fbpx
ಸಮಾಚಾರ

“ನಟನಾಗಿರುವುದರಿಂದ ಉತ್ತಮವಾಗಿ ಅಳುತ್ತಿದ್ದಾರೆ” ತಂದೆ ಸತ್ಯಜಿತ್ ಕಣ್ಣೀರನ್ನು ಅಣಕಿಸಿದ ಮಗಳು ಸ್ವಲೇಹಾ

ಹಿರಿಯ ನಟ ಸತ್ಯಜಿತ್ ವಿರುದ್ಧ ಮಗಳು ಅಖ್ತರ್ ಸ್ವಲೇಹಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಮ್ಮ ತಂದೆ ಹಣಕ್ಕಾಗಿ ಪೀಡಿಸುತ್ತಿದ್ದಾರೆ. ಮನೆಗೆ ರೌಡಿಗಳನ್ನು ಬಿಟ್ಟು ಬೆದರಿಕೆ ಹಾಕಿಸುತ್ತಿದ್ದಾರೆ. ನಾವು ತಿಂಗಳಿಗೆ 1 ಲಕ್ಷ ರೂ ಕೊಟ್ಟರೂ, ಇನ್ನಷ್ಟು ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ ಎಂದು ಮಗಳು ಸ್ವಲೇಹಾ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅಪ್ಪನ ಜೀವನಾಂಶಕ್ಕೆ ತಿಂಗಳು 1 ಲಕ್ಷ ರೂಪಾಯಿ ದುಡ್ಡು ಕೊಡುತ್ತಿದ್ದೆ. ನಾನೀಗ ತುಂಬು ಗರ್ಭಿಣಿ, ಕೆಲಸಕ್ಕೆ ಹೋಗುತ್ತಿಲ್ಲ. ಹೀಗಾಗಿ ಮೊದಲಿನ ಹಾಗೆ ಸಹಾಯ ಮಾಡಲಾಗುತ್ತಿಲ್ಲ. ಹಣ ಕೊಡೋದು ನಿಲ್ಲಿಸಿದ್ದರಿಂದ ಅಪ್ಪನ ಟಾರ್ಚರ್ ಕೊಡಲು ಆರಂಭಿಸಿದ್ದಾರೆ. ಪ್ರತಿದಿನ ಬೆದರಿಕೆ ಕರೆಗಳು ಬರುತ್ತಿವೆ. ತಂದೆ ಸತ್ಯಜಿತ್ ಇದನ್ನೆಲ್ಲಾ ಮಾಡಿಸುತ್ತಿದ್ದಾರೆ ಎಂದು ಆರೋಪ ಬಾಣಸವಾಡಿ ಪೊಲೀಸರಿಗೆ ಮಗಳು ಲಿಖಿತ ದೂರು ನೀಡಿದ್ದಾರೆ.

ಸತ್ಯಜಿತ್ ಹೇಳಿದ್ದೇನು?
‘ಮಗಳನ್ನು ಪೈಲೆಟ್ ಓದಿಸಿದ್ದೇವೆ. ಅವಳು ಏಕಾಏಕಿ ಓರ್ವ ಹುಡುಗನನ್ನು ಮದುವೆಯಾಗ್ತೀನಿ ಅಂತ ಹೇಳಿದಳು. ಮದುವೆ ನಂತರವೂ ನನ್ನ ಜೊತೆ ಚೆನ್ನಾಗಿದ್ದಳು. ಇತ್ತೀಚೆಗೆ ಅವಳ ಹತ್ತಿರ ಮನೆ ಬಾಡಿಗೆ ನೀಡಲು ಹಣ ಕೊಡಿ ಎಂದು ಮನವಿ ಮಾಡಿದ್ದೆ. ಸಿಕ್ಕಾಪಟ್ಟೆ ಸಾಲ ಮಾಡಿ ಅವಳನ್ನು ಓದಿಸಿದ್ದೆವು. ನಾನು ನನ್ನ ಮಗಳಿಗೆ ಏನು ಹಿಂಸೆ ಕೊಡೋಕೆ ಸಾಧ್ಯ?’ ಅಂತ ಸತ್ಯಜಿತ್ ಪ್ರಶ್ನೆ ಮಾಡಿದ್ದಾರೆ.

