fbpx
ಸಮಾಚಾರ

“ಪೆಟ್ರೋಲ್ ಬೆಲೆ ಏರಿಕೆಯಾಗಲು ಹಿಂದಿನ ಸರ್ಕಾರವೇ ಕಾರಣ” ಕಾಂಗ್ರೆಸ್‌ ವಿರುದ್ಧ ಮೋದಿ ಕಿಡಿ!

ಪೆಟ್ರೋಲ್‌ ಬೆಲೆ ದಾಖಲೆಯ 100 ರೂ. ಗಡಿ ದಾಟಿದ ಬೆನ್ನಲ್ಲೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ತೈಲ ಬೆಲೆ ಸಂಬಂಧಿಸಿದಂತೆ ಮೌನ ಮುರಿದಿದ್ದಾರೆ. ಈಗಿನ ತೈಲ ದರ ಏರಿಕೆಗೆ ಹಿಂದಿನ ಸರ್ಕಾರದ ನೀತಿಯೇ ಕಾರಣ ಎಂದು ಮೋದಿ ಅವರು ಪರೋಕ್ಷವಾಗಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ತಮಿಳುನಾಡಿನಲ್ಲಿ ತೈಲ ಮತ್ತು ಅಡುಗೆ ಅನಿಲಕ್ಕೆ ಸಂಬಂಧಿಸಿದ ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಮೋದಿ, ‘ಭಾರತ 2019​-20ರಲ್ಲಿ ತೈಲದ ಅಗತ್ಯತೆಯ ಶೇ.85ರಷ್ಟುಹಾಗೂ ಅನಿಲದ ಅಗತ್ಯತೆಯ ಶೇ.53ರಷ್ಟನ್ನು ಆಮದು ಮಾಡಿಕೊಂಡಿದೆ. ನಾವು ತೈಲ ಆಮದಿನ ಮೇಲೆ ಯಾಕೆ ಇಷ್ಟೊಂದು ಅವಲಂಬಿತವಾಗಿದ್ದೇವೆ? ಹಿಂದಿನ ಸರ್ಕಾರಗಳು ತೈಲ ಆಮದು ಅವಲಂಬನೆ ತಗ್ಗಿಸಿದ್ದರೆ ಇಂದು ಮಧ್ಯಮ ವರ್ಗಕ್ಕೆ ಹೊರೆ ಆಗುತ್ತಿರಲಿಲ್ಲ’ ಎಂದರು.

‘ಇದೇ ವೇಳೆ ತಮ್ಮ ಸರ್ಕಾರ ಮಧ್ಯಮ ವರ್ಗದ ಕಳವಳದ ಬಗ್ಗೆ ಸಂವೇದನೆಯನ್ನು ಹೊಂದಿದೆ. ಪೆಟ್ರೋಲ್‌ನಲ್ಲಿ ಎಥನಾಲ್‌ ಪ್ರಮಾಣವನ್ನು ಹೆಚ್ಚಿಸುವುದಕ್ಕೆ ಆದ್ಯತೆ ನೀಡುತ್ತಿದೆ. ಕಬ್ಬಿನಿಂದ ಉತ್ಪಾದಿಸಿದ ಎಥನಾಲ್‌ನಿಂದ ತೈಲ ಆಮದನ್ನು ಕಡಿಮೆ ಮಾಡುವ ಜೊತೆಗೆ ರೈತರಿಗೆ ಪಾರ್ಯಯ ಆದಾಯ ಮೂಲವೂ ದೊರೆಯಲಿದೆ. ಅದೇ ರೀತಿ ಮರುಬಳಕೆ ಇಂಧನದ ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿಯೂ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ’ ಎಂದರು.

2030ರ ವೇಳೆಗೆ ಶೇ.40ರಷ್ಟುಇಂಧನ ದೇಶದಲ್ಲೇ ಉತ್ಪಾದನೆ ಆಗಲಿದೆ. ಅದೇ ರೀತಿ ತಮ್ಮ ಸರ್ಕಾರ ನೈಸರ್ಗಿಕ ಅನಿಲದ ಪ್ರಮಾಣವನ್ನು ಈಗಿರುವ ಶೇ.6.3ರಿಂದ ಶೇ.15ಕ್ಕೆ ಏರಿಸುವ ನಿಟ್ಟಿನಲ್ಲಿಯೂ ಕಾರ್ಯನಿರ್ವಹಿಸುತ್ತಿದೆ. ಇದರ ಜೊತೆ ನೈಸರ್ಗಿಕ ಅನಿಲವನ್ನು ಜಿಎಸ್‌ಟಿ ಅಡಿಯಲ್ಲಿ ತರುವುದಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top