fbpx
ಸಮಾಚಾರ

ಕನ್ನಡಿಗರನ್ನು ನಂಬಿಸಿ ಕೈಕೊಟ್ಟ ನಿರ್ಮಲ ಸೀತಾರಾಮನ್ ವಿರುದ್ಧ ಸಂಸತ್‌ನಲ್ಲಿ ಕನ್ನಡದಲ್ಲೇ ಘರ್ಜಿಸಿದ ಕನ್ನಡದ ಹುಲಿ

ಕನ್ನಡನಾಡು ಮತ್ತು ಕನ್ನಡ ಭಾಷೆಯ ಮೇಲೆ ಅತೀವ ಪ್ರೀತಿ, ಅಭಿಮಾನ ಇಟ್ಟುಕೊಂಡಿರುವವರು ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್. ಕರ್ನಾಟಕಕ್ಕೆ ಸಂಭಂದಿಸಿದ ಸಮಸ್ಯೆಗಳ ಬಗ್ಗೆ ಸದಾ ಸ್ಪಂದಿಸುವ ಚಂದ್ರಶೇಖರ್ ಅವರು ತಾವು ಪ್ರತಿ ಭಾರಿ ಸಂಸತ್ ಅಧಿವೇಶನಕ್ಕೆ ಹೋದಾಗಲೂ ಸದನದಲ್ಲಿ ಕನ್ನಡ ಕಹಳೆ ಮೊಳಗಿಸಿ ಕನ್ನಡಿಗರ ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತುತ್ತಾರೆ. ಅಂತೆಯೇ ಇಂದೂ ಕೂಡ ಸದನದಲ್ಲಿ ಮತ್ತೊಮ್ಮೆ ಕನ್ನಡಿಗರ ಗಂಭೀರ ಸಮಸ್ಯೆಯ ಬಗ್ಗೆ ಆರ್ಭಟಿಸಿದ್ದಾರೆ.

” IBPS ಪರೀಕ್ಷೆಯಲ್ಲಿ ಕನ್ನಡಿಗರಿಗೆ ಆದ್ಯತೆ ಕೊಡಬೇಕು” ಎಂದು ಸಂಸತ್ ನಲ್ಲಿ ಈ ಹಿಂದೆ ಅನೇಕ ಭಾರಿ ಧ್ವನಿ ಎತ್ತಿದ್ದ ಸಂಸದ ಜಿಸಿ ಚಂದ್ರಶೇಖರ್ ಇಂದು ಮತ್ತೆ ಸಂಸತ್‌ನಲ್ಲಿ ಈ ಸಮಸ್ಯೆಯ ಬಗ್ಗೆ ಘರ್ಜಿಸಿದ್ದಾರೆ. ಕರ್ನಾಟಕದಲ್ಲಿ ಸೃಷ್ಟಿಯಾಗುವ ಬ್ಯಾಂಕಿಂಗ್‌ ಉದ್ಯೋಗಗಳನ್ನು ಕನ್ನಡಿಗರಿಗೆ ನೀಡಬೇಕೆಂದು ಮತ್ತೊಮ್ಮೆ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಮತ್ತು ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಆಗ್ರಹ ಮಾಡಿದ್ದಾರೆ.

 

 

ಐಬಿಪಿಎಸ್‌ ಪರೀಕ್ಷೆಗಳನ್ನು ಆಯಾ ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಕಳೆದ ವರ್ಷ ಸದನದಲ್ಲಿ ಘೋಷಿಸಿದ್ದರು. ಆರ್‌ಆರ್‌ಬಿಗಳಲ್ಲಿನ ಹುದ್ದೆಗಳಿಗೆ ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನಡೆಸಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಕಟಿಸಿದ್ದರು. ಆದರೆ ಇದು ಈಗಲೂ ಘೋಷಣೆಯಾಗಿಯೇ ಉಳಿದಿದ್ದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಇತ್ತೀಚಿಗಷ್ಟೇ ನಡೆದ ಐಬಿಪಿಎಸ್ ನೇಮಕಾತಿಯಲ್ಲಿಯೂ ಕೂಡ ಕೇವಲ ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಮಾತ್ರ ಪರೀಕ್ಷೆ ಬರೆಯಬೇಕು ಎಂದು ಸೂಚಿಸಲಾಗಿತ್ತು.

