಕಾರ ಶಶಿಕಲಾಗೆ ಝಡ್ ಪ್ಲಸ್ ಭದ್ರತೆ ನೀಡುವಂತೆ ಆಕೆಯ ಪರ ವಕೀಲರು ಕೇಳಿದ್ದಾರೆ. ಶಶಿಕಲಾ ಆಸ್ಪತ್ರೆಗೆ ದಾಖಲಾಗುವ ಮುನ್ನ ಹಾಗೂ ದಾಖಲಾದ ನಂತರ ನಡೆದ ಘಟನೆಗಳ ಬಗ್ಗೆ ಅವರು ಪ್ರಶ್ನಿಸಿದ್ದಾರೆ.

ಶಶಿಕಲಾ ಅವರನ್ನು ಅಪಾರ ಬೆಂಬಲಿಗರೊಂದಿಗೆ ಬೆಂಗಳೂರಿನಿಂದ ಚೆನ್ನೈಗೆ ಕರೆದುಕೊಂಡು ಹೋಗಲು ಅವರ ಸಂಬಂಧಿ ಹಾಗೂ ಸ್ವತಂತ್ರ ಶಾಸಕ ಟಿಟಿವಿ ದಿನಕರನ್ ನೇತೃತ್ವದಲ್ಲಿನ ಎಎಂಕೆ ಪಕ್ಷದ ಕಾರ್ಯಕರ್ತರು ಹಾಗೂ ಅವರ ಸಂಬಂಧಿಕರನ್ನೊಳಗೊಂಡಂತೆ ಸುಮಾರು 1 ಸಾವಿರ ಜನರು ಬರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top