fbpx
ಸಮಾಚಾರ

ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಮಂತ್ರಿ ಮಾಲ್​​ಗೆ ಬಿಗ್ ಶಾಕ್: ಬೀಗ ಜಡಿದ ಬಿಬಿಎಂಪಿ

ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಮಂತ್ರಿ ಮಾಲ್​​ಗೆ ಬಿಬಿಎಂಪಿ ಬಿಗ್​ ಶಾಕ್​ ಕೊಟ್ಟಿದೆ. 32 ಕೋಟಿ ತೆರಿಗೆ ಬಾಕಿ ಉಳಿಸಿರೋ ಕಾರಣಕ್ಕಾಗಿ ನಿನ್ನೆ ಒಂದು ದಿನ ಬಾಗಿಲು ಬಂದ್ ಮಾಡಿಸಿದ್ದ ಪಾಲಿಕೆ ನಾಲ್ಕು ದಿನಗಳ ಡೆಡ್​ಲೈನ್​​ ಕೊಟ್ಟಿದೆ. ಇಲ್ಲದೇ ಇದ್ದರೆ ಸೋಮವಾರದಿಂದ ಮಾಲ್​ ಬಂದ್ ಮಾಡೋದಾಗಿ ಪಶ್ಚಿಮ ವಲಯದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಕಂದಾಯಾಧಿಕಾರಿ ಪ್ರಸನ್ನ ಕುಮಾರ್, ಕಳೆದ ಮೂರು ವರ್ಷಗಳಿಂದ ತೆರಿಗೆ ಕಟ್ಟದೆ 32 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಈ ಹಿಂದೆ ತೆರಿಗೆ ಪಾವತಿಸುವಂತೆ ಬಿಬಿಎಂಪಿ ನೋಟಿಸ್ ಜಾರಿಗೊಳಿಸಿತ್ತು. ಆದರೂ ಎಚ್ಚೆತ್ತುಕೊಳ್ಳದ ಮಾಲ್ ಮಾಲೀಕರ ವಿರುದ್ಧ ಕಾನೂನು ಕ್ರಮವಾಗಿ ನಿನ್ನೆ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೂ ಮಾಲ್‍ಗೆ ಬೀಗ ಹಾಕಿದ್ದೇವೆ ಎಂದರು.

ಮಾಲ್‌ನ ಮಾಲೀಕರು ಆಸ್ತಿ ತೆರಿಗೆ ಪಾವತಿಗೆ ಮತ್ತೆ 15 ದಿನ ಸಮಯ ನೀಡುವಂತೆ ಮನವಿ ಮಾಡಿದರು. ಆದರೆ, ಈಗಾಗಲೇ ನೋಟಿಸ್‌ ನೀಡಿ 15 ದಿನ ಕಾಲಾವಕಾಶ ನೀಡಿದ ಹಿನ್ನೆಲೆಯಲ್ಲಿ ಮತ್ತೆ 15 ದಿನ ಅವಕಾಶ ನೀಡುವುದಕ್ಕೆ ಸಾಧ್ಯವಿಲ್ಲ. ಸೋಮವಾರದ ಒಳಗೆ ಆಸ್ತಿ ತೆರಿಗೆ ಪಾವತಿ ಮಾಡುವಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ಸೋಮವಾರದೊಳಗೆ ಆಸ್ತಿ ತೆರಿಗೆ ಪಾವತಿ ಮಾಡದಿದ್ದರೆ ಮಾಲ್‌ಅನ್ನು ಬಿಬಿಎಂಪಿ ವಶಕ್ಕೆ ಪಡೆಯಲಾಗುವುದು ಎಂದು ಪ್ರಸನ್ನ ಕುಮಾರ್‌ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top