ಈ ಹಿನ್ನಲೆಯಲ್ಲಿ ಇಂದು ಸಂಸತ್ ನಲ್ಲಿ ಮಾತನಾಡಿದ ಸಂಸದ ಜಿಸಿ ಚಂದ್ರಶೇಖರ್ ಅವರು ಕೇಂದ್ರ ಸರ್ಕಾರ ಮತ್ತು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಿರ್ಮಲ ಸೀತಾರಾಮನ್ ಅವರು ಐಬಿಪಿಎಸ್ ವಿಚಾರವಾಗಿ ಸದನದಲ್ಲಿ ನೀಡಿದ ವಾಗ್ದಾನವನ್ನು ಮುರಿದಿದ್ದಾರೆ ಎಂದು ಚಂದ್ರಶೇಖರ್ ವಾಗ್ದಾಳಿ ನಡೆಸಿದ್ದಾರೆ.

“ನಿರ್ಮಲ ಸೀತಾರಾಮನ್ ಬಗ್ಗೆ ನಮ್ಮ ಕರ್ನಾಟಕ ತುಂಬಾ ನಿರೀಕ್ಷೆ ಇಟ್ಟುಕೊಂಡಿತ್ತು. ಅವರು ರಾಜ್ಯಸಭೆಗೆ ಆಯ್ಕೆಯಾಗಿದ್ದು ಕರ್ನಾಟಕದಿಂದ ಎನ್ನುವ ಕಾರಣಕ್ಕೆ ಕನ್ನಡಿಗರು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಕರ್ನಾಟಕದ ಯಾವ ಸಮಸ್ಯೆಗೂ ಅವರು ಸ್ಪಂದಿಸುತ್ತಿಲ್ಲ. ಹಾಗೆಯೇ 13 ಪ್ರಾದೇಶಿಕ ಭಾಷೆಗಳಲ್ಲಿ ಐಬಿಪಿಎಸ್ ಪರೀಕ್ಷೆಗಳನ್ನು ನಡೆಸುವುದಾಗಿ ಹೇಳಿ ಇಂದಿನವರೆಗೂ ಅದನ್ನು ಜಾರಿಗೆ ತರದೇ ಇರುವುದು ಅವರು ಕನ್ನಡಿಗರಿಗೆ ಮಾಡುತ್ತಿರುವ ಅನ್ಯಾಯವಾಗಿದೆ.” ಎಂದು ಚಂದ್ರಶೇಖರ್ ಕಿಡಿಕಾರಿದ್ದಾರೆ.

“ಈಗಲೂ ಸರ್ಕಾರಕ್ಕೆ ನಾನು ಹೇಳುವುದು ಇಷ್ಟೇ, ಐಬಿಪಿಎಸ್ ಸಮಸ್ಯೆ ಕುರಿತಾಗಿ ಕನ್ನಡಿಗರ ಮನವಿಯನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡು ಪರಿಸಬೇಕು. IBPSಮೋಸದಿಂದಾಗಿ ಕನ್ನಡಿಗರು ಒಂದೇ ವರ್ಷದಲ್ಲಿ ಸುಮಾರು 18,000 ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಕೊರೋನಾ ಇರುವುದರಿಂದ ಕರ್ನಾಟಕದ ಯುವ ಜನರಿಗೆ ಉದ್ಯೋಗ ಸಿಗದೇ ತುಂಬಾ ಕಷ್ಟದಲ್ಲಿದ್ದಾರೆ. ಹಾಗಾಗಿ ಈಗಲಾದರೂ ನಿರ್ಮಲ ಸೀತಾರಾಮನ್ ಅವರು ಸದನದಲ್ಲಿ ನೀಡಿದ ವಾಗ್ದಾನವನ್ನು ನಡೆಸಿಕೊಡಬೇಕು ಎಂದು ಆಗ್ರಹಿಸುತ್ತಿದ್ದೇನೆ” ಎಂದು ಚಂದ್ರಶೇಖರ್ ಘರ್ಜಿಸಿದ್ದಾರೆ.

