fbpx
ಸಮಾಚಾರ

“ಸೆಲೆಬ್ರಿಟಿಗಳಿಗೆ ಇದೊಂದು ಶಾಪ, ಎಲ್ಲಾ ನಮ್ಮ ಹಣೆಬರಹ” ಜಮೀನಿನ ಗಲಾಟೆ ಬಗ್ಗೆ ಯಶ್ ಬೇಸರದ ಮಾತು

ಸ್ಯಾಂಡಲ್ ವುಡ್ ನಟ ಯಶ್ ಅವರ ತಾಯಿ-ತಂದೆ ಜೊತೆ ಗ್ರಾಮಸ್ಥರು ಜಗಳಕ್ಕೆ ಇಳಿದಿರುವ ಘಟನೆ ಸಂಬಂಧ ರಾಕಿಂಗ್ ಸ್ಟಾರ್ ಇಂದು ಹಾಸನ ಜಿಲ್ಲೆಯ ದುದ್ದ ಪೊಲೀಸ್ ಸ್ಟೇಷನ್ ಗೆ ಭೇಟಿ ನೀಡಿದ್ದರು. ಮಂಗಳವಾರ ಠಾಣೆಗೆ ಆಗಮಿಸಿದ ನಟ ಯಶ್ ಈ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದರು. ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಯಶ್.. ಸೆಲೆಬ್ರಿಟಿ ಆದವರಿಗೆ ಇದೊಂದು ಶಾಪ, ನಮ್ಮ ಹಣೆಬರಹ ಎಂದು ಬೇಸರದಿಂದ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರಾಕಿಂಗ್ ಸ್ಟಾರ್, ಸೆಲೆಬ್ರಿಟಿ ಆದವರಿಗೆ ಶಾಪ. ನಮ್ಮ ಹಣೆಬರಹ. ನಮ್ಮ ಬಗ್ಗೆ ಯಾರಾದ್ರು ಏನಾದ್ರು ಹೇಳಿದ್ರೆ ನೀವು ಹಾಕ್ತೀರಾ. ಅದನ್ನ ನೋಡಿ ನಾವು ತಿಳಿದುಕೊಳ್ಳಬೇಕು. ಕಷ್ಟಪಟ್ಟು ದುಡಿದು ಜಮೀನು ತೆಗೆದುಕೊಂಡಿದ್ದೇವೆ. ಅದಕ್ಕೆ ಕಾಂಪೌಂಡ್ ಹಾಕಿಸುತ್ತಿದ್ದೇವೆ. ಜಮೀನಿನ ಒಳಗೆ ಬಂದು ಕೆಲವರು ಏನೇನೋ ಮಾಡ್ತಾರೆ. ಕೆಲಸ ಮಾಡುವ ಹುಡುಗರ ಬಗ್ಗೆ ಮಾತಾಡ್ತಾರೆ. ಅಲ್ಲದೆ ಕೆಲಸ ಮಾಡುವವರು ಕೂಡ ನಮ್ಮ ಮನೆಯವರಂತೆ. ಆ ಹುಡುಗರ ಮೇಲೆ ಕೈ ಮಾಡಿದ್ರೆ ಹೇಗೆ..? ಅದಕ್ಕಾಗಿ ಬಂದು ಈಗ ಮಾತನಾಡುತ್ತಿದ್ದೇನೆ ಎಂದರು.