ನಾನು ಮಗಳಿಂದ ಯಾವುದೇ ಹಣ ಕೇಳಿಲ್ಲ. ಮಗಳನ್ನು ಬಳಸಿ ಯಾರೋ ನನಗೆ ಡ್ಯಾಮೇಜ್ ಮಾಡಿದ್ದಾರೆ. ಮಗಳ ವಿದ್ಯಾಭ್ಯಾಸಕ್ಕೆ ಮನೆ ಮಾರಿದ್ದೇನೆ. ಮನೆ ಬಿಡಿಸಿಕೊಡಲು ಹೇಳಿದ್ದೇ ಅಷ್ಟೇ. ಸಾಯೋ ಟೈಮ್‍ನಲ್ಲಿ ಮಗಳ ಏಳಿಗೆ ಬಯಸುತ್ತೇನೆ. ಮಗಳೇ ನನ್ನ ವಿರುದ್ಧ ನಿಲ್ತಾಳೆ ಅಂತಾ ಅನ್ಕೊಂಡು ಇರಲಿಲ್ಲ ಎಂದು ಮಗಳ ಆರೋಪ ಕೇಳಿ ತಂದೆ ಸತ್ಯಜಿತ್ ಕಣ್ಣೀರು ಹಾಕಿದ್ದಾರೆ.

ಸತ್ಯಜಿತ್ ಮಗಳು ಹೇಳಿದ್ದೇನು?
ನಾನು ಗರ್ಭಿಣಿ. ಹೀಗಾಗಿ ನನಗೆ ಸಂಬಳ ಬರುತ್ತಿಲ್ಲ. ಕುಟುಂಬ ನಿರ್ವಹಣೆ ನೀವೇ ನೋಡಿಕೊಳ್ಳಿ ಎಂದು ನಮ್ಮ ತಾಯಿಯವರಿಗೆ ತಿಳಿಸಿದ್ದೆ. ಅದೇ ದಿನ ರಾತ್ರಿಯೇ ತಂದೆ ನನಗೆ ಕರೆ ಮಾಡಿದ್ದರು. ಮನೆಗೆ ಬರುವಂತೆ ಗದರಿದ್ದರು. ನಾನು ನನ್ನ ಪತಿಯ ಜತೆ ತಂದೆ ಮನೆಗೆ ಹೋಗಿದ್ದೆ. ಅಲ್ಲಿ ಹಣ ನೀಡುವಂತೆ ಮತ್ತೆ ಕೇಳಿದ್ದರು. ಆಗ ನನ್ನ ಪತಿ, ನಿಮಗೆ ನಾವು ಏಕೆ ಹಣ ಕೊಡಬೇಕು ಎಂದು ನನ್ನ ಅಣ್ಣನನ್ನು ಪ್ರಶ್ನೆ ಮಾಡಿದ್ದರು. ಅಲ್ಲಿಂದ ಸಮಸ್ಯೆ ಆರಂಭವಾಯಿತು, ಎಂದು ಸ್ವಲೇಹಾ ಮಾಹಿತಿ ನೀಡಿದ್ದಾರೆ.

ತಂದೆ-ತಾಯಿ ಮನೆ ನಿರ್ವಹಣೆಗೆ ನಾನೇ ಹಣ ನೀಡುತ್ತಿದ್ದೆ. ನನಗೆ ಮದುವೆಯಾದರೂ ಹಣ ಕೊಡುವುದನ್ನು ಮುಂದುವರಿಸಿದ್ದೆ. ಇದನ್ನ ಯಾವತ್ತೂ ನನ್ನ ಪತಿ ಪ್ರಶ್ನೆ ಮಾಡಿಲ್ಲ. ನಾನು ಗರ್ಭಿಣಿಯಾದ ಕಾರಣ ಈಗ ಹಣ ನೀಡಲು ಆಗಿಲ್ಲ. ಈ ಕಾರಣಕ್ಕೆ ನನ್ನ ವಿರುದ್ಧ ವಿಡಿಯೋ ಮಾಡಿದ್ದಾರೆ. ನಾನು ತಿಂಗಳಿಗೆ 4 ಲಕ್ಷ ಸಂಪಾದನೆ ಮಾಡುತ್ತಿದ್ದೇನೆಂದು ಹೇಳುತ್ತಿದ್ದಾರೆ. ಆದರೆ, ಯಾವ ಏರ್‌ಲೈನ್ಸ್‌ನವರು ಅಷ್ಟೊಂದು ಸಂಭಾವನೆ ಕೊಡುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ನನ್ನ ತಂದೆ ವಿಡಿಯೋ ಮಾಡಿ ಅಳುತ್ತಿದ್ದಾರೆ. ನಟರಾಗಿ ಅವರಿಗೆ ಅಳುವುದು ಸಹಜವಾಗಿ ಬರುತ್ತದೆ ಎಂದು ಸ್ವಲೇಹಾ ಹಂಗಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top