ಏನಿದು IBPSಮೋಸ?
ಈ ಹಿಂದೆ 2014ರ ವರೆಗೆ ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗದಲ್ಲಿ ಎಲ್ಲಾ ರಾಜ್ಯಗಳ ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತಿತ್ತು. ಆದರೆ ಬಿಜೆಪಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಬ್ಯಾಂಕಿಂಗ್ ಪರೀಕ್ಷೆಯನ್ನು ಕೇವಲ ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಬರೆಯಬೇಕು ಎಂಬ ನಿಯಮವನ್ನು ಜಾರಿಗೊಳಿಸಲಾಗಿದೆ.. ಇದರಿಂದಾಗಿ ಕೇವಲ ಸ್ಥಳೀಯ ಭಾಷೆಯ ಜ್ಞಾನವಿರುವ ಪ್ರತಿಭಾನ್ವಿತರು ಅವಕಾಶ ವಂಚಿತರಾಗುತ್ತಿದ್ದಾರೆ. ಇದು ಕೇವಲ ಕರ್ನಾಟಕ ಮಾತ್ರವಲ್ಲದೆ ಎಲ್ಲಾ ಪ್ರಾದೇಶಿಕ ಭಾಷೆಗಳ ರಾಜ್ಯಗಳು ಈ ಸಮಸ್ಯೆಗಿರುವುದರಿಂದ ಈ ವಿಷಯವನ್ನು ಕೇಂದ್ರಸರ್ಕಾರ ಕಡಗಣಿಸುತ್ತಿರುವುದು ದೊಡ್ಡ ದುರಂತವಾಗಿದೆ.

ಇನ್ನು ಕರ್ನಾಟಕದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನ್ನಡಿಗರ ಉದ್ಯೋಗಾವಕಾಶಕ್ಕೆ ಆದ್ಯತೆ ನೀಡಬೇಕೆಂಬ ಕುರಿತಂತೆ ಕರ್ನಾಟಕದಾದ್ಯಂತ ಕನ್ನಡಪರ ಸಂಘಟನೆಗಳು ಹೋರಾಟಕ್ಕಿಳಿದು ವರ್ಷಗಳೇ ಕಳೆದಿವೆ.ಬ್ಯಾಂಕುಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ನೀಡುತ್ತಿಲ್ಲ ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಕನ್ನಡಿಗರಿಗಿಂತ ಹೊರ ರಾಜ್ಯದವರಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗುತ್ತದೆ ಎಂದು ವಿದ್ಯಾರ್ಥಿಗಳ ಆರೋಪವಾಗಿದೆ.

ಐಬಿಪಿಎಸ್ ನಡೆಸಿದ ಪರೀಕ್ಷೆಯಲ್ಲಿ ರಾಜ್ಯದ ಅಭ್ಯರ್ಥಿಗಳನ್ನು ಪರಿಗಣಿಸಲಾಗುತ್ತಿಲ್ಲ. ಈ ಸಂಬಂಧ ಅನ್ಯಾಯಕ್ಕೆ ಒಳಗಾದ ಅಭ್ಯರ್ಥಿಗಳು ಪ್ರತಿಭಟಿಸುತ್ತಲೇ ಬಂದಿದ್ದಾರೆ. ಆದರೆ ಎಷ್ಟೇ ಮನವಿ, ಪ್ರತಿಭಟನೆ, ಹೋರಾಟ ಮಾಡಿದರೂ ಮಾತ್ರ ಹಠ ಹಿಡಿದು ಕೂತಿರುವ ಕೇಂದ್ರ ಸರ್ಕಾರ ಇತ್ತ ಕಡೆ ತಿರುಗಿ ಕೂಡ ನೋಡಿಲ್ಲ…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top