“ತಂದೆ ತಾಯಿಗೆ ಸಮಸ್ಯೆ ಆದಾಗ ಇಮೇಜ್​ ಮುಖ ನೋಡಿ ಸುಮ್ಮನೆ ಕೂರೋಕಾಗಲ್ಲ. ನಾನೂ ಅಪ್ಪ ಅಮ್ಮನಿಗೆ ಹುಟ್ಟಿದ ಮಗ ನಮ್ಮ ತಂದೆ ತಾಯಿಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಎಲ್ಲಿಂದಲೋ‌ ಬಂದವರು ಅಂತಾರಂತೆ, ನಾನು ಇಲ್ಲೇ ಹುಟ್ಟಿ ಬೆಳೆದವನು ಸಾರ್, ನಾನು ಹಾಸನದಲ್ಲೂ ಮಾಡ್ತೀನಿ, ಬೆಳಗಾವಿಯಲ್ಲೂ ಮಾಡ್ತೀನಿ, ಮಂಗಳೂರಲ್ಲೂ ಮಾಡ್ತೀನಿ, ನಾವು ಸೆಲೆಬ್ರಿಟಿ ಆಗೋದೇ ತಪ್ಪು ಎನ್ನುವ ಹಾಗಾಗಿದೆ” ಎಂದು ಗರಂ ಆಗಿದ್ದಾರೆ.

“ಜಮೀನಿನ ಒಳಗೆ ಬಂದು, ಅಕ್ಕ-ಪಕ್ಕ ಗಾಡಿ ನಿಲ್ಲಿಸಿಕೊಂಡು, ಮಾಡಬಾರದ ಕೆಲಸ ಮಾಡಿಕೊಂಡು, ಕುಡಿದು, ಕಾರ್ಡ್ಸ್ ಆಡುವುದನ್ನೆಲ್ಲ ನೋಡಿಕೊಂಡು ಸುಮ್ಮನೆ ಇರುವುದಕ್ಕೆ ಆಗಲ್ಲ. ಕೆಲಸ ಮಾಡುತ್ತಿರುವ ಹುಡುಗರ ಮೇಲೆ ಗಲಾಟೆ ಮಾಡಿದ್ದಾರೆ. ರಸ್ತೆ ಮಾಡುತ್ತಿರುವ ಜಾಗದಲ್ಲಿ ಮಾತುಕತೆ ಆಗಿದೆ. ಅದನ್ನು ಮಾತಲ್ಲೇ ಬಗೆಹರಿಸಿಕೊಳ್ಳಬೇಕು. ಹುಡುಗರ ಮೇಲೆ ಕೈ ಮಾಡಿದರೆ…? ನಮ್ಮ ಜೊತೆಗೆ ಕೆಲಸ ಮಾಡುವ ಹುಡುಗರು ನಮ್ಮ ಮನೆಯ ಹುಡುಗರಿದ್ದ ಹಾಗೆ..’ ಎಂದು ನಟ ಯಶ್ ಹೇಳಿದ್ದಾರೆ.

ಏನಿದು ಗಲಾಟೆ?
ರಾಕಿಂಗ್​ ಸ್ಟಾರ್​ ಯಶ್​ ಫಾರ್ಮ್​ಹೌಸ್​ ನಿರ್ಮಾಣಕ್ಕಾಗಿ ಜಿಲ್ಲೆಯ​ ತಿಮ್ಲಾಪುರದಲ್ಲಿ ಜಮೀನು ಖರೀದಿ ಮಾಡಿದ್ದರು. ಈ ಜಮೀನಿನ ಪಕ್ಕ ರಸ್ತೆ ನಿರ್ಮಾಣ ವಿಚಾರ ಕುರಿತಂತೆ ಇಲ್ಲಿನ ಸ್ಥಳೀಯರು ಹಾಗೂ ಯಶ್​ ಪೋಷಕರ ಮಧ್ಯೆ ಇಂದು ಬೆಳಗ್ಗೆ ವಾಗ್ವಾದ ನಡೆದಿದೆ. ಈ ವೇಳೆ ಮಾತು ವಿಕೋಪಕ್ಕೆ ತೆರಳಿದ್ದು, ಕೈ ಕೈ ಮೀಲಾಯಿಸುವ ಹಂತ ಮುಟ್ಟಿದೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ನಟ ಯಶ್ ಖುದ್ದು​ ಹಾಸನಕ್ಕೆ ಭೇಟಿ ನೀಡಿ, ಪೋಷಕರೊಂದಿಗೆ ದುದ್ದ ಪೊಲೀಸ್​ ಠಾಣೆಗೆ ಭೇಟಿ ನೀಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top