fbpx
ಸಮಾಚಾರ

ಆಂಧ್ರ ಸಿಎಂ ಜಗನ್ ತಂಗಿಯಿಂದ ಹೊಸ ಪಕ್ಷ ಸ್ಥಾಪನೆ: ತೆಲಂಗಾಣ ರಾಜಕೀಯ ಅಖಾಡಕ್ಕೆ​ ಎಂಟ್ರಿ

ಪ್ರಬಲ ಪ್ರತಿಪಕ್ಷದ ಕೊರತೆ ಇರುವ ತೆಲಂಗಾಣ ರಾಜಕಾರಣಕ್ಕೆ ಆಂಧ್ರ ಮುಖ್ಯಮಂತ್ರಿ ವೈ.ಎಸ್‌. ಜಗನ್ಮೋಹನ ರೆಡ್ಡಿ ಸೋದರಿ ವೈ.ಎಸ್‌. ಶರ್ಮಿಳಾ ಪಾದಾರ್ಪಣೆ ಮಾಡಲು ಸಿದ್ಧತೆ ಆರಂಭಿಸಿದ್ದಾರೆ. ಅವರು ಹೊಸ ಪಕ್ಷವೊಂದನ್ನು ಸ್ಥಾಪಿಸಿ ತೆಲಂಗಾಣ ರಾಜಕಾರಣದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವ ನಿರೀಕ್ಷೆ ಇದೆ ಎನ್ನಲಾಗಿದೆ.

ನಿನ್ನೆ ತಮ್ಮ ತಂದೆ ಮಾಜಿ ಸಿಎಂ ವೈಎಸ್​​ ರಾಜಶೇಖರ ರೆಡ್ಡಿ ಅವರ ಬೆಂಬಲಿಗರು ಹಾಗೂ ಅಭಿಮಾನಿಗಳ ಜೊತೆ ಸಭೆ ನಡೆಸಿದ ಶರ್ಮಿಳಾ, ಹೊಸ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾರೆ. ಆದ್ರೆ ಶರ್ಮಿಳಾರ ಹೊಸ ಪಕ್ಷ ರಚನೆಗೂ ನಮ್ಮ ವೈಎಸ್​ಆರ್​ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಅದು ಅವರ ವೈಯಕ್ತಿಕ ನಿರ್ಧಾರ ಅಂತ ವೈಎಸ್​ಆರ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಜ್ಜಲಾ ರಾಮಕೃಷ್ಣ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.

ಜಗನ್ಮೋಹನ ರೆಡ್ಡಿ ಅವರು ಜೈಲಿನಲ್ಲಿದ್ದಾಗ 2012ರಲ್ಲಿ ಅಖಂಡ ಆಂಧ್ರದಾದ್ಯಂತ 3000 ಕಿ.ಮೀ. ಪಾದಯಾತ್ರೆ ನಡೆಸಿದ್ದ ಶರ್ಮಿಳಾ, ಜಗನ್‌ ಅವರು 2019ರಲ್ಲಿ ಆಂಧ್ರ ಸಿಎಂ ಆದ ಬಳಿಕ ತೆರೆಮರೆಗೆ ಸರಿದಿದ್ದರು. ಇದೀಗ ಅವರ ಕಣ್ಣು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಆಡಳಿತದಲ್ಲಿರುವ ತೆಲಂಗಾಣ ಮೇಲೆ ಬಿದ್ದಿದೆ. ಅಲ್ಲಿ ತಮ್ಮ ರಾಜಕೀಯ ಜೀವನಕ್ಕೆ ಭದ್ರ ನೆಲೆ ಕಂಡುಕೊಳ್ಳುವ ಉದ್ದೇಶದಿಂದ ತಮ್ಮ ತಂದೆ ದಿವಂಗತ ವೈ.ಎಸ್‌. ರಾಜಶೇಖರ ರೆಡ್ಡಿ ಅವರ ಜತೆ ಒಡನಾಟ ಹೊಂದಿದ್ದ ನಾಯಕರ ಜತೆ ಶರ್ಮಿಳಾ ಸರಣಿ ಮಾತುಕತೆ ಆರಂಭಿಸಿದ್ದಾರೆ.

“ತಳಮಟ್ಟದ ವಾಸ್ತವತೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅವರ ಸಲಹೆಗಳನ್ನು ಮತ್ತು ಅವರಲ್ಲಿರುವ ಮಾಹಿತಿಯನ್ನು ಪಡೆದುಕೊಳ್ಳಲು ನಾನು ಬಯಸುತ್ತಿದ್ದೇನೆ … ನಾನು ನಲ್ಗೊಂಡ ಜಿಲ್ಲೆಯ (ತೆಲಂಗಾಣ) ಜನರ ಸಭೆ ಕರೆದಿದ್ದೆ. ಇದು ಕೇವಲ (ಅವರೊಂದಿಗಿನ) ಸಂಪರ್ಕ ಸಭೆಯಾಗಿದೆ. ಪ್ರತಿ ಜಿಲ್ಲೆಯ ಜನರೊಂದಿಗೆ ಸಭೆ ನಡೆಯಲಿದೆ,” ಎಂದು ಶರ್ಮಿಳಾ ಹೇಳಿದ್ದಾರೆ. ಆದರೆ ಇದು ಅಷ್ಟಕ್ಕೆ ನಿಲ್ಲುವ ಸಾಧ್ಯತೆ ಇಲ್ಲ ಎಂಬ ಸುದ್ದಿಗಳು ಹರಿದಾಡುತ್ತಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top